Thursday, September 19, 2024

ಪ್ರಾಯೋಗಿಕ ಆವೃತ್ತಿ

2 ಲಕ್ಷ ಮತಗಳ ಅಂತರದಲ್ಲಿ ಸ್ಟಾರ್ ಚಂದ್ರು ಗೆಲುವು: ಡಿ.ಕೆ.ಶಿವಕುಮಾರ್

ಮಂಡ್ಯ ಲೋಕಸಭಾ ಕ್ಷೇತ್ರದ ಜನತೆ ಕೆ.ವಿ.ಶಂಕರಗೌಡ, ಶಿವನಂಜಪ್ಪ ಹಾಗೂ ಜಿ. ಮಾದೇಗೌಡರನ್ನು ಆರಿಸಿ ಸಂಸತ್ತಿಗೆ ಕಳುಹಿಸಿದಂತಹ ಘನತೆಯನ್ನು ಹೊಂದಿದ್ಧಾರೆ, ಕ್ಷೇತ್ರದ ಮತದಾರರು  ಜಿಲ್ಲೆಯ ಸ್ವಾಭಿಮಾನವನ್ನು ಬೇರೆ ಜಿಲ್ಲೆಯವರಿಗೆ ಬಿಟ್ಟುಕೊಟ್ಟ ಇತಿಹಾಸವೇ ಇಲ್ಲ, ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವುದು ನಿಶ್ಚಿತ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಸ್ತೋಮವನ್ನುದ್ಧೇಶಿಸಿ ಮಾತನಾಡಿದ ಅವರು, ಸ್ಟಾರ್ ಚಂದ್ರು ಅವರು ಸರಳ, ಸಜ್ಜನ, ಉದ್ಯಮಿಯಾಗಿದ್ದು 3 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಅಂತಹವರನ್ನು ಜಿಲ್ಲೆಯ ಮತದಾರರು ಚುನಾಯಿಸಿ ಲೋಕಸಭೆಗೆ ಕಳುಹಿಸಬೇಕು ಎಂದರು.

ಅನ್ಯರಿಗೆ ಬೆಂಬಲ ನೀಡಿರುವ ಉದಾಹರಣೆಯಿಲ್ಲ

ಇಂದು ಸ್ಟಾರ್ ಚಂದ್ರು ಪರವಾಗಿ ಮಂಡ್ಯ ಜಿಲ್ಲೆಯ ಮಹಾಜನತೆ ಸ್ವಾಭಿಮಾನದ ನಾಮಪತ್ರ ಸಲ್ಲಿಸಿದ್ಧಾರೆ, ಮಂಡ್ಯ ಎಂದರೆ ಇಂಡಿಯಾ ಎಂಬ ಮಾತಿದೆ. ಮಂಡ್ಯದಲ್ಲಿ ಎಂ.ಕೆ.ಶಿವನಂಜಪ್ಪ, ಕೆ.ವಿ.ಶಂಕರಗೌಡ, ಜಿ.ಮಾದೇಗೌಡ, ಎಸ್.ಎಂ.ಕೃಷ್ಣರಂತಹ ನಾಯಕರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಗೌಡಿಕೆ ಮತ್ತು ಸ್ವಾಭಿಮಾನ ಬಿಟ್ಟು ಅನ್ಯರಿಗೆ ಬೆಂಬಲ ನೀಡಿರುವ ಉದಾಹರಣೆ ಜಿಲ್ಲೆಯ ಇತಿಹಾಸದಲ್ಲಿಲ್ಲ ಎಂಬುದನ್ನು ನಮ್ಮ ಎದುರಾಳಿಗಳು ಅರಿಯಬೇಕೆಂದರು.

2019ರ ಲೋಕಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾಗ, ನಾವು ಅವರನ್ನು ಬೆಂಬಲಿಸಿದ್ದೇವು, ಆನಂತರ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬಿಜೆಪಿಯವರೇ ಕೆಳಗಿಳಿಸಿದರು. ಈಗ ಅವರು ಅದೇ ಪಕ್ಷದವರೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇದರಿಂದ ಜೆಡಿಎಸ್ ಪಕ್ಷಕ್ಕೆ ಯಾವುದೇ ಲಾಭವಿಲ್ಲ ಎಂದರು.

8 ಜನ ಒಕ್ಕಲಿಗರಿಗೆ ಭಿ.ಪಾರಂ

ಲೋಕಸಭಾ ಚುನಾವಣೆಯಲ್ಲಿ 8 ಜನ ಒಕ್ಕಲಿಗರಿಗೆ ಹಾಗೂ 6 ಜನ ಮಹಿಳೆಯರ ಸ್ಪರ್ಧೆಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿರುವ ಕಾರಣಕ್ಕೆ ಇದು ಸಾಧ್ಯವಾಯಿತು. ಅದೇ ರೀತಿ ನಿಮ್ಮೆಲ್ಲರ ಆಸೆಯಂತೆ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಚುನಾಯಿತರಾಗಲಿದ್ದಾರೆಂದರು.

20 ಸ್ಥಾನಗಳಲ್ಲಿ ಗೆಲುವು

ಹಾಸನದಲ್ಲಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ನಾಲ್ಕನೇ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಲಿದ್ದಾರೆ. ಅದೇ ರೀತಿ ಮಂಡ್ಯ ಜಿಲ್ಲೆಯ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಜಿಲ್ಲೆಯ ಮತದಾರರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಿಮ್ಮ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅಭ್ಯರ್ಥಿ ಎಂದು ತಿಳಿದು ಚುನಾಯಿಸಬೇಕು. ಆ ಮೂಲಕ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲು ಆಶೀರ್ವದಿಸಬೇಕೆಂದು ಮನವಿ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!