Friday, September 20, 2024

ಪ್ರಾಯೋಗಿಕ ಆವೃತ್ತಿ

ಕುಮಾರಸ್ವಾಮಿ ಸಿಎಂ ಆಗಲು ನನ್ನ ಬಳಿ ಕೈ ಕಟ್ಟಿ ನಿಂತಿರಲಿಲ್ವಾ?; ಚಲುವರಾಯಸ್ವಾಮಿ

ಕುಮಾರಸ್ವಾಮಿ ಸಿಎಂ ಆಗಲು ನನ್ನ ಬಳಿ ಕೈ ಕಟ್ಟಿ ನಿಂತಿರಲಿಲ್ವಾ ಎಂದು ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ಮಂಡ್ಯದ ಸಂಜಯ ವೃತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ  ಮಾತನಾಡಿದ ಅವರು, ಸಚಿವ ಸ್ಥಾನಕ್ಕಾಗಿ ಚಲುವರಾಯಸ್ವಾಮಿ ದುಂಬಾಲು ಬಿದ್ದಿದ್ರು ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಚಲುವರಾಯಸ್ವಾಮಿ,ಸಿಎಂ ಆಗಲು ಕುಮಾರಸ್ವಾಮಿ ಹೊರಟಾಗ
ಅವರಪ್ಪ, ಭಾವ ಬೇಡ ಎಂದರು.ಆಗ ಕುಮಾರಸ್ವಾಮಿ 39 ಜನ ಶಾಸಕರ ಬಳಿ ಹೇಗೆ ನಿಂತಿದ್ದರು ಎಂಬುದನ್ನು ಅವರನ್ನೇ ಕೇಳಿ ಎಂದರು.

ನನ್ನನ್ನು ಜನರು ಗೆಲ್ಲಿಸಿದ್ದಕ್ಕೆ ಮಂತ್ರಿ ಮಾಡಿದ್ರು. ಈಗಲೂ ಜನರು ಗೆಲ್ಲಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ಮಂತ್ರಿ ಮಾಡಿದೆ.ಜೆಡಿಎಸ್‌ನವರು ಹಳೇ ಭಾಷಣ ಹೊಡೆಯುತ್ತಿದ್ದಾರೆ. ಭಾಷಣದಲ್ಲಿ ಅವರು ಮುಂದೆ ಇದ್ದಾರೆ. ನಾವು ಅಭಿವೃದ್ಧಿಯಲ್ಲಿ ಮುಂದಿದ್ದೇವೆ. ನಾವು ಬರೀ ಬಾಯಲ್ಲಿ ಹೇಳಲ್ಲ, ಕೆಲಸ ಮಾಡಿ ತೋರಿಸುತ್ತೇವೆ.
ಕೆಲವರಿಗೆ ಮಂಡ್ಯ ಅಭಿವೃದ್ಧಿ ಬೇಕಿಲ್ಲ. ಹೊಸ ಷುಗರ್ ಫ್ಯಾಕ್ಟರಿ ಬೇಡ, ಕೃಷಿ ವಿವಿ ಬೇಡ ಎನ್ನುತ್ತಾರೆ.
ಇವರು ಮೆಡಿಕಲ್ ಕಾಲೇಜನ್ನು ಶಿಫ್ಟ್ ಮಾಡಲು ಹೇಳಿದ್ರು, ಅಭಿವೃದ್ಧಿ ಆದರೆ ಜಿಲ್ಲೆ ಇವರ ಹಿಡಿತಕ್ಕೆ ಸಿಗಲ್ಲ.ಹಾಗಾಗಿ ಸುಮ್ಮನೆ ಮಾತನಾಡುತ್ತಿದ್ದಾರೆ.ನಮಗೆ ಜಿಲ್ಲೆಯ ಅಭಿವೃದ್ಧಿ ಮುಖ್ಯ. ಅವ್ರನ್ನ ಕೇಳಿ ನಾನು ತೀರ್ಮಾನ ಮಾಡಬೇಕಾ. ಜನರ ಅಗತ್ಯಗಳಿಗೆ ತಕ್ಕಂತೆ ಅಭಿವೃದ್ಧಿ ಮಾಡ್ತೀವಿ ಎಂದರು.

ಕಾಂಗ್ರೆಸ್‌ನಲ್ಲಿ ಒಕ್ಕಲಿಗರಿಲ್ವಾ ?

ಕಾಂಗ್ರೆಸ್ ಒಕ್ಕಲಿಗರ ನಾಯಕತ್ವ ತುಳಿಯುತ್ತಿದೆ ಎಂಬ ಹೆಚ್ಡಿಕೆ ಹೇಳಿಕೆಗೆ ಉತ್ತರಿಸಿದ ಚಲುವರಾಯಸ್ವಾಮಿ, ಹಾಗಾದ್ರೆ ನಾವ್ಯಾರು ಒಕ್ಕಲಿಗರಲ್ವಾ.ರವಿಕುಮಾರ್, ಡಿ.ಕೆ.ಶಿವಕುಮಾರ್ ಒಕ್ಕಲಿಗರಲ್ವಾ?
ಜಾತಿ ರಾಜಕಾರಣವನ್ನ ಜನ ಈಗ ಒಪ್ಪಲ್ಲ ಎಂದರು.

ಜೆಡಿಎಸ್ ಮೇಲೆ ವಿಶ್ವಾಸವಿಲ್ವಾ ?

ಡಾ.‌ಮಂಜುನಾಥ್ ಅವ್ರನ್ನ ಬಿಜೆಪಿ ಅಭ್ಯರ್ಥಿ ಮಾಡಿದ್ದಾರೆ.ಅವರಿಗೆ ಜೆಡಿಎಸ್ ಪಕ್ಷದ ಮೇಲೆ,ಚಿನ್ಹೆ ಮೇಲೆ ವಿಶ್ವಾಸವಿಲ್ವಾ ಎಂದರು.
ಪಕ್ಷ ಒಡೆದರು ಎಂಬ ಹೆಚ್.ಡಿ.ಕೆ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯವಾಗಿ ಯಾರು ಯಾರನ್ನು ತುಳಿದರು ಎಂಬ ಇತಿಹಾಸ ಇದೆ. ಈಗ ನಾನು ಯಾಕೆ ಮಾತನಾಡುವುದು. ಜನರಿಗೆ ಅದೆಲ್ಲಾ ತಿಳಿದಿದೆ‌.ಜನರು ನಮ್ಮ ಪರ ಇದ್ದಾರೆ. ಹೊಟ್ಟೆ ನೋವು ತಡೆಯಲಾರದೆ ಏನೇನೋ ಮಾತನಾಡುತ್ತಾರೆ. ಅದಕ್ಕೆ ವೈದ್ಯರೇ ಮೆಡಿಷನ್ ಕೊಡಬೇಕು ಎಂದರು.

ಕಳೆದ ಚುನಾವಣೆಯಲ್ಲಿ ಜನರು ನಮ್ಮನ್ನ ನಂಬಿದರು.ಅವರನ್ನು ನಂಬಲಿಲ್ಲ.ನಮ್ಮ ಗ್ಯಾರಂಟಿ ನಂಬಿದರು.
ಅವರ ಆಡಳಿತವನ್ನ ಜನ ಒಪ್ಪಲಿಲ್ಲ. ಅವರು ಮಲಗಿದ್ರು, ಎದ್ರು ಚಲುವರಾಯಸ್ವಾಮಿ ಜಪ ಮಾಡ್ತಿದ್ದಾರೆ.
ಸುರೇಶ್ ಗೌಡನ ಬಗ್ಗೆ ಮಾತನಾಡಲ್ಲ, ಎಲ್ಲರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ತಟಸ್ಥನಾಗಿದ್ದು, ನಾನು ಯಾರಿಗೂ ಚುನಾವಣೆ ಮಾಡಲಿಲ್ಲ.
ಆಗ ಮೈತ್ರಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಒಪ್ಪಲಿಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಏನು ಮಾಡಲು ಆಗಲಿಲ್ಲ. ಈಗಲೂ ಜೆಡಿಎಸ್‌- ಬಿಜೆಪಿ ಮೈತ್ರಿ ಈ ಭಾಗದಲ್ಲಿ ಜನ ಒಪ್ಪಲ್ಲ. ಎದುರಾಳಿ ನೋಡಿ ನಾವು ಚುನಾವಣೆ ಮಾಡಲ್ಲ. ಯಾರೇ ಅಭ್ಯರ್ಥಿ ಆದರೂ ನಾವು ತಲೆ ಕೆಡಿಸಿಕೊಳ್ಳಲ್ಲ. ನಮ್ಮ ಜನರ ಮೇಲೆ ನಂಬಿಕೆ ಇದೆ ಎಂದರು.

ಒಡೆದ ಮಡಿಕೆ

ಬಿಜೆಪಿ-ಜೆಡಿಎಸ್ ಒಡೆದ ಮಡಿಕೆಯಾಗಿದ್ದು,ಇವರಮೈತ್ರಿ ಧಿಕ್ಕರಿಸಿ ಜನರು ನಮ್ಮನ್ನು ಬೆಂಬಲಿಸುತ್ತಾರೆ.ಸ್ಟಾರ್ ಚಂದ್ರು ಅವರನ್ನು ಒಂದು ತಿಂಗಳ ಮೊದಲೇ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಮಾಡಿದ್ದು,ಜನರು ಅವರನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಗಣಿಗ ರವಿಕುಮಾರ್,ಮಂಡ್ಯ ಲೋಕಸಭಾ ಅಭ್ಯರ್ಥಿ ಸ್ಟಾರ್  ಚಂದ್ರು (ವೆಂಕಟರಮಣೇಗೌಡ), ತಾ.ಪಂ.ಮಾಜಿ ಅಧ್ಯಕ್ಷ ತ್ಯಾಗರಾಜು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!