Thursday, September 19, 2024

ಪ್ರಾಯೋಗಿಕ ಆವೃತ್ತಿ

ಅತಿಥಿ ಉಪನ್ಯಾಸಕರು ಮತ್ತು ಸರಕಾರದ ಧೋರಣೆಗಳು

✍️ ನಾರಾಯಣ್ ಬೆಳಗುರ್ಕಿ
     ಹೋರಾಟಗಾರರು, ಸಿಂಧನೂರು

ನಾನು ಅತಿಥಿ ಉಪನ್ಯಾಸಕ ಆಗಿರುವುದರಿಂದ ಅತಿಥಿ ಉಪನ್ಯಾಸಕರು ಎದುರಿಸುವ ಸಮಸ್ಯೆಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಅರಿವು ಇರುವ ಹಿನ್ನಲೆಯಲ್ಲಿ ಹಾಗೂ ಬೇರೆ ಉಪನ್ಯಾಸಕರ ಅನುಭವಗಳು ನನ್ನ ಅನುಭವಗಳು ಸೇರಿಕೊಂಡು ನಮ್ಮ ಜೀವನದ ಅಳ ಅಗಲವನ್ನ ಕುರಿತು ಇಲ್ಲಿ ಹಂಚಿಕೊಳ್ತಿದ್ದೇನೆ.

ಉನ್ನತ ಶಿಕ್ಷಣ ಇಲಾಖೆಯು ತನ್ನ ಅಧೀನದಲ್ಲಿರುವ ಕಾಲೇಜಗಳನ್ನು ನಡೆಸುವ ಪರಿಯನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಅದರಲ್ಲಿ ತುಂಬಾ ನೋವು, ಸಂಕಟ ಯಾತನೆಗಳನ್ನು ಅನುಭವಿಸುವ ಸಾವಿರಾರು ಅತಿಥಿ ಉಪನ್ಯಾಸಕರ ದುಃಖದ ಸೇವೆಯನ್ನು ಈ ಇಲಾಖೆ ಪಡೆದುಕೊಳ್ಳುತ್ತಿದೆ. ಕಾಲಕಾಲಕ್ಕೆ ಸರಿಯಾಗಿ ಪ್ರಾಧ್ಯಾಪಕರ ನೇಮಕಾತಿ ಮಾಡದೆ ಕೇವಲ ಅತಿಥಿ ಉಪನ್ಯಾಸಕರ ಮೇಲೆಯೇ ಆಧಾರವಾಗಿ ಉನ್ನತ ಶಿಕ್ಷಣ ನಡೆಸುತ್ತಿದೆ. ಇಲಾಖೆಯ ವ್ಯಾಪ್ತಿಗೆ ಒಳಪಡುವ ಕಾಲೇಜುಗಳಲ್ಲಿ ಬೇಕಾಬಿಟ್ಟಿ ತರಗತಿಗಳನ್ನ ನಡೆಸುತ್ತಿದೆ. ಇದರಿಂದ ವಿದ್ಯಾರ್ಥಿಗಳಾಗಲಿ ಅವರ ಗುಣಮಟ್ಟದ ಕಲಿಕೆಗಳಿಗಾಗಲಿ ಯಾವುದೇ ರೀತಿಯಿಂದ ಪ್ರಯೋಜನವಿಲ್ಲ. ಯಾಕೆಂದರೆ ತರಗತಿಗಳು ನಡೆಸುತ್ತಾ ಕೇವಲ ತರಗತಿಗಳು ನಡೆದರೆ ಸಾಕು ಎಂದು ನಿರ್ಧರಿಸಿದೆ. ಈ ಸೀಮಿತ ಬೋಧನೆ ಮೂಲಕ ತನ್ನ ಜವಾಬ್ದಾರಿಯನ್ನು ಕೈತೊಳೆದಕೊಂಡು ಸುಮ್ಮನಾಗಿದೆ. ಅತಿಥಿ ಉಪನ್ಯಾಸಕರ ಸೇವೆ ಯಿಂದ ಉಂಟಾಗುವ ಗಂಭೀರ ಸ್ವರೂಪದ ಪರಿಣಾಮಗಳ ಬಗ್ಗೆ ಅಗಲಿ, ಉಪನ್ಯಾಸಕರ ಜೀವನದ ಬಗ್ಗೆ ಆಗಲಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆಗಲಿ ಕಿಂಚಿತ್ತೂ ಕಾಳಜಿ ಈ ಸರಕಾರಗಳಿಗೆ ಇಲಾಖೆಗೆ ಇದ್ದಂತೆ ಕಾಣುತ್ತಿಲ್ಲ.

ನಿರುದ್ಯೋಗವನ್ನು ಮುಂದಿಟ್ಟುಕೊಂಡು ಇಂತ ರೀತಿಯಲ್ಲಿ ವಿದ್ಯಾರ್ಥಿ ಉಪನ್ಯಾಸಕರನ್ನು ಹೀನಾಯವಾಗಿ ನಡೆಸಿಕೊಳ್ಳುವುದು ಎಷ್ಟು ಸರಿ? ಕೇವಲ ತರಗತಿಗಳು ನಡೆದರೆ ಸಾಕೇ? ಇದು ಸರಿಯಾದ ಬೋಧನಾ ಕ್ರಮ ಆಗಿರುವುದಿಲ್ಲ.ಇದರಲ್ಲಿ ಸಂಶೋಧನಾತ್ಮಕ ಆಯಾಮ ಮತ್ತು ಬೌದ್ಧಿಕ ವಿಕಸನದ ಪ್ರಯತ್ನ ಅತ್ಯಂತ ಕಡಿಮೆ ಇರುತ್ತದೆ. ಕಾರಣ ಅತಿಥಿ ಉಪನ್ಯಾಸಕರ ಬದುಕು ಅಷ್ಟೇ ದಿವಾಳಿತನದಿಂದ ಕೂಡಿರುವುದೇ ಇದಕ್ಕೆ ಕಾರಣ.
ಅತಿಥಿ ಉಪನ್ಯಾಸಕರು ದೈನಂದಿನ ಖರ್ಚುಗಳನ್ನು ನಿಭಾಯಿಸಲಾಗದೆ ಮಾನಸಿಕ ತೊಳಲಾಟದಲ್ಲಿ ನಿತ್ಯ ಜೀವನ ನಡೆುತ್ತಿರುವುದು ಮುಖ್ಯ ಕಾರಣ. ಉಪನ್ಯಾಸಕರಿಗೆ ಇದೊಂದು ರೀತಿಯಲ್ಲಿ ನಿತ್ಯ ನರಕ.

ಇನ್ನೂ ಈ ಉಪನ್ಯಾಸಕರ ಆರ್ಥಿಕ ಅಭಿವೃದ್ಧಿ ಜೀವನದ ಸಾಮಾನ್ಯ ಭದ್ರತೆ ನೆಮ್ಮದಿ ಇವರಿಗೆ ಸಾದ್ಯವಿಲ್ಲ. ಮದುವೆ, ಆಸ್ಪತ್ರೆ , ಮನೆಯಂತಹ ಸೌಕರ್ಯಗಳು ಹೊಂದುವುದು ಕನಸಿನ ಮಾತೇ ಸರಿ. ಒಂದು ಸಣ್ಣ ಮನೆಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲದ , ಮಕ್ಕಳಿಗೆ ಸರಿಯಾಗಿ ವಿದ್ಯಾಭ್ಯಾಸ ಕೊಡಿಸಲಾಗದ , ಹೆಂಡತಿ ಮತ್ತು ಮಕ್ಕಳ ಜೀವನ ನಿರ್ವಹಣೆ ದುಸ್ತರವಾಗಿರುವ ಪರಿಸ್ಥಿತಿ ಈ ಅತಿಥಿ ಉಪನ್ಯಾಸಕರದಾಗಿದೆ.
ಇವರ ಮನೆಯಲ್ಲಿ ಶಾಂತಿ ಇರುವುದಿಲ್ಲ. ಇವರು ತೆಗೆದುಕೊಂಡಿರುವ ಕೈ ಸಾಲವನ್ನ ನಿಗದಿತ ಸಮಯಕ್ಕೆ ಸರಿಯಾಗಿ ಹಿಂದಿರುಗಿಸಲು ಶಕ್ತರಿರುವುದಿಲ್ಲ. ಇದರಿಂದ ತುಂಬಾ ಅಪಮಾನ ,ಮುಜುಗರ ,ಯಾತನೆ ಮಾನಸಿಕ ಸಂಕಷ್ಟಗಳನ್ನು ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಇಂತಹ ಉಪನ್ಯಾಸಕರು ಆರೋಗ್ಯ ಕೈ ಕೊಟ್ಟಾಗ ಹಾಗೂ ಖರ್ಚಿಗೆ ಹಣವಿಲ್ಲದೆ ನಿಭಾಯಿಸಲು ಸಾಧ್ಯವಿಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ..

ಮಾನಸಿಕವಾಗಿ ನೊಂದು ಖಿನ್ನತೆ ಆವರಿಸುತ್ತದೆ. ಈ ಖಿನ್ನತೆ ಉದ್ವೇಗದಿಂದ ಅನೇಕ ಉಪನ್ಯಾಸಕರ ಆರೋಗ್ಯ ಹದಗೆಟ್ಟಿದೆ. ಸರಕಾರ ದಿನಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ಇವರು ಬೆರೆ ಉದ್ಯೋಗ ಮಾಡಲು ಬಾರದೆ, ಇತ್ತ ಇಂತಹ ತೊಳಲಾಟದ ಜೀವನ ಮಾಡಲಾಗದೆ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಕಡಿಮೆ ವೇತನ ಒಂದು ಕಾರಣವಾದರೆ ಸರಿಯಾದ ಸಮಯಕ್ಕೆ ವೇತನ ಕೊಡದಿರುವುದು ಮುಖ್ಯ ಕಾರಣ. ಮನೆ ಬಾಡಿಗೆ, ಹಾಲು, ದಿನಸಿ, ಇತರೆ ಮಾಮೂಲಿ ಬಿಲ್ ಪಾವತಿ ಮಾಡಲೂ ಸಾದ್ಯ ಆಗದೇ ಇರುವುದರಿಂದ ದಯನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಇಲಾಖೆಯ ನೇಮಕಾತಿ ಕ್ರಮಗಳ ನೂರಾರು ದೋಷಗಳಿಂದ ಮತ್ತಷ್ಟು ಉಪನ್ಯಾಸಕರ ಜೀವನ ಹದಗೆಟ್ಟಿದೆ.
ಈ ವರ್ಷ ಕೆಲಸ ಸಿಗುತ್ತದೆ ಎಂಬ ಖಾತ್ರಿ ಕೆಲ ಉಪನ್ಯಾಸಕರಿಗೆ ಇರುವುದಿಲ್ಲ. ಎಲ್ಲಿ ಸಿಗುತ್ತದೆ ಎಂಬ ಖಾತ್ರಿ ಸಹ ಇರುವುದಿಲ್ಲ. ಸೇವೆ ಹೆಚ್ಚಾದಂತೆ ಅಂಕಗಳು ಕಡಿಮೆ ಯಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ಹಿರಿಯ ಉಪನ್ಯಾಸಕರದ್ದು ಆಗಿರುತ್ತದೆ. ಮುಖ್ಯವಾಗಿ ಹತ್ತು ತಿಂಗಳಿಗೆ ಮೀರದಂತೆ ಹೆಚ್ಚುವರಿ ಕಾರ್ಯಭಾರಕ್ಕೆ ನೇಮಕ ಮಾಡಲಾಗುವುದು ಎಂದು ಇಲಾಖೆ ಬೀಗುತ್ತಾ ಹೇಳುತ್ತಿದ್ದರು ಅದು ಜಾರಿಗೆ ಆಗುತ್ತಿಲ್ಲ. ಕೆಲ ವಿಶ್ವವಿದ್ಯಾಲಯ ಗಳ ವೇಳಾಪಟ್ಟಿ ಬಿನ್ನವಾಗಿರುವಂತೆ ಅವರನ್ನು ಬಿಡುಗಡೆ ಮಾಡಲಾಗುವುದು. ಅಂತಹ ಸಂದರ್ಭದಲ್ಲಿ ಆವರಿಗೆ 10 ತಿಂಗಳ ಸಂಬಳ ಸಿಗದೆ 6 ರಿಂದ 9 ತಿಂಗಳು ವೇತನ ಪಡೆದು ಉಳಿದ ಸಮಯದಲ್ಲಿ ವೇತನ ಇಲ್ಲದೆ ಕೈ ಕೈ ಹಿಸುಕಿಕೊಂಡು ಅತೀ ಒತ್ತಡದ ಜೀವನ ನಡಸುತ್ತಿರುವುದು ಅತ್ಯಂತ ಶೋಚನೀಯ.

ಹಿರಿಯ ಉಪನ್ಯಾಸಕರಿಗೆ 60 ವಯಸ್ಸು ಮೀರಿದರು ಒಂದು ಸಣ್ಣ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲಾಗದ ದಯನಿಯ ಸ್ಥಿತಿಯಲ್ಲಿದ್ದಾರೆ.” ಉನ್ನತ ಶಿಕ್ಷಣ ಪಡೆಯದೆ ಇರುವ ಜನರ ಬಡತನಕ್ಕಿಂತ ಉನ್ನತ ಶಿಕ್ಷಣ ಪಡೆದುಕೊಂಡ ಜನರ ಬಡತನ ಅತ್ಯಂತ ಕ್ರೂರವಾದದ್ದು.” ಇದು ಅವರ ಜಂಗಬಲವನ್ನೇ ಉಡುಗಿಸುವಂತೆ ಮಾಡಿದೆ. . ಗುಣಮಟ್ಟದ ಆಹಾರ ಸಿಗದ, ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗದೆ ಮಾನಸಿಕ ಅನಾರೋಗ್ಯದಿಂದ ನರಳುವುದು ಆರೋಗ್ಯಕರ ಜೀವನ ಅಲ್ಲ. ಇಂತ ಸಮಯದಲ್ಲಿ ಉಪನ್ಯಾಸಕರು ಗುಣಮಟ್ಟದ ಶಿಕ್ಷಣ ಕೊಡಬೇಕು ಎಂದು ನಿರೀಕ್ಷೆಯಿಂದ ಇಲಾಖೆ ಇರುವುದು ಮೂರ್ಖತನವಾದೀತು ಅಷ್ಟೇ. ಸರಕಾರ ಉನ್ನತ ಶಿಕ್ಷಣವನ್ನ ಅಂಗನವಾಡಿ ಗಿಂತ ಕಡೆ ಮಾಡಿದ್ದು ನಮ್ಮ ನಾಡಿನ ದುರ್ದೈವ ಎಂದೇ ಹೇಳಬೇಕಾಗುತ್ತದೆ.

ಅಭಿವೃದ್ಧಿ ಮಾನದಂಡಗಳಲ್ಲಿ ಶಿಕ್ಷಣ ಬಹಳ ಮುಖ್ಯ. ಇದು ದೊಡ್ಡ ದೊಡ್ಡ ಅರ್ಥಶಾಸ್ತ್ರಜ್ಞರು, ಸಮಾಜ ಚಿಂತಕರು ಬಲ್ಲರು, ಅದರೆ ಅದನ್ನು ಕೊಡಮಾಡುವ ಅಧ್ಯಾಪಕ ತನ್ನ ವೃತ್ತಿಯನ್ನು ಮಾಡಲೆ ಬಾರದು ಅಂತ ಬೇಸರದಿಂದ ಅಂದುಕೊಳ್ಳುತ್ತಾನೆ. ಯಾಕೆಂದರೆ ಅವನು ತನ್ನ ವೃತ್ತಿಗೆ ನ್ಯಾಯ ಕೊಡುವ ಹಂತದಲ್ಲಿ ವಿದ್ಯಾರ್ಥಿಗಳಿಂದ ಮೊದಲುಗೊಂಡು, ಸಂಸ್ಥೆಯ ಮುಖ್ಯಸ್ಥರು ಇತರೆ ಖಾಯಂ ವೃತಿ ಬಾಂಧವರಿಂದ ಅವಮಾನಕ್ಕೆ ಒಳಗಾಗುತ್ತಲೇ ಇರುತ್ತಾನೆ.ಇದು ಸಹಜವೇನಲ್ಲ , ಸರಕಾರ ಈ ರೀತಿ ನಡೆಸಿಕೊಳ್ಳತ್ತಿದೆ. ಕಡಿಮೆ ಕೆಲಸ ಮಾಡುವವನಿಗೆ ಹೆಚ್ಚಿನ ಸಂಬಳ ಹೆಚ್ಚಿನ ಅಧಿಕಾರ , ಹೆಚ್ಚು ಕೆಲಸ ಮಾಡುವವರಿಗೆ ಕಡಿಮೆ ಸಂಬಳ ಮತ್ತು ಸ್ವಾಭಿಮಾನಕ್ಕೇ ಪೆಟ್ಟು.

ಸೂಕ್ಷ್ಮ ಮನಸ್ಸಿನ ಉಪನ್ಯಾಸಕರು ನಿತ್ಯ ಕೊರಗಿ ಕೊರಗಿ ಹಿಡಿ ಶಾಪ ಹಾಕುತ್ತಾರೆ. ಸಂಸ್ಥೆ ಹೇಗೆ ನಡೆಸಿಕೊಂಡರೂ ಅನುಭವಿಸಿ ನನಗೆ ನನ್ನ ಬದುಕಿಗೆ ಗೌರವವೇ ಇಲ್ಲ ಅಂತ ಒಮ್ಮೊಮ್ಮೆ ಉದ್ವೇಗಕ್ಕೆ ಒಳಗಾಗುತ್ತಾರೆ. ಮನೆ ಸೇರಿ ಕುಟುಂಬದ ಜೊತೆ ಜಗಳ ಮಾಡುತ್ತಾ ನೆಮ್ಮದಿ ಕೆಡಿಸಿಕೊಳ್ಳುವುದು ಇವರ ದಿನ ನಿತ್ಯದ ಸಂಗತಿ.” ಇಲ್ಲಿ ಗೌರವನೂ ಇಲ್ಲ ಗೌರವ ಧನವೂ ಇಲ್ಲ.”

ಇನ್ನೂ ಸಂಶೋದನೆ, ಸಂವಾದ, ಚರ್ಚೆ, ಬರವಣಿಗೆ ಮುಂತಾದ ವಿಷಯಗಳ ಕುರಿತು ಆಸಕ್ತಿ ಇರಲು ಸಾಧ್ಯವೆ?
ಉನ್ನತ ಶಿಕ್ಷಣ ಇಲಾಖೆಯು ಇಂತಹ ಕೆಟ್ಟ ಪರಿಸ್ಥಿತಿಗೆ ಸಮಾಪ್ತಿ ಹಾಡಬೇಕು ಇಲ್ಲವಾದಲ್ಲಿ ವಿದ್ಯಾವಂತ ಜನ ಭಿಕ್ಷೆ ಬಿಡಬೇಕಾಗುತ್ತದೆ . ಇಂಥ ತ್ಯಾಗಮಯಿ ಉಪನ್ಯಾಸಕರ ಜೀವನ ಗೌರವದಿಂದ ಸಾಗುವಂತೆ ಮಾಡುವುದು ಸರಕಾರದ ಮುಖ್ಯ ಕರ್ತವ್ಯ. ಅದಕ್ಕೆ ಮೊದಲು ಬೇಷರತ್ತಾಗಿ ಯಾವ ಉಪನ್ಯಾಸಕರಿಗೂ ಬೇದ ಭಾವ ತೋರದೆ ಖಾಯಂ ಮಾಡಬೇಕು. ಇಲ್ಲವೆಂದರೆ “ಇದು ಅಂದೇರಿ ರಾಜ್ಯವಾಗುತ್ತದೆ ಹೊರತು ಮಾನವರು ಇರುವಂತ ರಾಜ್ಯ ಆಗುವುದಿಲ್ಲ”. ಕೊನೆಯದಾಗಿ ಒಂದು ಮಾತು ಉಪನ್ಯಾಸಕರ ಖಾಯಂ ಮಾಡುವುದು ಆರ್ಥಿಕ ಹೊರೆ ಎಂದು ಭಾವಿಸಬೇಕಾಗಿಲ್ಲ, ಯಾಕೆಂದರೆ ಯಾರೋ ಒಬ್ಬ ಮಂತ್ರಿ ಮಾಡಿದ ಭ್ರಷ್ಟಾಚಾರದ ಹಣಕ್ಕೂ ಇದು ಸಮವಲ್ಲ . ಸರಕಾರಕ್ಕೆ ಕಾಳಜಿ ಬೇಕು ಅಷ್ಟೆ. ಇಲ್ಲಿ ಕಾನೂನು ತೊಡಕು ಅನ್ನುವಂತಹದ್ದು ಸಮಸ್ಯೆ ಅಲ್ಲವೇ ಅಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!