Thursday, September 19, 2024

ಪ್ರಾಯೋಗಿಕ ಆವೃತ್ತಿ

ಸುಪ್ರೀಂಕೋರ್ಟ್ ಆದೇಶಕ್ಕೆ ರೈತರು ಆತಂಕಕ್ಕೆ ಒಳಗಾಗುವುದು ಬೇಡ: ಶಾಸಕ ರಮೇಶ್ ಬಾಬು

ತಮಿಳುನಾಡಿಗೆ 15 ದಿನ 5000 ಕ್ಯೂಸೆಕ್ ನೀರು ಹರಿಸಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಿಂದ ರೈತರು ಆತಂಕಕ್ಕೆ ಒಳಗಾಗಬಾರದು. ನಮ್ಮ ಸರ್ಕಾರ ರೈತರ ಜೊತೆಗಿದ್ದು ಕಟ್ಟು ಪದ್ಧತಿಯಲ್ಲಿ ರೈತರ ಬೆಳೆಗೆ ನೀರು ಕೊಡಲಿದೆ ಎಂದು ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿರುವ ಜನರಿಗೆ ಕುಡಿಯುವ ನೀರು ಹಾಗೂ ರೈತರ ಬೆಳೆಗೆ ನೀರು ಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ರೈತ ಬಾಂಧವರು ಆತಂಕ ಪಡುವುದು ಬೇಡ. ರೈತ ಬಾಂಧವರು, ಜನರು ನಡೆಸುವ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಮೂಲಕ ನಮ್ಮ ಧ್ವನಿಯನ್ನು ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರಕ್ಕೆ ತಲುಪಿಸುವಂತೆ ನೋಡಿಕೊಳ್ಳಬೇಕಿದೆ ಎಂದರು.

ನಮ್ಮ ಸರ್ಕಾರ ಮತ್ತು ವಕೀಲರು ಸೇರಿ ಪ್ರತಿದಿನ 24,000 ನೀರು ಬಿಡಬೇಕು ಎಂದು ತಿಳಿಸಿದ್ದ ಕಾವೇರಿ ನೀರು ನಿರ್ವಹಣಾ ಸಮಿತಿಯ ಸದಸ್ಯರಿಗೆ ಮನವರಿಕೆ ಮಾಡಿದ ನಂತರ 10,000 ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿದರು. ಸರ್ಕಾರ ಹಾಗೂ ನಮ್ಮ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಇಲ್ಲದಿದ್ದರೆ ಪ್ರತಿದಿನ 24,000 ನೀರು ಬಿಡಬೇಕಿತ್ತು ಎಂದು ತಿಳಿಸಿದರು.

ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರು, ಹಾರಂಗಿ, ಗೊರೂರು, ಹೇಮಾವತಿ, ಕನ್ನಂಬಾಡಿ ಜಲಾಶಯದಿಂದ ಸೋರಿಕೆಯಾಗುವ ನೀರೇ 3 ರಿಂದ 4 ಸಾವಿರ ಕ್ಯೂಸೆಕ್ ಆಗುತ್ತದೆ. ಕೆ ಆರ್ ಎಸ್ ಜಲಾಶಯದಿಂದ 1,000 ಕ್ಯೂಸೆಕ್ ನೀರು ಮಾತ್ರ ಬಿಡಲಾಗುತ್ತಿದೆ. ರೈತರು ಪ್ರತಿದಿನ ಕೆಆರ್ ಎಸ್ ನಿಂದಲೇ 5 ಸಾವಿರ ಕ್ಯೂಸೆಕ್ ನೀರು ಬಿಡುತ್ತಿದ್ದಾರೆ ಎಂದು ಆತಂಕ ಗೊಳ್ಳುವುದು ಬೇಡ. ನಮ್ಮ ಸರ್ಕಾರ ರೈತರ ಹಾಗೂ ಜನಸಾಮಾನ್ಯರ ಹಿತ ಕಾಯಲು ಕಾಯಲಿದೆ ಎಂದರು.

ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ

ಈ ಹಿಂದೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಳೆ ಬರುವ ಆಶಾಭಾವನೆಯಿಂದ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವ ತೀರ್ಮಾನವನ್ನು ಮಾಡಿದ್ದೆವು. ಆದರೆ ಜೂನ್, ಜುಲೈ ತಿಂಗಳಿನಲ್ಲಿ ಮಳೆ ಬರಲಿಲ್ಲ. ಆಗಸ್ಟ್ ತಿಂಗಳಲ್ಲಿ ಮಳೆ ಬಂದರೂ ಸೆಪ್ಟಂಬರ್ ನಲ್ಲಿ ಮಳೆ ಬೀಳಲಿಲ್ಲ. ಇದರಿಂದಾಗಿ ಸಿಡಬ್ಲ್ಯೂಎಂಎ ಹಾಗೂ ಸಿಡಬ್ಲ್ಯು ಆರ್ ಸಿ ಸಮಿತಿ ಹೇಳಿದ ಹಾಗೆ ತಮಿಳುನಾಡಿಗೆ ನೀರು ಹರಿಸಲು ಆಗಲಿಲ್ಲ. ಕಾವೇರಿ ಜಲಾನಯದ ವ್ಯಾಪ್ತಿಯಲ್ಲಿ ಮಳೆಯ ಅಭಾವವಾಗಿದ್ದರಿಂದ ಸಿಡಬ್ಲ್ಯೂಎಂಎ ಹೇಳಿದಂತೆ 24,000 ಕ್ಯೂಸೆಕ್ ನೀರು ಹರಿಸಲು ಸಾಧ್ಯವಾಗಿಲ್ಲ. ತಮಿಳುನಾಡು ಸರ್ಕಾರ ಸಂಕಷ್ಟದ ಸಂದರ್ಭದಲ್ಲೂ ನೀರು ಹರಿಸಬೇಕೆನ್ನುವ ವಾದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ವಪಕ್ಷ ಸಭೆಯನ್ನು ಕರೆದು ಚರ್ಚಿಸಿದ್ದೇವೆ. ನಂತರ ದೆಹಲಿಯಲ್ಲಿ ಸರ್ವಪಕ್ಷಗಳ ಸಂಸದರ ಸಭೆ ನಡೆಸಿ ಕಾವೇರಿ ನದಿ ನೀರು ಬಿಡದಂತೆ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೆ ಸುಪ್ರೀಂಕೋರ್ಟ್ ನೀರು ಹರಿಸುವಂತೆ ಆದೇಶ ನೀಡಿರುವುದು ಆಘಾತ ತಂದಿದೆ. ವಿರೋಧ ಪಕ್ಷಗಳು ನೀರು ಹರಿಸಬಾರದೆಂದು ಹೇಳುವುದು ಸಹಜ. ಆದರೆ ಎಲ್ಲಾ ಸರ್ಕಾರಗಳು ಕಾನೂನಾತ್ಮಕವಾಗಿಯೇ ನೀರು ಹರಿಸಿವೆ ಎಂದರು.

ಕೇಂದ್ರ ಮಧ್ಯಪ್ರವೇಶಿಸಲಿ ಪ್ರಧಾನಿ ನರೇಂದ್ರ ಮೋದಿಯವರು ಉಭಯ ಸರ್ಕಾರಗಳ ಪ್ರತಿನಿಧಿಗಳನ್ನು ಕರೆಸಿ, ಮಾತುಕತೆಯ ಮೂಲಕ ಕಾವೇರಿ ವಿವಾದವನ್ನು ಬಗೆಹರಿಸಲು ಪ್ರಯತ್ನಿಸಬೇಕು.ಸಿಎಂ ಸಿದ್ದರಾಮಯ್ಯನವರು ಪ್ರಧಾನ ಮಂತ್ರಿ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದರೂ ಇನ್ನೂ ನೀಡಿಲ್ಲ. ಕೇಂದ್ರ ಸರ್ಕಾರ ಶೀಘ್ರ ಉಭಯ ಸರ್ಕಾರಗಳ ಪ್ರತಿನಿಧಿಗಳನ್ನು ಕರೆಸಿ ಮಾತುಕತೆಗೆ ವೇದಿಕೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಕಾನೂನಾತ್ಮಕವಾಗಿಯೇ ನೀರು ಹರಿಸಲೇಬೇಕಾದ ಒತ್ತಡದಲ್ಲಿ ಸರ್ಕಾರ

ಶಾಸಕ ಗಣಿಗ ರವಿಕುಮಾರ್ ಮಾತನಾಡಿ, ನಮ್ಮ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿದ ನಂತರ, ನೀರು ಬಿಡಲ್ಲ ಎಂದು ಖಡಕ್ಕಾಗಿ ನಿರ್ಣಯವನ್ನು ತೆಗೆದುಕೊಂಡು ಅದರಂತೆ ತಮಿಳುನಾಡಿಗೆ ನೀರು ನಿಲ್ಲಿಸಿದ್ದೆವು.. ಆದರೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶದಂತೆ ನಡೆದುಕೊಳ್ಳದಿದ್ದರೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿಯೇ ನೀರು ಹರಿಸಲೇಬೇಕಾದ ಒತ್ತಡಕ್ಕೆ ಸರ್ಕಾರ ಒಳಗಾಗಬೇಕಾಯಿತು ಎಂದರು

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ಕೇಳಿದರು.ಅವರು ಇನ್ನೂ ಸಮಯ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಇಂದಿನಿಂದ ದೆಹಲಿಯಲ್ಲಿ ಮೂರು ದಿನಗಳ ಕಾಲ ಮಾತುಕತೆ ನಡೆಸಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಕೇಳಿದರೆ ಪ್ರಧಾನಿ ಮೋದಿಯವರು ಸಮಯ ನೀಡುತ್ತಾರೆ. ಹಾಗಾಗಿ ದೇವೇಗೌಡರೇ ಕಾವೇರಿ ವಿಚಾರವನ್ನು ಪ್ರಧಾನಿಯವರ ಬಳಿ ಚರ್ಚಿಸ ಬೇಕೆಂದು ಮನವಿ ಮಾಡಿದರು‌.

ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲಿ ಸುದ್ದಿಗೋಷ್ಠಿ ಸಭೆ ಮಾಡುವುದನ್ನು ಬಿಟ್ಟು, ದೆಹಲಿಯಲ್ಲಿ ಎಲ್ಲಾ ಸಂಸದರ ಜೊತೆಗೂಡಿ ಮೋದಿಯವರನ್ನು ಭೇಟಿ ಮಾಡಿ ಕಾವೇರಿ ವಿಚಾರದಲ್ಲಿ ಮಧ್ಯಪ್ರವೇಶಸುವಂತೆ ಮನವಿ ಮಾಡಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್, ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್,ಮುಖಂಡರಾದ ರುದ್ರಪ್ಪ, ಸಿ.ಎಂ. ದ್ಯಾವಪ್ಪ ಸುರೇಶ್, ನಗರಸಭಾ ಸದಸ್ಯ ಶ್ರೀಧರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!