Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಬೆಳ್ಳೂರು ಗ್ರಾ.ಪಂ.ನಲ್ಲಿ ಲಕ್ಷಾಂತರ ರೂ. ಅಕ್ರಮ ಅವ್ಯವಹಾರ : ಪ್ರತಿಭಟನೆ

ಮದ್ದೂರು ತಾಲೂಕಿನ ಕೆ. ಬೆಳ್ಳೂರು ಗ್ರಾ.ಪಂ.ನಲ್ಲಿ ಕಾಮಗಾರಿಗಳನ್ನು ಕೈಗೊಳ್ಳದೇ ನಕಲಿ ಬಿಲ್ಗಳನ್ನು ಸೃಷ್ಠಿಸಿ ಲಕ್ಷಾಂತರ ರೂ.ಹಣ ದುರ್ಬಳಕೆ ಮಾಡಿಕೊಂಡಿರುವ ಗ್ರಾ.ಪಂ. ಮಾಜಿ ಅಧ್ಯಕ್ಷ ಮತ್ತು ಪಿಡಿಓ ವಿರುದ್ಧ ಗ್ರಾ.ಪಂ. ಸದಸ್ಯರೂ ಹಾಗೂ ಗ್ರಾಮಸ್ಥರು ಗ್ರಾ.ಪಂ.ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕೆಲ ಗ್ರಾ.ಪಂ. ಸದಸ್ಯರು ಹಾಗೂ ಸಾರ್ವಜನಿಕರು ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಪಿಡಿಓ ವಿರುದ್ಧ ಘೋಷಣೆ ಕೂಗುವ ಜತೆಗೆ ಕೂಡಲೇ ಜಿಲ್ಲಾಡಳಿತವು ಅಕ್ರಮ ಅವ್ಯವಹಾರವನ್ನು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದರು.

ಈ ಸಂರ್ಭದಲ್ಲಿ ಗ್ರಾ.ಪಂ ಸದಸ್ಯೆ ದಿವ್ಯರಾಮಚಂದ್ರಶೆಟ್ಟಿ ಮಾತನಾಡಿ, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಗ್ರಾ.ಪಂ. ಅಧ್ಯಕ್ಷರಾಗಿದ್ದ ಸುಂದರಮ್ಮ ಹಾಗೂ ಜಯಲಕ್ಷ್ಮಮ್ಮ ಮತ್ತು ಪಿಡಿಓ ಜಿ.ಹೇಮಾ ಅವರು ನಕಲಿ ದಾಖಲೆಗಳನ್ನು ಸೃಷ್ಠಿಸಿ 60 ಲಕ್ಷ.ಕ್ಕೂ ಅಧಿಕ ಹಣವನ್ನು ದುರ್ಬಳಕೆ ಮಾಡಿದ್ದು ಈ ಸಂಬಂಧ ಮೇಲಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಜರುಗಿಸಿಲ್ಲವೆಂದು ಆರೋಪಿಸಿದರು.

ವಿಕಲಚೇತನರ ಹೆಸರಿನಲ್ಲಿ ಶೌಚಾಲಯ ನಿರ್ಮಿಸಿರುವುದಾಗಿ ಹೇಳಿ ಹಣ ಬಿಡುಗಡೆಮಾಡಿಸಿಕೊಂಡಿದ್ದಾರೆ. ಇದರ ಜೊತೆಗೆ ಲಕ್ಷಾಂತರ ರೂ.ವ್ಯಯ ಮಾಡಿ ಖರೀದಿ ಮಾಡಿರುವ ಯಾವುದೇ ಉಪಕರಣಗಳು ಗ್ರಾ.ಪಂ. ಕಚೇರಿಯಲ್ಲಿ ಇಲ್ಲವಾಗಿದ್ದು, ಗ್ರಾ.ಪಂ. ವ್ಯಾಪ್ತಿ ಎಲ್ಲೆಡೆ ಅಶುಚಿತ್ವ ತಾಂಡವವಾಡುವ ಜತೆಗೆ ನರೇಗಾ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿದ್ದು ಕೂಡಲೇ ಅವ್ಯವಹಾರವನ್ನು ಸೂಕ್ತವಾಗಿ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

14 ಮತ್ತು 15ನೇ ಹಣಕಾಸು ಯೋಜನೆಯಡಿಯ ವಿಶೇಷ ಅನುದಾನ ವಿದ್ಯುತ್ ಉಪಕರಣಗಳು, ಸ್ವಚ್ಚತೆ, ಶೌಚಾಲಯ, ಬೀದಿ ದೀಪ, ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ಮತ್ತು ತುಂಡು ಕಾಮಗಾರಿಗಳ ಹೆಸರಲ್ಲಿ ಹಣ ದುರ್ಬಳಕೆ ಮಾಡಿಕೊಳ್ಳುವ ಜತೆಗೆ ತಮ್ಮ ಪುತ್ರನ ಹೆಸರಿನಲ್ಲೇ ವ್ಯವಹಾರ ನಡೆಸಿರುವುದಾಗಿ ಗುಡುಗಿದರು.
ಕೂಡಲೇ ಅಕ್ರಮಗಳನ್ನು ತನಿಖೆ ನಡೆಸುವಂತೆ ತಪ್ಪಿದಲ್ಲಿ ಸ್ಥಳೀಯ ಗ್ರಾಮಸ್ಥರ ಜತೆಗೂಡಿ ನಿರಂತರ ಧರಣೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದು ಕೂಡಲೇ ಮೇಲಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ನಟರಾಜು, ದಿವ್ಯರಾಮಚಂದ್ರಶೆಟ್ಟಿ, ಮಾದೇಶ, ಸವಿತ, ಶಿವಸ್ವಾಮಿ, ಸತೀಶ್ಚಂದ್ರ, ಜಯಮ್ಮ, ಮುಖಂಡರಾದ ಮಹೇಶ್, ರವಿ, ಜವರೇಗೌಡ, ಡಿ.ಪಿ. ಸ್ವಾಮಿ, ಪುಟ್ಟೇಗೌಡ, ಬಿ.ಟಿ. ಕೃಷ್ಣ, ವಿ.ಸಿ. ಪ್ರಸನ್ನ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!