Friday, September 20, 2024

ಪ್ರಾಯೋಗಿಕ ಆವೃತ್ತಿ

ಜಾತಿಗಣತಿ | ಸಿಎಂಗೆ ಒಕ್ಕಲಿಗ ಸಮುದಾಯ ಬರೆದ ಪತ್ರಕ್ಕೆ ಡಿ.ಕೆ.ಶಿವಕುಮಾರ್ ಸಹಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಾತಿಗಣತಿ ವರದಿಯ ಬಗ್ಗೆ ಚರ್ಚೆ ಕಾವೇರಿದ್ದು, ರಾಜಕೀಯ ಪಕ್ಷಗಳಿಗೆ ಮುಖ್ಯ ವಿಷಯವಾಗಿ ಮಾರ್ಪಟ್ಟಿದೆ. ಜಾತಿಗಣತಿ ವರದಿ ಸ್ವೀಕಾರದ ಕುರಿತಾಗಿ ಪರ ಹಾಗೂ ವಿರೋಧದ ಅಭಿಪ್ರಾಯಗಳು ಕೂಡ ಬಹಿರಂಗವಾಗಿಯೇ ವ್ಯಕ್ತವಾಗುತ್ತಿದೆ.

ಜಾತಿಗಣತಿ ವರದಿಗೆ ಕುರಿತಾದ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಹಾಗೂ ಸಂಘದ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಆಕ್ಷೇಪ ಪತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಚಲುವರಾಯಸ್ವಾಮಿ, ಎಂಸಿ ಸುಧಾಕರ್ ಕೂಡ ಸಹಿ ಹಾಕಿದ್ದಾರೆ. ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಮೀಕ್ಷೆ ‘ಅವೈಜ್ಞಾನಿಕ’ ಎಂದು ಒಕ್ಕಲಿಗರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಜಾತಿಗಣತಿ ವರದಿ ಸ್ವೀಕರಿಸುವ ನಿರ್ಧಾರ ಅಚಲ ಎಂದಿದ್ದಾರೆ.

ಜಾತಿಗಣತಿ ವರದಿ ಸ್ವೀಕಾರ ಮಾಡದಂತೆ ಸಿಎಂ ಸಿದ್ದರಾಮಯ್ಯನವರಿಗೆ ಒಕ್ಕಲಿಗರು ಬರೆದ ಪತ್ರಕ್ಕೆ ಸಹಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ಡಿಸಿಎಂ ಡಿ ಕೆ ಶಿವಕುಮಾರ್, ‘ಜಾತಿಗಣತಿ ಮಾಡಬೇಕು, ಸಾಮಾಜಿಕ ಪರಿಸ್ಥಿತಿ ಅರಿತುಕೊಳ್ಳಬೇಕು ಎಂಬುದು ನಮ್ಮ ಕಾಂಗ್ರೆಸ್‌ ಪಕ್ಷದ ನಿಲುವಿದೆ. ಆ ನಿಲುವಿಗೆ ಇವತ್ತೂ ಕೂಡ ಬದ್ಧವಿದ್ದೇವೆ. ಆದರೆ ನಾವು ಏನು ಹೇಳುತ್ತಿದ್ದೇವೆ ಅಂದರೆ ನಮ್ಮ ಸಮಾಜದ ನಾಯಕರುಗಳು, ಶಾಸಕರುಗಳೆಲ್ಲ ನಮ್ಮ ನಮ್ಮ ಮನೆಗಳಿಗೆಲ್ಲ ಬಂದಿಲ್ಲ. ಯಾವ ಮಾಹಿತಿಯೂ ಕೇಳಿಲ್ಲ. ಸ್ವಲ್ಪ ಸರಿಯಾಗಿ ಅದನ್ನು ವೈಜ್ಞಾನಿಕವಾಗಿ ಮಾಡಿ ಎಂಬುದಷ್ಟೇ ಆಗ್ರಹ’ ಎಂದು ತಿಳಿಸಿದರು.

‘ಜನಸಂಖ್ಯೆಯ ಆಧಾರದ ಮೇಲೆ ತೀರ್ಮಾನ ಆಗಬೇಕು ಅನ್ನುವ ದೃಷ್ಟಿಯಿಂದ ಸಮುದಾಯಗಳು ಆತಂಕ ಹೊರಹಾಕಿವೆ. ಎಲ್ಲ ಸಮುದಾಯಗಳ ನಾಯಕರುಗಳು ಅವರ ಸಮುದಾಯಕ್ಕೆ ಅನ್ಯಾಯ ಆಗಬಾರದು ಎಂದು ಪಕ್ಷಭೇದ ಮರೆತು ಹೋರಾಟ ಮಾಡುತ್ತಿದ್ದಾರೆ. ಹಾಗೆಯೇ ಒಕ್ಕಲಿಗರು ಕೂಡ ಮಾಡ್ತಾ ಇದ್ದಾರೆ. ಅದರಲ್ಲಿ ತಪ್ಪೇನಿದೆ?’ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ನೀವು ಕೂಡ ಸಹಿ ಹಾಕಿದ್ದೀರಲ್ವ ಎಂದು ಪ್ರಶ್ನಿಸಿದಾಗ, ‘ಸಹಿ ಹಾಕಿದ್ದು ತಪ್ಪೇ? ಮಾಡಬಾರದಾ? ಎಷ್ಟೋ ಸಚಿವರು ಸಭೆಗಳನ್ನು ನಡೆಸಿಲ್ವಾ? ನಮ್ಮ ಒಕ್ಕಲಿಗ ಸಮಾಜದ ಗೌರವ, ಸ್ವಾಭಿಮಾನ ಉಳಿಸಿಕೊಳ್ಳಬೇಕು ಅಂತ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿ, ನಾನೂ ಕೂಡ ಸಹಿ ಹಾಕಿದ್ದೇನೆ’ ಎಂದು ಹೇಳಿದ ಉಪ ಮುಖ್ಯಮಂತ್ರಿ ಶಿವಕುಮಾರ್ ಕಾರು ಹತ್ತಿ ಹೊರಟರು.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!