Thursday, September 19, 2024

ಪ್ರಾಯೋಗಿಕ ಆವೃತ್ತಿ

ಗಣಿಗಾರಿಕೆ ಬಗ್ಗೆ ವಾರದೊಳಗೆ ನೈಜ ವರದಿ ನೀಡಿ

ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳ ಬಗ್ಗೆ ಒಂದು ವಾರದೊಳಗೆ ನೈಜ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ. ಗೋಪಾಲಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಜಿಲ್ಲೆಯಲ್ಲಿ ಜನರಿಗೆ ಮನೆ ಕಟ್ಟಲು, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಲ್ಲಿ,ಎಂ.ಸ್ಯಾಂಡ್ ಸಿಗುತ್ತಿಲ್ಲ. ಜಿಲ್ಲೆಗೆ ಪ್ರತಿ ತಿಂಗಳು 30 ಲಕ್ಷ ಟನ್ ಅವಶ್ಯಕತೆ ಇದೆ. ಆದರೆ 10 ಲಕ್ಷ ಟನ್ ಮಾತ್ರ ಕಲ್ಲು ಸಿಗುತ್ತಿದೆ‌‌.ಜನರು ಹೆಚ್ಚು ಹಣ ನೀಡಿ ಖರೀದಿಸುತ್ತಿದ್ದಾರೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗಿದ್ದು, ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ವಸ್ತುಗಳು ಸಿಗದೆ ಅಭಿವೃದ್ಧಿ ಕುಂಠಿತವಾಗಿದೆ. ಶ್ರೀರಂಗಪಟ್ಟಣದ ಮುಂಡುಗದೊರೆ, ಹಂಗರಳ್ಳಿ ಭಾಗದಲ್ಲಿ ಕಲ್ಲು ಸಾಕಷ್ಟಿದ್ದು ಅನುಮತಿ ನೀಡಿಲ್ಲ ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕಿ ಪದ್ಮಜಾ,ಅರಣ್ಯ ಭೂಮಿಯಲ್ಲಿರುವ ಗಣಿಗಾರಿಕೆ ಬಗ್ಗೆ ಸರ್ವೆ ನಡೆದು ಆರು ತಿಂಗಳಾಗಿದೆ.ಈ ಸರ್ವೆ ವರದಿಯನ್ನು ಹತ್ತು ದಿನದ ಹಿಂದಷ್ಟೇ ಅರಣ್ಯ ಅಧಿಕಾರಿಗೆ ನೀಡಲಾಗಿದೆ ಎಂದರು.

ಇದರಿಂದ ಸಿಟ್ಟಾದ ರವೀಂದ್ರ ಶ್ರೀಕಂಠಯ್ಯ ಸರ್ವೆ ನಡೆದು ಆರು ತಿಂಗಳಾದರೂ ಇನ್ನೂ ವರದಿ ಕೊಟ್ಟಿಲ್ಲ ಅಂದರೆ ಹೇಗೆ? ಹೊರಗಿನಿಂದ ಜಲ್ಲಿ ಪೂರೈಸುವವರು ಹಾಗೂ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕ್ರೀಡಾ ಸಚಿವ ನಾರಾಯಣಗೌಡ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಅಧಿಕಾರಿಗಳು ಸೇರಿ ಇನ್ನೊಂದು ವಾರದಲ್ಲಿ ಈ ಬಗ್ಗೆ ಸಭೆ ನಡೆಸೋಣ ಎಂದು ತಿಳಿಸಿದರು. ಇದಕ್ಕೆ ದನಿಗೂಡಿಸಿದ ಸಚಿವ ಗೋಪಾಲಯ್ಯ ಒಂದು ವಾರದೊಳಗೆ ಅರಣ್ಯ ವ್ಯಾಪ್ತಿಯಲ್ಲಿ ಬರುವ ಗಣಿಗಾರಿಕೆಗಳ ಬಗ್ಗೆ ನೈಜ ವರದಿಯನ್ನು ಕೊಡಬೇಕೆಂದು ಸೂಚಿಸಿದರು.

ಷುಗರ್ ಸೆಸ್ ಕೊಡಿ

ಈ ಹಿಂದೆ ಶುಗರ್ ಸೆಸ್ ಎಂದು ಮೂರು ಕೋಟಿ ಹಣ ಸಂಗ್ರಹವಾಗುತ್ತಿತ್ತು.ಇದರಿಂದ ಗ್ರಾಮೀಣ ಪ್ರದೇಶದ ಹಾಗೂ ಸಣ್ಣಪುಟ್ಟ ರಸ್ತೆ ರಿಪೇರಿ ಮಾಡಿಸುವುದು, ಗುಂಡಿಗಳನ್ನು ಮುಚ್ಚಬಹುದಾಗಿತ್ತು.ಆದರ ಜಿಎಸ್ಟಿ ಬಂದ ನಂತರ ಇದು ನಿಂತು ಹೋಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಈ ಹಣವನ್ನು ಜಿಲ್ಲೆಯ ಅಭಿವೃದ್ಧಿಗೆ ಬಿಟ್ಟುಕೊಡಬೇಕೆಂದರು. ರಸ್ತೆ ಸಮಸ್ಯೆ ಬಗೆ ಹರಿಸಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳು ತಲೆದೋರಿವೆ.

ರೈತರ ಎತ್ತಿನಗಾಡಿ, ಮಕ್ಕಳ ಶಾಲಾ ವಾಹನ ಸುಮಾರು ದೂರ ಬಳಸಿಕೊಂಡು ಹೋಗಬೇಕಾಗಿದೆ.ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನಹರಿಸುತ್ತಿಲ್ಲ.ಈ ಹಿನ್ನೆಲೆಯಲ್ಲಿ ಒಂದು ದಿನ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡು ರಸ್ತೆ ಪರಿಶೀಲನೆಗೆ ಒಂದು ದಿನಾಂಕ ನಿಗದಿ ಮಾಡಿ ಎಂದು ಸಚಿವರನ್ನು ಒತ್ತಾಯಿಸಿದರು.

ರೈತರ ಲೂಟಿ ಶಾಸಕ ರವೀಂದ್ರ ಶ್ರೀಕಂಠಯ್ಯ ರಸ್ತೆಗಾಗಿ ಭೂಸ್ವಾಧೀನ ಮಾಡಿಕೊಂಡ ರೈತರಿಗೆ ಕಡಿಮೆ ಹಣಕೊಟ್ಟು ಅಧಿಕಾರಿಗಳು ಹಾಗೂ ದಲ್ಲಾಳಿಗಳು ಸಾಕಷ್ಟು ಹಣ ಮಾಡಿದ್ದಾರೆ. ಸುಮಾರು 100 ಕೋಟಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಮಾಹಿತಿ ಕೊಡಿ ಎಂದರೆ ಅಧಿಕಾರಿಗಳು ಗೌಪ್ಯತೆಗೆ ಸಂಬಂಧಿಸಿದೆ ಎಂದು ಮಾಹಿತಿ ಕೊಡುತ್ತಿಲ್ಲ ಎಂದು ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಇದಕ್ಕೆ ಭೂಸ್ವಾಧೀನ ಇಲಾಖೆ ಅಧಿಕಾರಿ ಸುಮಾರು 20 ಸಾವಿರ ಪುಟಗಳಿವೆ ಎಂದು ತಿಳಿಸಿದಾಗ ಸಚಿವ ಗೋಪಾಲಯ್ಯ ಅದನ್ನು ಸಿಡಿ ಮಾಡಿ ಇನ್ನು ಮೂರು ದಿನಗಳೊಳಗೆ ಕೊಡುವಂತೆ ತಾಕೀತು ಮಾಡಿದರು.

ಶಾಸಕ ಎಂ ಶ್ರೀನಿವಾಸ್ ಮಾತನಾಡಿ,ರಸ್ತೆಗಾಗಿ ಭೂ ಸ್ವಾಧೀನ ಪಡಿಸಿಕೊಂಡು ಹಣ ನೀಡುವುದರಲ್ಲಿ ತಾರತಮ್ಯ ಮಾಡಿದ್ದಾರೆ. ಗಣಂಗೂರು ಬಳಿ ನನ್ನ ಜಮೀನಿಗೆ ಪ್ರತಿ ಚದರ ಅಡಿಗೆ 400 ಬೆಲೆ ನಿಗದಿ ಮಾಡಿ, ನಮ್ಮ ಪಕ್ಕದ ಜಮೀನಿಗೆ 750ರೂ. ಹಣ ನೀಡಿದ್ದಾರೆ. ಇದರಲ್ಲಿ ಅವ್ಯವಹಾರ ನಡೆದಿರುವುದು ಕಾಣುತ್ತದೆ ಎಂದರು.

ಇದಕ್ಕೆ ಸಚಿವ ಗೋಪಾಲಯ್ಯ ಉತ್ತರಿಸಿ, ಇನ್ನು ಎರಡು ದಿನಗಳಿಗೆ ಶಾಸಕರಿಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಅಲ್ಲದೆ ಹಣ ನೀಡಿಕೆಯಲ್ಲಿ ವ್ಯತ್ಯಾಸ ಇರುವುದರಿಂದ, ತಾರತಮ್ಯ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಿ ತನಿಖೆ ನಡೆಸಬೇಕೆಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಅಧಿಕಾರಿ ರಾಮ್ ಪ್ರಸಾತ್ ಮನೋಹರ್ ,ಜಿಲ್ಲಾಧಿಕಾರಿ ಎಸ್. ಅಶ್ವತಿ ,ಜಿಪಂ ಸಿಇಓ ದಿವ್ಯಾಪ್ರಭು, ಶಾಸಕರಾದ ಸಿ.ಎಸ್.ಪುಟ್ಟರಾಜು, ಕೆ‌. ಅನ್ನದಾನಿ, ದಿನೇಶ್ ಗೂಳಿಗೌಡ, ಎಸ್ಪಿ ಯತೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!