Saturday, September 21, 2024

ಪ್ರಾಯೋಗಿಕ ಆವೃತ್ತಿ

ಬುದ್ದತ್ವದೆಡೆಗೆ ಒಂದು ಪಯಣ…….

ವಿವೇಕಾನಂದ ಎಚ್.ಕೆ.

ಬುದ್ದ ಪ್ರಜ್ಞೆ,
ಬಸವ ಆಶಯ,
ಗಾಂಧಿ ಮಾರ್ಗ…..

ಅಂಗುಲಿಮಾಲ,
ಸಿದ್ದರಾಮಯ್ಯ,
ವಿಶ್ವೇಶ್ವರ ಭಟ್…..

” ದ್ವೇಷದ ಮಾರುಕಟ್ಟೆಯಲ್ಲಿ ನನ್ನದೂ ಒಂದು ಪ್ರೀತಿಯ ಚಿಕ್ಕ ಗೂಡಂಗಡಿ “

ಎಡ ಬಲ ಪಂಥದ ಕಟ್ಟಾ ಅನುಯಾಯಿಗಳಲ್ಲಿ ಕಳೆದ ಕೆಲವು ದಿನಗಳಿಂದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹಿರಿಯ ಪತ್ರಕರ್ತರಾದ ಶ್ರೀ ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ನಡೆಯುತ್ತಿರುವ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿರುವ ವಿಷಯದಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಎಲ್ಲರಿಗೂ ಮುಕ್ತವಾಗಿ ಅವರವರ ಅಭಿಪ್ರಾಯ ವ್ಯಕ್ತಪಡಿಸುವ ಸಂವಿಧಾನಾತ್ಮಕ ಸ್ವಾತಂತ್ರ್ಯದ ಅಡಿಯಲ್ಲಿ ನನ್ನದೂ ಒಂದು ಅಭಿಪ್ರಾಯ…….

ಸಿದ್ದರಾಮಯ್ಯನವರು ಪ್ರಗತಿಪರ ಮತ್ತು ಎಡಪಂಥೀಯ ಚಿಂತನೆಗಳ ಅತ್ಯುಗ್ರ ಪ್ರತಿಪಾದಕರು. ಹಾಗೆಯೇ ವಿಶ್ವೇಶ್ವರ ಭಟ್ಟರು ಬಲಪಂಥೀಯ ಚಿಂತನೆಗಳ ಪ್ರಬಲ ಪ್ರತಿಪಾದಕರು ಮತ್ತು ಅದರ ಪರವಾದ ಅನೇಕರಿಗೆ ದೊಡ್ಡ ಮಟ್ಟದ ವೇದಿಕೆ ಕಲ್ಪಿಸಿದವರು.

ಕಟ್ಟುತ್ತೇವಾ ನಾವು ಕಟ್ಟುತ್ತೇವಾ ನಾವು
ಕಟ್ಟೇ ಕಟ್ಟುತ್ತೇವಾ,
ಕಂಡ ಕನಸುಗಳ ಒಡೆದ ಮನಸುಗಳ ಕಟ್ಟೇ ಕಟ್ಟುತ್ತೇವಾ ಎಂದು ಸದಾ ಕ್ರಾಂತಿ ಗೀತೆ ಹಾಡುವ ಪ್ರಗತಿಪರರು……..

ಭಾರತವನ್ನು ವಿಶ್ವ ಗುರು ಮಾಡುತ್ತೇವೆ. ನಮಸ್ತೇ ಸದಾ ವತ್ಸಲೇ ಮಾತೃಭೂಮಿ ಎಂದು ಸದಾ ಪ್ರತಿಜ್ಞೆ ಮಾಡುವ. ಬಲಪಂಥೀಯರು, ಮನಃ ಪರಿವರ್ತನಾ ಅವಕಾಶವನ್ನು ಮಾತ್ರ ನಿರಾಕರಿಸಿ ಸದಾ ಕಡು ವಿರೋಧಿಗಳಾಗಿಯೇ ಇರಲು ಇಚ್ಚಿಸುವುದೇ ನಾಗರಿಕ ಸಮಾಜದ ಬಹುದೊಡ್ಡ ದುರಂತ. ಶಾಂತಿಯುತ ಸಮಾಜದ ಕಡು ವಿರೋಧಿಗಳ ರೀತಿ ವರ್ತಿಸುತ್ತಾರೆ.

ಈಗಿನ ಪ್ರಶ್ನೆ ಈ ವಿರೋಧಗಳ ಕೊನೆ ಎಂದು. ಅವರು ಇವರನ್ನು ಒಪ್ಪುವುದಿಲ್ಲ ಇವರು ಅವರನ್ನು ಒಪ್ಪುವುದಿಲ್ಲ. ಈ ದ್ವೇಷ ಮತ್ತು ಭಿನ್ನಾಭಿಪ್ರಾಯಗಳ ಲಾಭ ಪಡೆದ ರಾಜಕೀಯ ಪಕ್ಷಗಳು ಒಂದಕ್ಕೊಂದು ಪರ್ಯಾಯವಾಗಿ ಅಧಿಕಾರ ಹಿಡಿಯುತ್ತಾ ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸುವಲ್ಲಿ ವಿಫಲವಾಗಿ ಅಹಂಕಾರದಿಂದ ವರ್ತಿಸುತ್ತಿವೆ.‌ ಏನಾದರೂ ಒಂದು ಸಮನ್ವಯದ ಪರಿಹಾರ ಬೇಕಲ್ಲವೇ…..

ಇರಲಿ, ಮುಖ್ಯ ವಿಷಯ ಏನೆಂದರೆ ಸುಮಾರು 75 ವರ್ಷ ಆಸುಪಾಸು ವಯಸ್ಸಿನ ಸಿದ್ದರಾಮಯ್ಯ ಮತ್ತು ವಿಶ್ವೇಶ್ವರ ಭಟ್ಟರು ಯಾವ ವಿಷಯಕ್ಕೆ ಯಾವ ಸಂದರ್ಭದಲ್ಲಿ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ನಿರ್ಧರಿಸುವಷ್ಟು ಅನುಭವಿಗಳು ಮತ್ತು ಸ್ವತಂತ್ರರು. ಹಾಗೆಯೇ ಅದನ್ನು ಸಾರ್ವಜನಿಕವಾಗಿ ವಿಮರ್ಶಿಸುವ ಸ್ವಾತಂತ್ರ್ಯ ಜನ ಸಾಮಾನ್ಯರದು.

ಬುದ್ದ ಪ್ರಜ್ಞೆಯಲ್ಲಿ ಒಂದು ಮಹತ್ವದ ಅಂಶವೆಂದರೆ, ರಾಕ್ಷಸೀ ಪ್ರವೃತ್ತಿಯ ಅಂಗುಲಿಮಾಲ ಎಂಬ ವ್ಯಕ್ತಿಯನ್ನು ಬುದ್ದ ಮಾನವೀಯ ವ್ಯಕ್ತಿಯಾಗಿ ಪರಿವರ್ತಿಸುವ ಮನೋಬಲ. ಅದನ್ನು ಎಲ್ಲಾ ಪ್ರಗತಿಪರರು ಸದಾ ಉದಾಹರಿಸುತ್ತಾರೆ. ಹಾಗೆಯೇ ಬಸವ ತತ್ವದ ಸಮ ಸಮಾಜದಲ್ಲಿ ದ್ವೇಷಕ್ಕಿಂತ ಪರಿವರ್ತನೆಯೇ ಮುಖ್ಯ ಆಶಯ. ಗಾಂಧಿ ಮಾರ್ಗವೂ ಇದರ ಮುಂದುವರಿದ ಭಾಗವೇ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಿಕ ಆಶಯವೂ ಅದೇ.

ಇದನ್ನು ಮನಸಾರೆ ಮೆಚ್ಚುವ ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ಹೊಂದಿರುವ ನಾವು ಅನೇಕ ಬಲವಾದ ಕಾರಣಗಳ ನಡುವೆಯೂ ಸಿದ್ದರಾಮಯ್ಯನವರ ನಡೆಯನ್ನು ವಿರೋಧಿಸುತ್ತಾ ಸಮನ್ವಯದ ಹಾದಿಯನ್ನೇ ಮುಚ್ಚುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತದೆ. ಈ ಕಾರ್ಯಕ್ರಮದ ಕಾರಣದಿಂದಾಗಿ ಸಿದ್ದರಾಮಯ್ಯನವರು ವಿಶ್ವೇಶ್ವರ ಭಟ್ಟರ ನಿಲುವುಗಳನ್ನು ಒಪ್ಪಿದ್ದಾರೆ ಎಂದಾಗಲಿ ಅಥವಾ ವಿಶ್ವೇಶ್ವರ ಭಟ್ಟರು ಸಿದ್ದರಾಮಯ್ಯನವರ ವಿಚಾರಗಳನ್ನು ಒಪ್ಪಿದ್ದಾರೆ ಎಂದು ಅರ್ಥೈಸಬೇಕೆ ಅಥವಾ ಕನಿಷ್ಠ ಇಬ್ಬರ ನಡುವೆ ಒಂದು ಸಂಪರ್ಕ ಸೇತುವೆ ನಿರ್ಮಾಣವಾಗಿದೆ ಎಂದು ಸಮಾಧಾನ ಪಡಬೇಕೆ…….

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರಾಗಲಿ ಅಥವಾ ವಿಶ್ವೇಶ್ವರ ಭಟ್ಟರಾಗಲಿ ಎರಡು ಪಂಥಗಳ ಅತಿರೇಕಿಗಳ ಮಧ್ಯೆ ಒಂದಷ್ಟು ಪ್ರೀತಿ ಸೌಹಾರ್ದತೆಯ ಮಾತುಗಳನ್ನು ಆಡಿ ಸೈದ್ದಾಂತಿಕ ಭಿನ್ನಾಭಿಪ್ರಾಯಗಳ ನಡುವೆ ಮಾನವೀಯತೆಯನ್ನು ಮರೆಯದಿರೋಣ ಎಂಬ ಸಂದೇಶವನ್ನು ಅಲ್ಲಿ ನೆರೆದ ಜನರಿಗೆ ಹೇಳಿ ಅದು ಮಾಧ್ಯಮಗಳಲ್ಲಿ ರಾಜ್ಯಾದ್ಯಂತ ಪ್ರಸಾರವಾಗಿ ಎಲ್ಲೋ ಒಂದು ಅಣುವಿನಷ್ಟು ಬದಲಾವಣೆ ಸಾಧ್ಯವಾಗುವ ನಿರೀಕ್ಷಿಸಿದರೆ ತಪ್ಪೇ,
ಬದಲಾವಣೆಗೆ ಯಾರಾದರೂ ಮುನ್ನುಡಿ ಬರೆಯಬೇಕಲ್ಲವೇ…..

ಈ ದ್ವೇಷದ ಮಾರುಕಟ್ಟೆಯಲ್ಲಿಯೇ ಇನ್ನೂ ಎಷ್ಟು ದಿನ ನಾವು ವ್ಯಾಪಾರ ಮಾಡುವುದು. ನಮ್ಮ ಮಕ್ಕಳ ಕಾಲಕ್ಕೂ ಇದೇ ಅಂಗಡಿಗಳು ಮುಂದುವರಿಯಬೇಕೆ ಅಥವಾ ನಿಧಾನವಾಗಿ ಪ್ರೀತಿಯ ಅಂಗಡಿಗಳನ್ನು ತೆರೆಯುತ್ತಾ ಹೋಗಬೇಕೆ ಎಂದು ನಿರ್ಧರಿಸುವ ಸಮಯ ನಮ್ಮಂತ ಸಾಮಾನ್ಯ ಜನರದು.

ಅದಕ್ಕಾಗಿಯೇ ಶಾಂತಿ ಬಯಸುವ ಮನಸ್ಸುಗಳು ತಾವು ನಿಂತ ನೆಲೆಯಿಂದಲೇ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರೀತಿಯ ಅಂಗಡಿಗಳನ್ನು ಪ್ರಾರಂಭಿಸಿ. ದ್ವೇಷದ ಮಾರುಕಟ್ಟೆ ಇನ್ನು ಕೆಲವೇ ವರ್ಷಗಳಲ್ಲಿ ಮಾನವೀಯತೆಯ ಮಾರುಕಟ್ಟೆಯಾಗಿ ಖಂಡಿತ ಬದಲಾಗುತ್ತದೆ. ಕೆಲವರು ಇದು ಎಂದೂ ಸಾಧ್ಯವಾಗದ ಕನಸು ಎಂದು ಅಪಹಾಸ್ಯ ಮಾಡಬಹುದು, ನಮ್ಮನ್ನು ಎಡಬಿಡಂಗಿಗಳು, ಅವಕಾಶವಾದಿಗಳು, ಸಮಯಸಾಧಕರು, ಅಸ್ಪಷ್ಟ ನಿಲುವಿನವರು ಎಂದು ಟೀಕಿಸಬಹುದು, ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಅಪಹಾಸ್ಯವನ್ನು, ಟೀಕೆಗಳನ್ನು ಸಹಿಸುತ್ತಾ, ಬುದ್ದತ್ವದೆಡೆಗೆ ಒಂದು ಪಯಣ……….

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!