Friday, September 20, 2024

ಪ್ರಾಯೋಗಿಕ ಆವೃತ್ತಿ

ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತು ಮತ್ತು ಶಿಕ್ಷೆ

✍️ ಹರೀಶ್ ಗಂಗಾಧರ್

ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪದ ಡಿಸಿಪ್ಲಿನ್- Discipline. ಪದೇ ಪದೇ ಉಪಯೋಗಿಸಲ್ಪಡುವ ಡಿಸಿಪ್ಲಿನ್ ಎಂಬ ಪದಕ್ಕೆ ಶಿಸ್ತು ಎಂಬ ಅರ್ಥವಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಕಾಪಾಡಲು ಶಿಕ್ಷೆ ಅವಶ್ಯಕ ವೆಂಬಂತೆ ಬಿಂಬಿಸಲಾಗಿದೆ. ಶಿಸ್ತು ಪಾಲಿಸದ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಎಲ್ಲೆಡೆ ರೂಢಿಯಲ್ಲಿದೆ. ತಪ್ಪು ಮಾಡಿದ ವಿದ್ಯಾರ್ಥಿಗಳನ್ನು ಶಿಕ್ಷಿಸಿ, ಅವಮಾನಿಸುವುದು ಸರಿಯಾದ ಕ್ರಮವೆಂದು ನಂಬಿಸಲಾಗಿದೆ.

ಆದರೆ ಒಮ್ಮೆ ಯೋಚಿಸಿ, ಆಂಗ್ಲ ಭಾಷೆಯ “ಡಿಸೈಪಲ್- disciple” ಎಂಬ ಪದ ಡಿಸಿಪ್ಲಿನ್ ಪದದ ಮೂಲಪದ. ಡಿಸೈಪಲ್ ಪದಕ್ಕೆ – ಶಿಷ್ಯ, ಅನುಯಾಯಿ ಎಂಬ ಅರ್ಥವಿದೆ. ಬುದ್ಧ ಮತ್ತು ಯೇಸು ಕ್ರಿಸ್ತರಿಗೆ ದೊಡ್ಡ ಶಿಷ್ಯ ವೃಂದ ಕಟ್ಟಿ ಕೊಳ್ಳಲು ಹೇಗೆ ಸಾಧ್ಯವಾಯಿತು? ಹೋದಲೆಲ್ಲಾ ಅವರನ್ನು ಆಲಿಸಿದ ಜನರು ಏಕೆ ಅವರ ಅನುಯಾಯಿಗಳಾದರು?

ಬುದ್ಧ ಮತ್ತು ಯೇಸು ಕ್ರಿಸ್ತರ ಅಗಾಧ ಶಕ್ತಿ ಇದ್ದುದೇ ಅವರ ಪ್ರೀತಿ ಮತ್ತು ಕರುಣೆಯಲ್ಲಿ. ತೋರಿದ ಪ್ರೀತಿ ಮತ್ತು ಅಪಾರ ಕರುಣೆಗೆ ಜನ ಅವರ ಅನುಯಾಯಿಗಳಾದರು. ಬುದ್ಧ ಮತ್ತು ಯೇಸು ಕ್ರಿಸ್ತರ ಬಳಗ ಶಿಕ್ಷೆಯಿಂದ ಬೆಳೆಯಲಿಲ್ಲ ಎಂಬುದಂತೂ ದಿಟ. ಈ ಅರಿವಿನ ಬೆಳಕಿನಲ್ಲಿ “ಡಿಸಿಪ್ಲಿನ್” ಎಂಬ ಪದವನ್ನು ಶಿಕ್ಷಣ ಸಂಸ್ಥೆಗಳು, ಅಧ್ಯಾಪಕರು ಮರು ಅರ್ಥೈಸಿಕೊಂಡರೆ ಡಿಸಿಪ್ಲಿನ್ ಪದದ ಸಂಬಂಧ ಶಿಕ್ಷೆಯಲ್ಲಲ್ಲದೆ ಪ್ರೀತಿ ಮತ್ತು ಕರುಣೆಯ ಬೆಸೆಯುತ್ತದೆ.

ನಮ್ಮ ವಿಕಸನದ ಸಾವಿರಾರು ವರ್ಷಗಳಲ್ಲಿ ಮಕ್ಕಳು ಬೆಳೆದು ಬಂದ ಹಾದಿ ಯಾವುದೆಂದು ಗಮನಿಸಿದಾಗ ಅಚ್ಚರಿಯ ವಿಷಯ ಒಂದು ನಮ್ಮ ಮುಂದೆ ಗೋಚರವಾಗುತ್ತದೆ. ಗುಹೆಗಳಲ್ಲಿ, ಕಾಡುಗಳಲ್ಲಿ ಗುಂಪು ಗುಂಪಾಗಿ ಬದುಕುತ್ತಿದ್ದ ಮಾನವರು ಸದಾ ತಮ್ಮ ಮಕ್ಕಳ ಸನಿಹದಲ್ಲೇ ಇರುತ್ತಿದ್ದರು. ಅಪ್ಪುಕೆ, ಮುದ್ದಾಟಕ್ಕೆ ಮೀತಿಯೆ ಇರುತ್ತಿರಲಿಲ್ಲ. ಬೇಟೆಗೆ, ಬೇಸಾಯಕ್ಕೆ ಪೋಷಕರು ಮಕ್ಕಳನ್ನು ಜೊತೆ ಜೊತೆಗೆ ಕರೆದೊಯ್ಯುತ್ತಿದ್ದ ಕಾರಣ ಪೋಷಕರೇ ಮಕ್ಕಳ ಗುರುಗಳು ಆಗಿರುತ್ತಿದ್ದರು. ಗುಹೆಯಲ್ಲಿ, ಕಾಡಿನಲ್ಲಿ ಬದುಕುತ್ತಿದ್ದ ಮಾನವ ತನ್ನ ಮಕ್ಕಳನ್ನು ಶಿಕ್ಷಿಸಿದ್ದು ಇಲ್ಲವೇ ಇಲ್ಲವೆಂದು ಹೇಳಬಹುದು. ಪೋಷಕರದ್ದಷ್ಟೇ ಅಲ್ಲದೆ ಸಮುದಾಯದಲ್ಲಿ ಬದುಕುತ್ತಿದ್ದ ಮಕ್ಕಳಿಗೆ ಬೇರೆಲ್ಲರ ಪ್ರೀತಿಯ ಮಾರ್ಗದರ್ಶನ ಸಿಗುತ್ತಿತ್ತು. ಹೀಗೆ ನಿರಂತರ ಪ್ರೀತಿ, ಅಪ್ಪುಗೆ, ನಿಗರಾನಿಯಲ್ಲಿ ಬೆಳೆದ ಮಕ್ಕಳು ಮುಂದೆ ಏನಾಗುತ್ತಿದರೆಂಬುದನ್ನು ಊಹಿಸುವುದು ಸುಲಭ.

ಇಂದು ಮಕ್ಕಳಿರುವ ಸಮಾಜ ಎಂತದ್ದು? ಅಪ್ಪ, ಅಮ್ಮ ಕೆಲಸಕ್ಕೆ ಹೊರಡುವ ಮುನ್ನವೇ ಆತುರಾತುರವಾಗಿ ಊಟದ ಡಬ್ಬಿ ತುಂಬಿ ಸ್ಕೂಲೆಂಬ ಸೆರೆಮನೆ ಅಟ್ಟುತ್ತಾರೆ. ಕೆಲಸದೊತ್ತಡ, ಜವಾಬ್ದಾರಿಗಳು, ಹಂತ ಹಂತವಾಗಿ ಕೊಲ್ಲುವ ಏಕತಾನತೆಗಳ ನಡುವೆ ನಮ್ಮಲ್ಲಿ ಅಪ್ಪುಕೆ, ಪ್ರೀತಿ, ಒಡನಾಟಗಳಿಗೆ ಸಮಯವಿರುವುದಿಲ್ಲ. ಮಕ್ಕಳು ಬೆಳೆದಂತೆ ಹೋಂ ವರ್ಕ್ ಭೂತ ದೈತ್ಯವಾಗಿ, ಪೋಷಕರಿಂದ ಅವರನ್ನು ಮತ್ತಷ್ಟು ದೂರಮಾಡುತ್ತದೆ. ಕೌಟಂಬಿಕ ಕಲಹಗಳು, ಮುನಿಸು, ಕಿತ್ತಾಟಗಳನ್ನು ಯುಗದ ಶಾಪವೆಂದು, ಪೀಳಿಗೆಯ ಮಕ್ಕಳು ಪ್ರೀತಿ ವಂಚಿತ ಅತ್ಯಂತ ದುರಾದೃಷ್ಟ ಮಕ್ಕಳು ಎಂದರೆ ತಪ್ಪಾಗಲಾರದು. ಈ ರೀತಿಯ ವಂಚಿತ ಸಮುದಾಯ ಸ್ಮಾರ್ಟ್ ಫೋನ್ ಮತ್ತು ವಿರ್ಚುಯಲ್ ಜಗತ್ತಿನೊಡನೆ ಅತಿಯಾದ ನಂಟಿಟ್ಟುಕೊಳ್ಳುವುದರಲ್ಲಿ, ಬೇರೆಲ್ಲಾ ಸಂಬಂಧಗಳನ್ನು ಕಳಚಿಕೊಂಡು, ಕೊಂಚವಾದರು ಹಿತಾನುಭವ, ಬಾಂಧವ್ಯದ ಭರವಸೆ ಮೂಡಿಸುವ “ಅಧ್ಯಾತ್ಮದ” ನಕಲಿ ಗುರುಗಳಿಗೆ ಜೋತು ಬೀಳುವುದರಲ್ಲಿ, ಮಾದಕ ವಸ್ತುಗಳ ದಾಸರಾಗುವುದರಲ್ಲಿ ಯಾವ ಅಚ್ಚರಿಯೂ ಇಲ್ಲ.

ಈ ಪೀಳಿಗೆಯ ಪೋಷಕರು, ಶಿಕ್ಷಕರು ಮುಂದಿನ ಪೀಳಿಗೆಗೆ ಒತ್ತಡ, ಏಕತಾನತೆ, ಅಸೂಯೆ, ದ್ವೇಷ, ಭೀತಿಯನ್ನೇ ವರ್ಗಾಯಿಸುತ್ತಿದ್ದಾರೆ. ಯಾಂತ್ರಿಕ ಜೀವನ ನಡೆಸುವ ಪೀಳಿಗೆ ಯಾಂತ್ರಿಕತೆಯನ್ನೇ ಬಹುದೊಡ್ಡ ಆದರ್ಶವೆಂಬಂತೆ ಮುಂದಿನ ಪೀಳಿಗೆಗೆ ದಾಟಿಸುತ್ತಿದೆ. ಮನೋರೋಗಕ್ಕೆ ತುತ್ತಾಗಿ ಯಂತ್ರದಂತೆ ದುಡಿಯುವ ಜನತೆಯಿಂದ ಯಾರಿಗೆ ಲಾಭವಿದೆ ಎಂಬುದನ್ನು ನಾನು ವಿವರಿಸಿ ಹೇಳಬೇಕಿಲ್ಲ. ಹೌದು ಜನರನ್ನು ಇಂದು ವಾರಕ್ಕೆ ಎಪ್ಪತ್ತೆರಡು ಗಂಟೆಯೇನು ನೂರು ಗಂಟೆ ಕೂಡ ದುಡಿಸಿಕೊಳ್ಳಬಹುದು… But at what cost ಎಂಬ ಪ್ರಶ್ನೆಯನ್ನು ಇಡೀ ಸಮುದಾಯ ಕೇಳಿಕೊಳ್ಳಬೇಕಷ್ಟೆ.

ಒಮ್ಮೆ ಮನೋಮಗ್ನತೆಯ ಮೇಧಾವಿ, ಬೌದ್ಧ ಗುರು ತಿಚ್ ನಾತ್ ಹನ್ ಅವರೆಡೆಗೆ ಪೋಷಕರೊಬ್ಬರು ಸರಳ ಪ್ರಶ್ನೆಯೊಂದನ್ನು ತೂರಿ ಬಿಟ್ಟರಂತೆ. “ಗುರುಗಳೇ ನಮ್ಮ ಮಕ್ಕಳಿಗೆ ನಾವೇನು ಕೊಡಬಹುದು?” ಎಂದು. ಹಣ, ಉತ್ತಮ ವಿದ್ಯಾಭ್ಯಾಸ, ಆಸ್ತಿ, ಕೌಶಲ್ಯ, ಅಧಿಕಾರ, ನಿರೀಕ್ಷಿತ ಉತ್ತರಗಳಾಗಿದ್ದವು. ” ನಿಮ್ಮ ಮಕ್ಕಳಿಗೆ ಪ್ರೀತಿ ಮತ್ತು ಕರುಣೆಯನ್ನು ಬಿಟ್ಟು ಮತ್ತೇನು ಮಹತ್ವದ್ದನ್ನು ಕೊಡಲಾರಿರಿ” ಎಂದರು ತಿಚ್! ಹೌದು ಪೋಷಕರೇ ಮತ್ತು ಶಿಕ್ಷಕರೇ ಮಕ್ಕಳಿಗೆ ಪ್ರೀತಿ ಮತ್ತು ಕರುಣೆಯನ್ನಷ್ಟೇ ಕೊಡಿ … ಅವರಿಗೆ ಅದೊಂದರದೆ ಅವಶ್ಯಕತೆ ಇರುವುದು ಕೂಡಾ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!