Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮಿಮ್ಸ್ ಆಡಳಿತ ಸುಧಾರಣೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ

ಮಿಮ್ಸ್ (ಮಂಡ್ಯ ಜಿಲ್ಲಾಸ್ಪತ್ರೆ) ನಲ್ಲಿ ಅಪಘಾತ ಹಾಗೂ ತುರ್ತುಚಿಕಿತ್ಸಾ ಘಟಕ ಸೇರಿದಂತೆ ಎಲ್ಲ ವಿಭಾಗದಲ್ಲೂ ಕರ್ತವ್ಯ ನಿರತ ವೈದ್ಯರು ಸದಾ ಹಾಜರಿರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡದೆ ಸರಕಾರಿ ಆಸ್ಪತ್ರೆಯನ್ನು ತಮ್ಮ ಖಾಸಗಿ ನರ್ಸಿಂಗ್ ಹೋಂಗಳ ಸಂದರ್ಶಕ ಕೇಂದ್ರವಾಗಿಸಿಕೊಂಡಿರುವ ವೈದ್ಯರ ವಿರುದ್ದ ಕ್ರಮ ಜರುಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಕರುನಾಡ ಸೇವಕರು ಸಂಘಟನೆಯ ಕಾರ್ಯಕರ್ತರು ಮಿಮ್ಸ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ವೆಂಟಿಲೇಟರ್ ಇದ್ದಾಗಿಯೂ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸಾಗಹಾಕುವ, ಎಲ್ಲದಕ್ಕೂ ಆಸ್ಪತ್ರೆ ಹೊರಗಡೆ ಮೆಡಿಕಲ್ ಹಾಗೂ ಡಯಾಗ್ನೋಸ್ಟಿಕ್ ಕೇಂದ್ರಗಳಿಗೆ ಅಟ್ಟುವ ಪ್ರವೃತ್ತಿ ನಿಲ್ಲಬೇಕು. ಪ್ರತಿ ವಿಭಾಗದಲ್ಲೂ ಹೆಲ್ಪ್ ಡೆಸ್ಕ್ ಸ್ಥಾಪಿಸಬೇಕು. ಆಸ್ಪತ್ರೆಯ ಆವರಣದಲ್ಲಿರುವ ಜನರಿಕ್ ಔಷಧ ಮಳಿಗೆಯಲ್ಲಿ ಎಲ್ಲ ಔಷಧಗಳು ಸಿಗುವಂತೆ ಮಾಡಬೇಕು. ಖಾಸಗಿ ಮೆಡಿಕಲ್ ಗಳೊಂದಿಗಿನ ಅಕ್ರಮ ಮೈತ್ರಿ ತುಂಡರಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.

ಕ್ಯಾನ್ಸರ್ ಘಟಕ ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ABRK ಅಡಿಯಲ್ಲಿ ಸರಕಾರಿ ಹಣ ಖಾಸಗಿ ಆಸ್ಪತ್ರೆಗಳ ಪಾಲಾಗುತ್ತಿರುವುದನ್ನು ತಪ್ಪಿಸಲು ಪೂರ್ಣ ಪ್ರಮಾಣದ ರೇಡಿಯೋ ಥೆರಪಿಸ್ಟ್ ನೇಮಕ ಮಾಡಬೇಕು, ರೋಗ ಪತ್ತೆ ನಿರ್ವಹಣೆ ಹಾಗೂ ರೋಗಪತ್ತೆಗಾಗಿ ಬಳಸುವ ರಾಸಯನಿಕಗಳ ಪೂರೈಕೆ ಹಾಗೂ ಪ್ರಯೋಗಾಲಯದ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಿದ್ದು, ಇದರಿಂದ ಆಸ್ಪತ್ರೆಗೆ ಪ್ರತೀ ವರ್ಷ ಐದು ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿದ್ದು ಈ ಹೊರೆಯನ್ನು ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಹೊರಿಸಲಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ರೋಗಪತ್ತೆ ಪ್ರಯೋಗಾಲಯದ ನಿರ್ವಹಣೆಯನ್ನು ನೇರವಾಗಿ ಆಸ್ಪತ್ರೆಯ ವತಿಯಿಂದ ನಿರ್ವಹಿಸಬೇಕೆಂದು ಒತ್ತಾಯಿಸಿದರು.

ನಕಲಿ ಭೋದನಾ ಪ್ರಮಾಣಪತ್ರ ನೀಡಿದ ವೈದ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುವ ಪ್ರಯತ್ನಕ್ಕೆ ತಡೆಹಾಕಿ, ನಕಲಿ ಭೋದನಾ ಪ್ರಮಾಣಪತ್ರದ ಕುರಿತು ಅಗತ್ಯ ನ್ಯಾಯಾಂಗ ಪ್ರಕ್ರಿಯೆ ನಡೆಸಬೇಕು. ಕಳೆದ ಡಿಸೆಂಬರ್ 17 ರಂದು ತುರ್ತುಚಿಕಿತ್ಸಾ ಘಟಕದಲ್ಲಿ ಕರ್ತವ್ಯದಲ್ಲಿ ಹಾಜರಿರದೆ ಹೃದಯಾಘಾತಕೀಡಾಗಿದ್ದ ರೋಗಿಯ ಜೀವದೊಂದಿಗೆ ಚೆಲ್ಲಾಟವಾಡಿದ ವೈದ್ಯರನ್ನು ಅಮಾನತ್ತುಪಡಿಸಿ ಅಗತ್ಯ ತನಿಖೆಗೆ ಆದೇಶಿಸಬೇಕು ಹಾಗೂ ನಿಯಮ ಮೀರಿ ತಮ್ಮ ಹೆಸರಿನಲ್ಲಿ ಕ್ಲಿನಿಕ್ ನರ್ಸಿಂಗ್ ಹೋಂ ನಡೆಸುತ್ತಿರುವ ಮಿಮ್ಸ್ ವೈದ್ಯರ ವಿರುದ್ದ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದ ಮಿಮ್ಸ್ ಪ್ರಭಾರಿ ನಿರ್ದೇಶಕ ತಮ್ಮಣ್ಣಗೌಡ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಪ್ರತಿಭಟನಾಕಾರರೊಂದಿಗೆ ಹೊರರೋಗಿ ವಿಭಾಗದಲ್ಲಿ ಅಹವಾಲು ಆಲಿಸಿದರು. ನಂತರ ಸ್ವೀಕರಿಸಿದ ಡಾ.ಶ್ರೀಧರ್, ಡಿಸೆಂಬರ್ 17 ರಂದು ತುರ್ತುಚಿಕಿತ್ಸಾ ಘಟಕದಲ್ಲಿ ಕರ್ತವ್ಯದ ವೇಳೆಯಲ್ಲಿ ಹಾಜರಿರದ ವೈದ್ಯರ ಅಮಾನತ್ತಿಗೆ ಶಿಫಾರಸ್ಸು ಮಾಡಲಾಗುವುದು. ರೋಗ ನಿರ್ಣಯ ಪರೀಕ್ಷೆಯನ್ನು ಖಾಸಗಿ ಏಜೆನ್ಸಿಗೆ ಬದಲು ಸರಕಾರವೇ  ನಿರ್ವಹಿಸುವಂತೆ ಇದರಿಂದ ಸಾರ್ವಜನಿಕರಿಗೆ ಆರ್ಥಿಕ ಹೊರೆ ತಗ್ಗುವ ಕುರಿತು ಸರಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.

ನಂತರ ಬೈಕ್ ರಾಲಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ಈ ಸಂಬಂಧ ಮಿಮ್ಸ್ ಅಧಿಕಾರಿಗಳ ಜತೆ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಮಿಮ್ಸ್ ಕುರಿತು ಆರೋಪಗಳ ಬಗ್ಗೆ ಅಗತ್ಯ ತನಿಖೆಯೊಂದನ್ನು ನಡೆಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮಲ್ಲೇಗೌಡ,  ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ಕೀಲಾರ ಚಂದ್ರು, ಕೂಳಗೆರೆ ಮಹೇಶ್, ರಮೇಶ್ ಗೌಡ, ಚಂದ್ರು, ಮಾಕವಳ್ಳಿ ಕುಮಾರಸ್ವಾಮಿ, ಶೇಖರ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!