ಮಂಡ್ಯ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಜನಸ್ತೋಮದ ಭವ್ಯ ಮೆರವಣಿಗೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿಗೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ತಮ್ಮ ನಾಮಪತ್ರ ಸಲ್ಲಿಸಿದರು.
ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಮುಖಂಡರು ಸಾಥ್ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೀಗೌಡ ಬೆಂಗಳೂರಿನಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿಜೀಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮಂಡ್ಯನಗರದ ವಿದ್ಯಾಗಣಪತಿ ದೇವಸ್ಥಾನದಲ್ಲಿ ವಿಘ್ನೇಶ್ವರನಿಗೆ ಪ್ರಥಮ ಪೂಜೆ ಸಲ್ಲಿಸಿ ನಂತರ ಅರ್ಕೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬಳಿಕ ಶ್ರೀಲಕ್ಷ್ಮಿಜನಾರ್ಧನಸ್ವಾಮಿ ದೇವಾಲಯದಲ್ಲಿಯೂ ಪೂಜೆ ಸಲ್ಲಿಸಿದರು.
ನಗರದ ಶಕ್ತಿದೇವತೆ ಶ್ರೀಕಾಳಿಕಾಂಭ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಹಲವು ಕಲಾಪ್ರಕಾರಗಳ ಭವ್ಯ ಪ್ರದರ್ಶನ ಹಾಗೂ ಸಹಸ್ರಾರು ಜನರ ಜಯಘೋಷದೊಂದಿಗೆ ಎಂ.ಸಿ.ರಸ್ತೆಯುದ್ದಕ್ಕೂ ಮೆರವಣಿಗೆಯಲ್ಲಿ ಸಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆಯನ್ನು ಸ್ಟಾರ್ ಚಂದ್ರು ಸಲ್ಲಿಸಿದರು.
ಪಕ್ಷದ ಕಾರ್ಯಕರ್ತರ ಹರ್ಷೋದ್ಗಾರ, ಜೈಕಾರದ ನಡುವೆ ಮೆರವಣಿಗೆ ಜನಸಾಗರದ ನಡುವೆ ಸಾಗಿತು, ಜನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಪಕ್ಷದ ಕಾರ್ಯಕರ್ತರ ಹರ್ಷೋದ್ಗಾರ, ಜೈಕಾರದ ನಡುವೆ ಮೆರವಣಿಗೆ ಜನಸಾಗರದ ನಡುವೆ ಸಾಗಿತು, ಜನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಕಾಂಗ್ರೆಸ್ ನಾಯಕರ ಭಾವಚಿತ್ರ, ಪಕ್ಷದ ಬಾವುಟ ಹಾಗೂ ಟೋಪಿಗಳು ರಾರಾಜಿಸಿದವು.
ತೆರೆದ ವಾಹನದ ಮೆರವಣಿಗೆಯಲ್ಲಿದ್ದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಬರದ ಬೇಗೆಯಲ್ಲಿ ನಲುಗುತ್ತಿರುವ ರಾಜ್ಯದ ಜನ-ಜಾನುವಾರುಗಳ ನೆರವಿಗೆ ನಯಾಪೈಸೆ ಪರಿಹಾರ ನೀಡದ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಗ್ದ ಜನರನ್ನು ವಂಚಿಸುತ್ತಿದ್ದು, ಇದನ್ನು ಮೆಟ್ಟಿ ನಿಲ್ಲಲು ಸೂಕ್ತ ಸಮಯ ಒದಗಿ ಬಂದಿದೆ. ಮಂಡ್ಯ ಜಿಲ್ಲೆಯ ಮಣ್ಣಿನ ಮಕ್ಕಳ ಚುನಾವಣೆಗೆ ಜಯ ದೊರಕಿಸಲು ಮತದಾರರು ಆಶೀರ್ವದಿಸಬೇಕೆಂದರು.
ಮಂಡ್ಯ ಜಿಲ್ಲೆ ರಾಜಕೀಯ ಪ್ರಜ್ಞೆವುಳ್ಳ ಮತದಾರರನ್ನು ಹೊಂದಿದೆ, ಜಿಲ್ಲೆಯ ಸ್ವಾಭಿಮಾನವನ್ನು ದೇಶ ವ್ಯಾಪಿ ಪಸರಿಸುವ ಕಾಲ ಒದಗಿ ಬಂದಿದ್ದು, ಸೂಕ್ತ ತೀರ್ಮಾಣ ಕೈಗೊಳ್ಳಬೇಕೆಂದರು.
ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿ, ಮಂಡ್ಯ ಜಿಲ್ಲೆಯ ಜನರ ಪ್ರೀತಿಗೆ ತಲೆಬಾಗಿ ಚುನಾವಣೆ ಸ್ಪರ್ಧಿಸಿದ್ದೇನೆ, ನನಗೆ ಹಣದ ಅವಶ್ಯಕತೆ ಇಲ್ಲ, ತಾಯಿ ಕಾವೇರಿ ಹಾಗೂ ನನ್ನ ತಾಯಿಯ ಆಣೆ ನಾನು ಯಾವುದೇ ಪ್ರತಿಫಲಾಪೇಕ್ಷೆ ಇಟ್ಟುಕೊಂಡು ರಾಜಕಾರಣ ಪ್ರವೇಶಿಸಿಲ್ಲ, ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ದಿಯೇ ನನ್ನ ಆಶಯ ಎಂದರು.




