Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪೆನ್ ಡ್ರೈವ್ ಪ್ರಕರಣ ಸಿಬಿಐ ತನಿಖೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡವಿದ್ದು, ಎಸ್ ಐ ಟಿ ತನಿಖೆ ರದ್ದು ಮಾಡಿ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾವಣೆಗೊಂಡ ನೂರಾರು ಜೆಡಿಎಸ್ ಕಾರ್ಯಕರ್ತರು ಪೆನ್ ಡ್ರೈವ್ ಬಯಲು ಮಾಡಿ ಹೆಣ್ಣುಮಕ್ಕಳು ಮರ್ಯಾದೆ ಕಳೆಯಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಕುಟುಂಬಕ್ಕೆ ಚ್ಯುತಿ ತರಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಷಡ್ಯಂತ್ರ ನಡೆಸಿದ್ದಾರೆಂದು
ಆರೋಪಿಸಿದ ಜೆಡಿಎಸ್ ಕಾರ್ಯಕರ್ತರು ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಎಲ್‌.ಆರ್.ಶಿವರಾಮೇಗೌಡ ಅವರ ಭಾವಚಿತ್ರಕ್ಕೆ “ರಾಜಕೀಯ ಶಿಖಂಡಿ”  ಹಾಗೂ ಡಿ.ಕೆ.ಶಿವಕುಮಾರ್ ಭಾವಚಿತ್ರಕ್ಕೆ ಸಿ‌.ಡಿ ಮಾಸ್ಟರ್ ಎಂದು ಬರೆದು ಪ್ರತಿಕೃತಿಗೆ ಪೊರಕೆ ಸೇವೆ ಮಾಡಿದರು.

ಇದೇ ವೇಳೆ ಪೊಲೀಸರು ಡಿ.ಕೆ ಶಿವಕುಮಾ‌ರ್ ಪ್ರತಿ ಕೃತಿಯನ್ನು ಹೊತ್ತೊಯ್ದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.ತರುವಾಯ ಜೆಡಿಎಸ್ ಕಾರ್ಯಕರ್ತರು ಮಾಜಿ ಸಂಸದ ಎಲ್.ಆರ್‌ ಶಿವರಾಮೇಗೌಡ ಪ್ರತಿ ಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು, ಪ್ರಜ್ವಲ್ ರೇವಣ್ಣ ವಿರುದ್ಧ ಪೆನ್ ಡ್ರೈವ್ ಹಂಚಿಕೆ ಮಾಡಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬಕ್ಕೆ ಕಳಂಕ ತರಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.ಪೆನ್ ಡ್ರೈವ್ ಹಿಂದಿನ ರಾಜಕೀಯ ದುರುದ್ದೇಶ ಬಯಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾ‌ರ್, ಎಲ್. ಆರ್. ಶಿವರಾಮೇಗೌಡ ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಹೇಳಿದರು.

ಬೀದಿ ಬೀದಿಯಲ್ಲಿ ಪೆನ್ ಡ್ರೈವ್ ಹಂಚಿಕೆ ಮಾಡುವ ಮೂಲಕ ಮಹಿಳೆಯರ ಮಾನ ಹಾನಿ ಮಾಡಲಾಗಿದೆ. ಪೆನ್ ಡ್ರೈವ್ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ.ಇದರ ಸತ್ಯಾಸತ್ಯತೆ ಹೊರ ಬರಲು ರಾಜ್ಯದ ಕಾಂಗ್ರೆಸ್‌ ಸರ್ಕಾರ ವಿಶೇಷ ತನಿಖಾ ತಂಡದ ಮೇಲೆ ಪ್ರಭಾವ ಬೀರುತ್ತಿರುವುದು ಬೆಳಕಿಗೆ ಬರುತ್ತಿದೆ.ಈ ಹಿನ್ನಲೆಯಲ್ಲಿ ಎಸ್‌ಐಟಿ ತನಿಖೆ ಕೈ ಬಿಟ್ಟು ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.

ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ,ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ.ಆದರೆ ರಾಜ್ಯ ಸರ್ಕಾರ ಈ ಪ್ರಕರಣದಲ್ಲಿರುವ ಮಹಿಳೆಯರ ಮಾನ, ಪ್ರಾಣ ಕಾಪಾಡಬೇಕಿತ್ತು.ಆದರೆ ಸರ್ಕಾರ ಒಂದು ಚುನಾವಣೆ ಗೆಲ್ಲಲು ಸಾವಿರಾರು ಹೆಣ್ಣುಮಕ್ಕಳ ಮಾನವನ್ನು ಬೀದಿಗೆ ತಂದಿದೆ.ಇದು ನಾಗರಿಕ ಸಮಾಜ ತಲೆತಗ್ಗಿಸುವ ಕೆಲಸ ಎಂದು ಕಿಡಿ ಕಾರಿದರು.

ರಾಹುಲ್ ಗಾಂಧಿಯವರು ಪ್ರಧಾನಿ ಅಭ್ಯರ್ಥಿ. ಅವರು ಪ್ರಜ್ವಲ್ ರೇವಣ್ಣ 400 ಅತ್ಯಾಚಾರ ಮಾಡಿದ್ದಾರೆ ಎಂದು ಹೇಳುವ ಮೂಲಕ ಎಸ್ಐಟಿ ತನಿಖೆ ನಡೆಯುವ ಹಂತದಲ್ಲೇ ಮಾತನಾಡಿದ್ದಾರೆ.ಇವರಿಗೆ ತನಿಖೆ ನಡೆಯುವ ಮುನ್ನವೇ ಈ ರೀತಿ ಮಾತನಾಡಲು ಅಧಿಕಾರ ಕೊಟ್ಟವರಾರು.ಪ್ರಧಾನಿ ಮೋದಿಯವರಿಗೆ ಮುಜುಗರ ಉಂಟು ಮಾಡಲು ಕಾಂಗ್ರೆಸ್ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ.ಇದು ನಾಚಿಕೆಗೇಡಿನ ಸಂಗತಿ ಎಂದರು.

ಮಾಜಿ ಶಾಸಕರುಗಳಾದ ಸುರೇಶ ಗೌಡ,ಅನ್ನದಾನಿ, ಶಾಸಕ ಎಚ್.ಟಿ. ಮಂಜು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ,
ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು,ನಗರಸಭಾ ಸದಸ್ಯ ನಾಗೇಶ್,ಮೀನಾಕ್ಷಿ,ಮಂಜುಳ,ಮುಖಂಡರಾದ ರಘುನಂದನ್, ಪುಟ್ಟಸ್ವಾಮಿ, ಅಮರಾವತಿ ಚಂದ್ರಶೇಖರ್, ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು,ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!