Wednesday, October 23, 2024

ಪ್ರಾಯೋಗಿಕ ಆವೃತ್ತಿ

ನೀಟ್ ಅಕ್ರಮ| ಮೋದಿಯ ‘ಪರೀಕ್ಷಾ ಪೇ ಚರ್ಚಾ’ ದೊಡ್ಡ ಕಾಮಿಡಿ ಶೋ ಎಂದ ಖರ್ಗೆ

ಯುಜಿಸಿ ನೀಟ್‌ ಪರೀಕ್ಷೆಗಳ ಅಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರು ಪ್ರತಿ ವರ್ಷ ನಡೆಸುವ ‘ಪರೀಕ್ಷಾ ಪೇ ಚರ್ಚಾ’ ದೊಡ್ಡ ತಮಾಷೆಯಾಗಿದ್ದು, ಮೋದಿ ಸರ್ಕಾರವು ‘ಸೋರಿಕೆ ಹಾಗೂ ಅಕ್ರಮಗಳಿಲ್ಲದೆ’ ಪರೀಕ್ಷೆ ನಡೆಸುವುದಕ್ಕೆ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಕ್ಸ್‌’ನಲ್ಲಿ ಬರೆದುಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿಯವರು ಯಾವ ರೀತಿಯ ಪರೀಕ್ಷೆ ಪೇ ಚರ್ಚಾ ನಡೆಸುತ್ತಾರೆ. ಪ್ರತಿ ದಿನವೂ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿವೆ. ಮೋದಿ ಸರ್ಕಾರ ದೇಶದ ಶಿಕ್ಷಣ ಹಾಗೂ ನೇಮಕಾತಿ ವ್ಯವಸ್ಥೆಯನ್ನು ಹಾಳುಗೆಡವಿದೆ. ನೀಟ್‌, ಯುಜಿಸಿ, ಸಿಯುಇಟಿಯಲ್ಲಿ ಪ್ರಶ್ನೆ ಪತ್ರಿಕೆ, ಅಕ್ರಮ ಹಾಗೂ ವಂಚನೆಗಳು ನಿತ್ಯವು ಬಯಲಾಗುತ್ತಿವೆ. ಹೆಚ್ಚು ಪ್ರಚಾರ ಪಡೆದಿರುವ ರಾಷ್ಟ್ರೀಯ ನೇಮಕಾತಿ ಸಂಸ್ಥೆ(ಎನ್‌ಆರ್‌ಎ) ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ಕಿಡಿಕಾರಿದರು.

“ಆಗಸ್ಟ್‌ 2020ರಲ್ಲಿ ಮೋದಿ ಎನ್‌ಆರ್‌ಎ ಬಗ್ಗೆ ಸಾಕಷ್ಟು ಪ್ರಚಾರದೊಂದಿಗೆ ಬಡಾಯಿ ಕೊಚ್ಚಿಕೊಂಡಿದ್ದರು. ಎನ್‌ಆರ್‌ಎ ಕೋಟ್ಯಂತರ ಯುವಕರಿಗೆ ವರದಾನವಾಗಿದೆ ಎಂದು ಹೇಳಿದ್ದರು. ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಅತ್ಯಮೂಲ್ಯ ಸಮಯ ಹಾಗೂ ಸಂಪನ್ಮೂಲ ಉಳಿಕೆಯೊಂದಿಗೆ ಹಲವು ಪರೀಕ್ಷೆಗಳನ್ನು ಕೈಗೊಂಡು ಪಾರದರ್ಶಕವಾಗಿರುತ್ತದೆ ಎಂದು ಹೇಳಿದ್ದರು. ಆದರೆ ನಾಲ್ಕು ವರ್ಷ ಕಳೆದರೂ ಒಂದೇಒಂದು ಪರೀಕ್ಷೆಯನ್ನು ಎನ್‌ಆರ್‌ಎ ಆಯೋಜಿಸಿಲ್ಲ” ಎಂದು ಖರ್ಗೆ ಆಕ್ರೋಶ ಹೊರಹಾಕಿದರು.

ಎನ್‌ಆರ್‌ಎ ಸಂಸ್ಥೆಗೆ 1517.57 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಆದರೆ ಡಿಸೆಂಬರ್‌ 2022ರವರೆಗೂ ಎನ್‌ಆರ್‌ಎ ಕೇವಲ 20 ಕೋಟಿ ರೂ. ಮಾತ್ರ ವೆಚ್ಚ ಮಾಡಿದೆ. ಈ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆಕೇಳಿದರೆ ಮೋದಿ ಸರ್ಕಾರ ಸಮರ್ಥನೆ ನೀಡುವ ಮೂಲಕ ಕಾಲಹರಣ ಮಾಡುತ್ತಲೇ ಇದೆ. ಎನ್‌ಆರ್‌ಎಯನ್ನು ಪರೀಕ್ಷೆಗಳನ್ನು ಕೈಗೊಳ್ಳುವ ಸಂಸ್ಥೆಯನ್ನಾಗಿ ಮಾಡದೆ ಕೆಳಹಂತದ ವಿದ್ಯಾರ್ಥಿಗಳನ್ನು ಪರೀಕ್ಷಿಸುವ ಏಜೆನ್ಸಿಯನ್ನಾಗಿ ಮಾಡಲಾಗಿದೆ ಎಂದು ಖರ್ಗೆ ಆರೋಪಿಸಿದರು.

“ಮೋದಿ ಸರ್ಕಾರ 30 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದೆ,ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಬಡ ಯುವಕರ ಮೀಸಲಾತಿ ಕಿತ್ತುಕೊಳ್ಳಲು ಯೋಜಿತ ಸಂಚು ರೂಪಿಸಿದೆ. ಆರ್‌ಟಿಐ ಮಾಹಿತಿಯ ಪ್ರಕಾರ ಪ್ರಧಾನಿ ಮೋದಿ ಅವರ ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮಕ್ಕೆ ಕಳೆದ 6 ವರ್ಷಗಳಲ್ಲಿ ಶೇ.175 ರಷ್ಟು ಅನುದಾನವನ್ನು ಹೆಚ್ಚಿಸಲಾಗಿದೆ. ಇಷ್ಟೆಲ್ಲ ನಡೆಸಿದರೂ ದೇಶಾದ್ಯಂತ ಪ್ರಾಮಾಣಿಕವಾಗಿ ಪರೀಕ್ಷೆ ನಡೆಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ” ಎಂದು ಖರ್ಗೆ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!