Friday, September 20, 2024

ಪ್ರಾಯೋಗಿಕ ಆವೃತ್ತಿ

ಭ್ರಷ್ಟಚಾರಿ ಮೋದಿ ಸರ್ಕಾರವನ್ನು ಕಿತ್ತೊಗೆಯಲು ಸ್ಟಾರ್ ಚಂದ್ರು ಬೆಂಬಲಿಸಿ : ದ್ಯಾವಪ್ಪ

ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ರೂ.ಗಳ ಹಗರಣ ನಡೆಸಿ ನಾನಾ ಕಾರ್ಪೋರೇಟ್ ಉದ್ಯಮಿಗಳಿಂದ ಹಣ ವಸೂಲಿ ಮಾಡಿರುವ ಆರೋಪದಲ್ಲಿ ಸಿಲುಕಿರುವ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಲು ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಬೇಕೆಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿಎಂ ದ್ಯಾವಪ್ಪ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆಯು ಯಾವುದೋ 3-4 ರಾಷ್ಟ್ರೀಯ ಪಕ್ಷಗಳ ಚುನಾವಣೆ ಅಲ್ಲವೇ ಅಲ್ಲ, ಸ್ವತಂತ್ರ ಭಾರತದ ನಂತರ ಅತ್ಯಂತ ನಿರ್ಣಾಯಕ ರಾಜಕೀಯ ಘಟ್ಟ ಇದು. ಈ ಚುನಾವಣೆ ಕೋಮುವಾದ ಮತ್ತು ಪ್ರಜಾಪ್ರಭುತ್ವದ ಮುಖಮುಖಿಯ ಹೋರಾಟ ಭ್ರಷ್ಟಾಚಾರದ ವಿರುದ್ಧ ನಿಂತಿರುವ ನ್ಯಾಯದ ಹೋರಾಟ 10 ವರ್ಷದಿಂದ ಈ ದೇಶಕ್ಕೆ ಅಂಟಿರುವ ದೊಡ್ಡ ಕಳಂಕವನ್ನು ತೊಡೆದು ಹಾಕಲು ಜನ ಸಾಮಾನ್ಯರು ನಿರ್ಧರಿಸಿದ್ದಾರೆ ಎಂದರು.

ಉದ್ಯಮಿಗಳ ಕೈಗೊಂಬೆ

ಮೋದಿ ಸರ್ಕಾರವು ಗೋದ್ರಾ ಘಟನೆಯಿಂದ ಹಿಡಿದು, ಉದ್ಯಮಿಗಳ ಕೈಗೊಂಬೆಯಾಗಿರುವುದು, ಸ್ವತಂತ್ರ ಸರ್ಕಾರಗಳನ್ನು ಅಪರೇಷನ್ ಮಾಡುವುದರ ಮೂಲಕ ಬೀಳಿಸುವುದು ಮತ್ತು ತೀರಾ ಇತ್ತೀಚೆಗೆ ಘನ ಸುಪ್ರಿಂ ಕೋರ್ಟ್ ಹೋರ ತಂದಂತಹ ಜಗತ್ತಿನಲ್ಲೇ ಅತ್ಯಂತ ದೊಡ್ಡ ಹಗರಣ ಆಗಬಹುದಾದಂತಹ ಚುನಾವಣಾ ಬಾಂಡ್ ಹಗರಣಗಳು, ಮೋದಿ ಭ್ರಷ್ಟಾಚಾರವನ್ನು ಜಗತ್ತಿಗೆ ತಿಳಿಸಿದೆ. ಭ್ರಷ್ಟಾಚಾರದ ಜೊತೆಗೆ ಫುಲ್ವಾಮದಲ್ಲಿ ನಮ್ಮ ಅಣ್ಣ ತಮ್ಮಂದಿರ ಅಮಾನವೀಯ ಸಾವು, ಮಣಿಪುರದಲ್ಲಿ ಸತತ ಒಂದು ವರ್ಷದಿಂದ ನಡೆಯುತ್ತಿರುವ ಹಿಂಸಾಚಾರ ಇಂತಹ ನೂರಾರು ಘಟನೆಗಳೂ ಮೋದಿ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕುಮಾರಸ್ವಾಮಿ ಕೊಡುಗೆ ಏನು ?

13 ತಿಂಗಳು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲೆಗೆ ನೀಡಿರುವ ಕೊಡುಗೆ ಏನು ? ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚಿಂತಿಸಲಿಲ್ಲ. ತಾಜ್ ವೆಸ್ಟೆಂಡ್‌ನಲ್ಲಿ ಕುಳಿತು ಆಡಳಿತ ನಡೆಸಲು ಹೋಗಿ ಅಧಿಕಾರ ಕಳೆದುಕೊಂಡಿರಿ, ಎಂಬುದು  ಜಿಲ್ಲೆಯ ಜನತೆಗೆ ಗೊತ್ತಿರುವ ಬಹಿರಂಗ ಸತ್ಯ ಎಂದು ಟೀಕಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಂಡ್ಯ ಸಕ್ಕರೆ ಕಾರ್ಖಾನೆ, ಕೃಷಿ ವಿಶ್ವವಿದ್ಯಾನಿಲಯದ ತರುವ ಕೆಲಸ ಮಾಡುತ್ತಿದ್ದಾರೆ. ಅವರ ಜನಪ್ರಿಯತೆ ಸಹಿಸದೆ ಬಿಜೆಪಿ ನಾಯಕರ ಓಲೈಕೆಗಾಗಿ ಸುಖಾ ಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಸಾಬೀತು ಪಡಿಸಿ ಎಂದು ಆಗ್ರಹಿಸಿದರು.

ಏ. 1ಕ್ಕೆ ನಾಮಪತ್ರ ಸಲ್ಲಿಕೆ

ಬರುವ ಏ.1ರಂದು ಸೋಮವಾರ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮಂಡ್ಯದಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಕ್ಷೇತ್ರ ಜನತೆ ಭಾಗವಹಿಸಬೇಕೆಂದರು.

ಅಂದು ಬೆಳಿಗ್ಗೆ ಮಂಡ್ಯನಗರದ ಕಾಳಿಕಾಂಭ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮೆರವಣಿಗೆಯಲ್ಲಿ ಅಭ್ಯರ್ಥಿಯಾದ ವೆಂಕಟರಮಣಗೌಡ (ಸ್ಟಾರ್ ಚಂದ್ರು) ನಾಮಪತ್ರ ಸಲ್ಲಿಸಲಿದ್ದಾರೆ. ಈ ಬೃಹತ್ ಮೆರವಣಿಗೆಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜಿವಾಲಾ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ  ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ ಎಂದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!