Friday, September 20, 2024

ಪ್ರಾಯೋಗಿಕ ಆವೃತ್ತಿ

ಡಾ.ಯತೀಂದ್ರಗೆ ಎಂ.ಎಲ್.ಸಿ ಸ್ಥಾನ ಸಿಎಂ ಸಿದ್ದರಾಮಯ್ಯ ವಿಶ್ವಾಸ

ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್​​ನವರು ಎಂಎಲ್​ಸಿ ಮಾಡುವುದಾಗಿ ಹೇಳಿದ್ದರು. ಕಾದು ನೋಡಬೇಕು. ನಿಮ್ಮನ್ನು ಎಮ್‌ಎಲ್‌ಸಿ ಮಾಡುತ್ತೇವೆ, ನಿಮ್ಮ ತಂದೆಯವರಿಗೆ ಕ್ಷೇತ್ರ ಬಿಟ್ಟು ಕೊಡಿ ಅಂತ ಯತೀಂದ್ರ ಅವರಿಗೆ ಹೈಕಮಾಂಡ್‌ ಹೇಳಿತ್ತು. ವರಿಷ್ಠರ ಮಾತಿಗೆ ತಲೆ ಬಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಾನು ಕೋಲಾರದಿಂದ ಸ್ಪರ್ಧಿಸಬೇಕು ಅಂದುಕೊಂಡಿದ್ದೆ. ಇಲ್ಲ ನೀವು ವರುಣಾದಿಂದ ಸ್ಪರ್ಧೆ ಮಾಡಿ ಅಂತ ಹೈಕಮಾಂಡ್‌ ಹೇಳಿದರು. ಯತೀಂದ್ರ ಅವರನ್ನು ಎಮ್‌ಎಲ್‌ಸಿ ಮಾಡುತ್ತಾರಾ ಕಾದು ನೋಡಬೇಕು” ಎಂದರು.

40 ಪೋನ್​ಗಳನ್ನು ಸರ್ಕಾರ ಟ್ಯಾಪ್​ ಮಾಡಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ​ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, “ಪ್ರಜ್ವಲ್​ ರೇವಣ್ಣ ಅವರ ಪ್ರಕರಣವನ್ನು ಡೈವರ್ಟ್​ ಮಾಡಲು ಕುಮಾರಸ್ವಾಮಿ ಅವರು ಏನೇನೋ ಹೇಳುತ್ತಿದ್ದಾರೆ. ಕುಮಾರಸ್ವಾಮಿ ಈ ನೆಲದ ಕಾನೂನಿಗೆ ಗೌರವ ಕೊಡಬೇಕು” ಎಂದು ಹೇಳಿದರು.

“ಪ್ರಜ್ವಲ್ ರೇವಣ್ಣ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳಿವೆ. ಈ ವಿಚಾರವನ್ನು ಡೈವರ್ಟ್ ಮಾಡಲು ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್​ ಅವರ ಹೆಸರು ಹೇಳುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣರನ್ನು ನಾನು ಅಪರಾಧಿ ಅಂತ ಎಲ್ಲೂ ಹೇಳಿಲ್ಲ. ನಾನು ಸಹ ಆರೋಪಿ ಅಂತಲೇ ಹೇಳುತ್ತಿರುವುದು” ಎಂದು ತಿರುಗೇಟು ನೀಡಿದರು.

“ಪ್ರಜ್ವಲ್​ ರೇವಣ್ಣ ದೇವೇಗೌಡರು ಹಾಗೂ ಅವರ‌ ಮನೆಯವರಿಗೆ ಗೊತ್ತಿಲ್ಲದೇ ಮನೆಯಿಂದ ಹೋಗಿದ್ದಾನಾ? ಪ್ರಜ್ವಲ್ ಅವರ ಕುಟುಂಬದವರ ಸಂಪರ್ಕದಲ್ಲಿ ಇಲ್ಲವಾ? ಮೊದಲಿನಿಂದ ಪ್ರಜ್ವಲ್ ನನ್ನ ಸಂಪರ್ಕದಲ್ಲಿ ಇಲ್ಲ. ಪ್ರಜ್ವಲ್ ಪರ ಪ್ರಚಾರಕ್ಕೆ ಹೋದಾಗ ನನ್ನ ಮಗ ಎಂದಿದ್ದರು. ಆ ಹೇಳಿಕೆ ಅವರ ಸಂಪರ್ಕದಲ್ಲಿ ಇದ್ದ ಹಾಗೆ ಅಲ್ವಾ” ಎಂದು ಪ್ರಶ್ನಿಸಿದರು.

“ಪ್ರಜ್ವಲ್​ ರೇವಣ್ಣನ ಪಾಸ್​​ಪೋರ್ಟ್​ ರದ್ದು ಮಾಡುವಂತೆ ನಾನು ಪ್ರಧಾನಿ ಮೋದಿಯವರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನನ್ನ ಪತ್ರಕ್ಕಂತೂ ಈವರೆಗೂ ಪ್ರಧಾನಿ ಉತ್ತರವನ್ನ ಕೊಟ್ಟಿಲ್ಲ. ಒಬ್ಬ ಸಿಎಂ ಪತ್ರ ಬರೆದಾಗ ಉತ್ತರ ಕೊಡುತ್ತಾರೆಂದು ವಿಶ್ವಾಸವಿದೆ. ನೋಡೋಣ ಎರಡನೇ ಪತ್ರಕ್ಕಾದರೂ ಉತ್ತರ ಕೊಡುತ್ತಾರಾ?” ಎಂದರು.

ಲೋಕಸಭೆ ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆ

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗೆ ಚುನಾವಣೆ ನಡೆಸಲು ನಾವು ತಯಾರಿದ್ದೇವೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ಚುನಾವಣೆ ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಮೊದಲು ಕ್ಷೇತ್ರ ಪುನರ್ ವಿಂಗಡನೆ ಆಗುತ್ತದೆ. ನಂತರ ಮೀಸಲಾತಿ ಪ್ರಕಟಿಸುತ್ತೇವೆ” ಎಂದು ವಿವರಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!