Friday, September 20, 2024

ಪ್ರಾಯೋಗಿಕ ಆವೃತ್ತಿ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಕೆಲಸ ಮಾಡುತ್ತೇನೆಂದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್

ಬಿಜೆಪಿ ಏನು ಬೇಕಾದರೂ ಮಾಡಿಕೊಳ್ಳಲಿ, ಲೋಕಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ ಪರ ಕೆಲಸ ಮಾಡುತ್ತೇನೆ ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಕೆಂಗೇರಿಯಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಟಿ ಸೋಮಶೇಖರ್‌, ಲೋಕಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರಕ್ಕೆ ಯಾರು ಸಹಾಯ ಮಾಡುತ್ತಾರೆ ಅವರನ್ನು ಬೆಂಬಲಿಸುತ್ತೇನೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ಶೋಭಾ ಕರಂದ್ಲಾಜೆ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದ ಸೋಮಶೇಖರ್‌, ಚಿಕ್ಕಮಗಳೂರಿನಿಂದ ‘ಗೋ ಬ್ಯಾಕ್’ ಎಂದು ಹೊರ ಹಾಕಿದವರನ್ನು ತಂದು  ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಅಂತಹವರನ್ನು ಬೆಂಗಳೂರಿನವರು ಸ್ವಾಗತ ಮಾಡಬೇಕಾ? ಲೋಕಸಭೆ ಅಭ್ಯರ್ಥಿ ಘೋಷಣೆಯಾಗಿದೆ, ನನ್ನನ್ನು ಸಂಪರ್ಕಿಸಿ ಯಾರು ಕೂಡ ನನಗೆ ಬೆಂಬಲ ಕೊಡಿ ಎಂದು ಕೇಳಿಲ್ಲ. ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೂ, ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಇದರಿಂದಾಗಿ ನಾನು ಸಭೆ ಕರೆದಿದ್ದೇನೆ.  ಈಗ ಸುಮ್ಮನಿದ್ದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎಂದು ಸೋಮಶೇಖರ್ ಹೇಳಿದ್ದಾರೆ.

ಬಿಜೆಪಿಯವರು ಏನೆಲ್ಲಾ ಅವಮಾನ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. ರಾಜ್ಯ ಮತ್ತು ಕೇಂದ್ರದ ನಾಯಕರು ಸೇರಿಕೊಂಡು ನನಗೆ ಅವಮಾನ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಬಂದರೂ ನನಗೆ ಆಹ್ವಾನ ನೀಡಿಲ್ಲ. ಇದೇ ಕಾರಣಕ್ಕೆ ಇವತ್ತು ಕಾರ್ಯಕರ್ತರ ಸಭೆ ಕರೆದಿದ್ದೇನೆ. ನಮ್ಮ ಅವಶ್ಯಕತೆ ಇಲ್ಲದವರು ಬಳಿ ನಾವೇಕೆ ಹೋಗಬೇಕು? ಎಂದು ಹೇಳಿದ್ದಾರೆ.

ಇನ್ನು ಬಿಜೆಪಿಯ ಯಾರು ಬಂದು ಕೇಳಿದರೂ ನಾನು ಬೆಂಬಲ ನೀಡುವುದಿಲ್ಲ. ನನಗೆ ಯಾವ ಹೈಕಮಾಂಡ್ ಇಲ್ಲ. ನನಗೆ ನನ್ನ ಕ್ಷೇತ್ರದ ಮತದಾರು ಹೈಕಮಾಂಡ್. ಮತದಾರರ ತೀರ್ಮಾನವೇ ನನ್ನ ಅಂತಿಮ ನಿರ್ಧಾರ. ಕಾಂಗ್ರೆಸ್ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ.

ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಎಸ್.ಟಿ.ಸೋಮಶೇಖರ್ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅಡ್ಡಮತದಾನ ಮಾಡಿ ಸುದ್ದಿಯಾಗಿದ್ದರು. ಯಾರು ನನ್ನ ಕ್ಷೇತ್ರಕ್ಕೆ ಅನುದಾನ ಕೊಡುವುದಾಗಿ ಭರವಸೆ ನೀಡಿದ್ದಾರೋ, ಅವರಿಗೆ ಮತ ಹಾಕಿದ್ದೇನೆ. ಇದುವರೆಗೆ ಪಕ್ಷ ಹೇಳಿದ ಹಾಗೆ ಕೇಳಿದ್ದೇನೆ. ಆದರೆ, ಈ ಬಾರಿ ನನ್ನ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಕೊಡುವುದಾಗಿ ಭರವಸೆ ನೀಡಿದವರ ಪರ ಮತ ಚಲಾಯಿಸಿದ್ದೇನೆ ಎಂದು ಹೇಳಿದ್ದರು.

ಅಡ್ಡಮತದಾನದ ಹಿನ್ನೆಲೆ ಎಸ್‌ಟಿ ಸೋಮಶೇಖರ್‌ ವಿರುದ್ಧ ಕ್ರಮಕೈಗೊಳ್ಳುವುದಾಗಿ ಬಿಜೆಪಿ ನಾಯಕರು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸೋಮಶೇಖರ್‌, ನನ್ನ ಹೆದರಿಸುವ ಮಗ ಇನ್ನೂ ಹುಟ್ಟಿ ಬಂದಿಲ್ಲ. ಬಿಜೆಪಿಯವರು ಏನು ಮಾಡುತ್ತಾರೋ ಮಾಡಿಕೊಳ್ಳಲಿ. ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!