Friday, September 20, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಧಾನ ಸಭೆ: ”ಮಂಡ್ಯ ಬಂದ್” ಹಿಂಪಡೆಯಲು ಮನವಿ

ಕೆರಗೋಡು ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಸಮಾನ ಮನಸ್ಕರ ವೇದಿಕೆ ಮತ್ತು ಪ್ರಗತಿಪರರು ಫೆ.7ರಂದು ಮಂಡ್ಯ ಬಂದ್ ಗೆ ಕರೆ ನೀಡಿದ್ದು, ಸಂಘ ಪರಿವಾರವು ಫೆ.9ರಂದು ಮಂಡ್ಯ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಎರಡು ಸಂಘಟನೆಗಳ ಪ್ರತ್ಯೇಕ ಸಭೆಗಳನ್ನು ಕರೆದು ಬಂದ್ ಕೈ ಬಿಡುವಂತೆ ಮನವಿ ಮಾಡಿದರು.

ಸೋಮವಾರ ಸಂಜೆ ಮಂಡ್ಯ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಮಾನ ಮನಸ್ಕರ ಮುಖಂಡರ ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಬಂದ್ ನಿಂದ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಸಾಕಷ್ಟು ಅನಾನೂಕೂಲವಾಗಲಿದೆ. ಯಾವುದೇ ಸಂಘಟನೆಗಳು ಬಂದ್ ನಡೆಸುವುದರಿಂದ ಜಿಲ್ಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಲಿದೆ. ಸಂಘಟನೆಗಳು ಸಹ, ಬಡವರು, ಕಾರ್ಮಿಕರು, ಬೀದಿ ವ್ಯಾಪಾರಿಗಳ ಪರವಾಗಿ ದನಿ ಎತ್ತುತ್ತವೆ. ಈ ಕುರಿತು ಸಹ ಯೋಚಿಸಬೇಕು. ಕೆರಗೋಡು ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲಾಗುವುದು. ಈ ಹಿನ್ನೆಲೆಯಲ್ಲಿ ಮಂಡ್ಯ ಬಂದ್ ಹಿಂಪಡೆಯುವಂತೆ ಜಿಲ್ಲಾಧಿಕಾರಿ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಾನ ಮನಸ್ಕರು, ಸಾರ್ವಜನಿಕರಿಗೆ ತೊಂದರೆಯುಂಟುಮಾಡುವುದು ತಮ್ಮ ಉದ್ದೇಶವಲ್ಲ, ಕೋಮುವಾದಿ ಶಕ್ತಿಯಾದ ಸಂಘಪರಿವಾರವು ಜಿಲ್ಲೆಯಲ್ಲಿ ಜನರ ಭಾವನೆಗಳನ್ನು ಕೆರಳಿಸಿ, ತನ್ನ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ, ಆದ್ದರಿಂದ ಜಿಲ್ಲೆಯ ಸೌಹಾರ್ದತೆ ಹಾಗೂ ಐಕ್ಯತೆ ದೃಷ್ಠಿಯಿಂದ ನಾವು ಬಂದ್ ಗೆ ಕರೆ ನೀಡಿದ್ದೇವೆ. ನೀವು ಕೋಮುವಾದಿಗಳು ನಡೆಸುವ ಬಂದ್ ಗೆ ಅವಕಾಶ ನೀಡುವುದಿಲ್ಲ ಎನ್ನುವುದಾದರೆ ತಮ್ಮ ಬಂದ್ ವಾಪಸ್ ಪಡೆಯುತ್ತೇವೆ, ಇಲ್ಲವಾದರೆ ನಾವು ಬಂದ್ ನಡೆಸುತ್ತೇವೆ, ಈ ಕುರಿತು ಸಭೆ ಸೇರಿ ತೀರ್ಮಾನ ಕೈಗೊಂಡು ತಿಳಿಸುತ್ತೇವೆಂದು ತಿಳಿಸಿದರು ಎಂದು ತಿಳಿದು ಬಂದಿದೆ.

ಕೆರಗೋಡು ಪ್ರಕರಣವನ್ನು ನಿಭಾಯಿಸುವಲ್ಲಿ ಗುಪ್ತಚರ ಹಾಗೂ ಪೋಲಿಸ್ ಇಲಾಖೆಯ ವೈಫಲ್ಯವಿದೆ. ರಾಷ್ಟ್ರಧ್ವಜಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಯಾವುದೆ ಖಾಸಗಿ ಧ್ವಜ ಹಾರುವಂತಿಲ್ಲ. ಎತ್ತರದ ಧ್ವಜಕಂಬ ಸ್ಥಾಪನೆಗೆ ಅನುಮತಿ ನೀಡುವಲ್ಲಿ ಸಾಕಷ್ಟು ಲೋಪಗಳಿವೆ. ಕೆರಗೋಡು ಘಟನೆಯನ್ನು ಪ್ರಚೋದಿಸುತ್ತಿರುವವರ ವಿರುದ್ಧ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕೇಸರಿ ಧ್ವಜ ಯಾವುದೆ ಧರ್ಮದ ಧ್ವಜವಲ್ಲ

ಕೇಸರಿ ಧ್ವಜ ಯಾವುದೆ ಧರ್ಮದ ಧ್ವಜವಲ್ಲ, ಬದಲಿಗೆ ನಿರ್ದಿಷ್ಟ ಪಕ್ಷದ ಚಿಹ್ನೆಯಾಗಿದೆ. ಮುಜರಾಯಿ ದೇವಾಲಯಗಳಲ್ಲಿ ಇದನ್ನು ಹಾರಾಡಲು ಬಿಡಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಕದಡುವ ಶಕ್ತಿಗಳ ವಿರುದ್ದ ಸೂಕ್ತ ಕ್ರಮ ಜರುಗಬೇಕು ಎಂದು ಪ್ರಗತಿಪರರು ಒತ್ತಾಯಿಸಿದರು. ಮಂಡ್ಯದ ಕುರುಬರ ವಿದ್ಯಾರ್ಥಿ ನಿಲಯಕ್ಕೆ ಕಲ್ಲು ಹೊಡೆದವರನ್ನು ಬಂಧಿಸಲಾಗಿದೆ ಎಂದು ಪೋಲಿಸ್ ವರಿಷ್ಟಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಯಲ್ಲಿ ಮಂಡ್ಯ ಜಿಲ್ಲಾ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಲಕ್ಷ್ಮಣ್ ಚೀರನಹಳ್ಳಿ, ರೈತಸಂಘದ ಮುಖಂಡರಾದ ಸುನಂದ ಜಯರಾಂ, ಸಿಐಟಿಯು ಮುಖಂಡರಾದ ಸಿ.ಕುಮಾರಿ, ಕಮ್ಯುನಿಸ್ಟ್ ಪಕ್ಷದ ಟಿ.ಎಲ್ ಕೃಷ್ಣೇಗೌಡ, ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್, ಕರ್ನಾಟಕ ಜನಶಕ್ತಿ ಸಂಘಟನೆಯ ಪೂರ್ಣಿಮ, ಸಿದ್ದರಾಜು, ಹಿಂದುಳಿದ ವರ್ಗಗಳ ವೇದಿಕೆಯ ಟಿ.ಎಲ್ ಸಂದೇಶ್, ರೈತ ಮುಖಂಡ ಶಿವಳ್ಳಿ ಚಂದ್ರಶೇಖರ್, ದಲಿತ ಸಂಘಟನೆಗಳ ಮುಖಂಡರಾದ ವೆಂಕಟಗಿರಿಯಯ್ಯ, ಶಿವರಾಜ್ ಮರಳಿಗ, ಎಂ.ವಿ.ಕೃಷ್ಣ, ಅಂದಾನಿ, ನಂಜುಂಡ, ನರಸಿಂಹಮೂರ್ತಿ, ಮೌರ್ಯ, ಕರ್ನಾಟಕ ರಕ್ಷಣಾ ವೇದಿಕೆಯ ಎಚ್ ಡಿ ಜಯರಾಂ, ಸವಿತಾ ಸಮಾಜದ ಪ್ರತಾಪ್ ಮುಂತಾದವರು ಭಾಗವಹಿಸಿದ್ದರು.

ಸಂಘ ಪರಿವಾರದವರೊಂದಿಗೆ ಸಭೆ

ಮತ್ತೊಂದೆಡೆ ಸಂಘ ಪರಿವಾರ ಮುಖಂಡರೊಂದಿಗೂ ಸಭೆ ನಡೆಸಿ ಜಿಲ್ಲಾಡಳಿತ, ಫೆ.9ರ ಬಂದ್ ಕೈ ಬಿಡುವಂತೆ ಮನವಿ ಮಾಡಿದ್ದು, ಅವರು ತಮ್ಮ ಸಂಘಟನೆಯ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆಂದು ತಿಳಿದು ಬಂದಿದೆ, ಈ ಸಭೆಯಲ್ಲಿ ಭಜರಂಗ ಸೇನೆಯ ಮಂಜುನಾಥ್, ಬಿಜೆಪಿಯ ರಮೇಶ್, ಹರ್ಷ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!