Thursday, September 19, 2024

ಪ್ರಾಯೋಗಿಕ ಆವೃತ್ತಿ

ತಮಿಳು ಕಾಲೋನಿ ಜಾಗವನ್ನು ಕೊಳಚೆ ಅಭಿವೃದ್ದಿ ಮಂಡಳಿಗೆ ಹಸ್ತಾಂತರಿಸಲು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಮದ್ದೂರಿನ ತಮಿಳು ಕಾಲೋನಿಯ ಜಾಗವನ್ನು ಕೊಳಚೆ ಅಭಿವೃದ್ದಿ ಮಂಡಳಿಗೆ ಹಸ್ತಾಂತರಿಸಿ, ಇಲ್ಲಿನ ವಾಸಿಗಳಿಗೆ ಹಕ್ಕುಪತ್ರ ವಿತರಿಸಿ, ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಶ್ರಮಿಕ ನಿವಾಸಿಗಳು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತದಲ್ಲಿ ನಡೆದ ಧರಣಿಯಲ್ಲಿ ಜಿಲ್ಲಾಡಳಿತ ತಕ್ಷಣವೇ ಮದ್ದೂರು ತಮಿಳುಕಾಲೋನಿಯ ಜಾಗವನ್ನು ಕೊಳಚೆ ಅಭಿವೃದ್ಧಿ ಮಂಡಳಿಗೆ ಹಸ್ತಾಂತರ ಮಾಡಬೇಕು. ತಮಿಳು ಕಾಲೋನಿಯ 114 ವಾಸಿಸುವ ಕುಟುಂಬಗಳನ್ನು ಸಮೀಕ್ಷೆ ಮಾಡಿ ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕು ಹಾಗೂ ಮುಂದೆ ಯಾವುದೇ ಸಂಘ ಸಂಸ್ಥೆಗಳಿಂದ, ಭೂ-ವಿರೋಧಿ ಶಕ್ತಿಗಳಿಂದ, ಬಲಾಢ್ಯರಿಂದ ನಿವಾಸಿಗಳಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.

ದೇಶ ಸ್ವಚ್ಛ ಮಾಡುವ ಜನತೆಗೆ, ನಗರ ಕಟ್ಟಲು ದುಡಿಯುವ ಜನತೆಗೆ ವಾಸಕ್ಕೊಂದು ಸೂರಿಲ್ಲ. ಈ ದೇಶದ ಪ್ರಜೆಗಳು ನಾವು, ನಮಗೂ ಎಲ್ಲರಂತೆ ಬದುಕುವ ಸಂವಿಧಾನ ಬದ್ಧ ಹಕ್ಕು ಬೇಕೇಬೇಕೆಂದು ಅಗ್ರಹಿಸಿದರು.

ಮದ್ದೂರಿನ ಕೆ.ಇ.ಬಿ ಮುಂಭಾಗದ ಪ್ರದೇಶ ಸರ್ಕಾರದ ಜಾಗವಾಗಿದ್ದು, ಈ ಜಾಗವನ್ನು ಕರ್ನಾಟಕ ಕೊಳಚೆ ಪ್ರದೇಶಗಳ ಕಾಯ್ದೆ 1973ರ ಅಧಿನಿಯಮದ (3)ರ ಅಡಿಯಲ್ಲಿ ಸ್ಲಂ ಪ್ರದೇಶ ಎಂದು ಘೋಷಣೆಯಾಗಿದ್ದು, ಸ್ಥಳೀಯ ತಾಲ್ಲೂಕು ಆಡಳಿತ ಸ್ಥಳವನ್ನು ಹಸ್ತಾಂತರ ಮಾಡಿಕೊಂಡು ಹಕ್ಕುಪತ್ರ ನೀಡಿ ವಸತಿ ಯೋಜನೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾಡಳಿತ ತುರ್ತು ಕ್ರಮ ವಹಿಸದಿದ್ದರೆ ವಸತಿ ಸಚಿವರನ್ನು ಭೇಟಿಯಾಗಿ ಸಮಸ್ಯೆ ಇತ್ಯರ್ಥಕ್ಕೆ ಮನವಿ ಮಾಡಲಾಗುವುದು, ಅಲ್ಲಿಯೂ ಸಹ ನ್ಯಾಯ ದೊರಕದಿದ್ದರೆ ಸೆ. 1 ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು, ಕರ್ನಾಟಕ ಜನಶಕ್ತಿಯ ನಗರಕೆರೆ ಸಿದ್ದರಾಜು, ವೈದುನ, ಪುಟ್ಟಮ್ಮ, ಕುಮಾರಿ, ರಘು, ಚಂದ್ರ, ವೀರಮ್ಮ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!