Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಕೃಷ್ಣರಾಜ ಸಾಗರ ಜಲಾಶಯದಿಂದ ನಾಲೆಗಳಿಗೆ ಕೂಡಲೇ ನೀರು ಹರಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ಸಂಜಯ ವೃತ್ತದಿಂದ ನಿಗಮದ ಕಚೇರಿ ತೆರಳಿದ ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಚೇರಿಗೆ ನುಗ್ಗಲು ಯತ್ನಿಸಿದರು, ಪೊಲೀಸರು ಗೇಟ್ ಮುಚ್ಚಿ ಕಾರ್ಯಕರ್ತರನ್ನು ತಡೆದಾಗ ಕೆಲಕಾಲ ಧರಣಿ ನಡೆಸಿದರು.

ರೈತ ಮೋರ್ಚಾ ರಾಜ್ಯ ಮುಖಂಡ ಡಾ.ನವೀನ್ ಮಾತನಾಡಿ, ಕಳೆದ ವರ್ಷ ಬರಗಾಲದಿಂದ ನೀರಿಲ್ಲದೆ ಎರಡು ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ, ಇದ್ದ ನೀರು ತಮಿಳುನಾಡು ಪಾಲಾಯಿತು, ಇದೀಗ ಕೃಷ್ಣರಾಜಸಾಗರ ಅಚ್ಚುಕಟ್ಟು ಪ್ರದೇಶದ ವಿ ಸಿ ನಾಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ನಾಲೆಗಳಿಗೆ ನೀರುಹರಿಸಲು ಸರ್ಕಾರ ಕಾಮಗಾರಿಯ ನೆಪ ಹೇಳುತ್ತಿದೆ ಎಂದು ದೂರಿದರು.

ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಶ್ವನಾಥ್ ಎಂ ಸ್ಥಳಕ್ಕೆ ಭೇಟಿ ನೀಡಿ ಸದ್ಯಕ್ಕೆ ಕೃಷ್ಣರಾಜಸಾಗರಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ, ಜಲಾಶಯದಲ್ಲಿ 92.80 ನೀರು ಸಂಗ್ರಹವಾಗಿದೆ, ನಾಲಾ ಅಭಿವೃದ್ಧಿ ಕಾಮಗಾರಿ 28 ಕಿ.ಮೀ ಮುಗಿದಿದ್ದು, 12 ಕಿ.ಮೀ ಬಾಕಿ ಇದೆ, ಜುಲೈ ಮೊದಲ ವಾರದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು ಅಲ್ಲಿ ಚರ್ಚಿಸಿ ನಾಲೆಗಳಿಗೆ ನೀರು ಬಿಡುವ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಮುಖಂಡರಾದ ಡಾ. ಸಿದ್ದರಾಮಯ್ಯ, ಅಶೋಕ್ ಜಯರಾಮ್, ಹನಿಯಂಬಾಡಿ ನಾಗರಾಜು, ಮಂಜುನಾಥ್, ಸತೀಶ್, ನಾಗರಾಜು, ಲಿಂಗರಾಜು, ಜವರೇಗೌಡ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!