Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ವಾತಂತ್ರ್ಯವೆಂದರೆ ರಾಷ್ಟ್ರಭಕ್ತರ ತ್ಯಾಗ- ಬಲಿದಾನದ ಸಂಕೇತ

ಸ್ವಾತಂತ್ರ್ಯವೆಂದರೆ ತ್ಯಾಗ ಬಲಿದಾನದ,ಪರಿಶ್ರಮದ ಶಕ್ತಿ ಸಂಕೇತವಾಗಿದೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಂ.ಎ.ಶೇಖರ್ ಅಭಿಪ್ರಾಯ ಪಟ್ಟರು.

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರ ಕರ್ತವ್ಯ ಮತ್ತು ಯುವ ಜನತೆಯ ನೈತಿಕ ಜವಾಬ್ದಾರಿ ಇವೆರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇದನ್ನು ಅರಿತುಕೊಂಡು ಕಾರ್ಯ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ಸೇವಾಕರ್ತ ಗುಂಡ್ಲುಪೇಟೆಯ ಹೆಚ್.ಎಂ. ಶಿವಣ್ಣ ಮಾತನಾಡಿ, ಆಜಾದಿ ಅಂದ್ರೆ ಹೋರಾಟ. ಅಂದಿನ ಎಲ್ಲಾ ರಾಷ್ಟ್ರ ಭಕ್ತರ ತ್ಯಾಗ, ಬಲಿದಾನದ ಪರಿಶ್ರಮದಿಂದ ನಾವಿಂದು ಭಾರತದಲ್ಲಿ ಸರ್ವ ಸ್ವತಂತ್ರರಾಗಿದ್ದೇವೆ. ರಾಷ್ಟ್ರಪ್ರೇಮಿ ಯಶೋಧರ ದಾಸಪ್ಪನವರ ಕಾಲದಿಂದ ಇಂದಿನವರೆಗೂ ಭಾರತ ಸ್ವಾತಂತ್ರ್ಯದ ಆಗುಹೋಗುಗಳ ಬಗ್ಗೆ ತಮ್ಮ ವಿಶೇಷ ಅನುಭವಗಳನ್ನು ಹಂಚಿಕೊಂಡರು.

ಆದಿಚುಂಚನಗಿರಿ ಉನ್ನತಿ ಶಿಕ್ಷಣ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಎನ್. ಎಸ್. ರಾಮೇಗೌಡ ಮಾತನಾಡಿ, ಇಂದು ನಾವೆಲ್ಲ ಸುರಕ್ಷಿತವಾಗಿರಲು ಕಾರಣ, ಅಂದು ತಮ್ಮ ತ್ಯಾಗ,ಬಲಿದಾನದ ಮೂಲಕ ಭಾರತವನ್ನು ಸ್ವಾತಂತ್ರ್ಯಗೊಳಿಸಿದ ಸ್ವಾತಂತ್ರ್ಯ ಹೋರಾಟಗಾರರು. ಇಂದು ನಾವು ಕ್ಷೇಮವಾಗಿರಲು ಕಾರಣ ಗಡಿ ಕಾಯುವ ಯೋಧರು. ಇವರೆಲ್ಲರಿಗೂ ನಾವು ಋಣಿಯಾಗಿರಬೇಕು ಎಂದರು. .

ಭಾರತದ ಸ್ವಾತಂತ್ರ್ಯ ಕುರಿತ ವಿಶೇಷ ಉಪನ್ಯಾಸ ನೀಡಿದ ಪ್ರಾಂಶುಪಾಲ ಪ್ರೊ. ಎನ್. ರಾಮು, ಸಹಬಾಳ್ವೆ,ಸಮಾನತೆ, ಬ್ರಾತೃತ್ವಗಳೇ ಮನುಕುಲದ ಏಳಿಗೆಯ ದಾರಿದೀಪ ಎಂದು ಜಗತ್ತಿಗೆ ತೋರಿಸಿಕೊಟ್ಟ ಭಾರತ ಇಡೀ ಪ್ರಪಂಚದಲ್ಲಿ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತದೆ.

18ನೇ ಶತಮಾನದ ಮಧ್ಯಭಾಗದಲ್ಲಿ ಭಾರತಕ್ಕೆ ಆಗಮಿಸಿದ ಬ್ರಿಟಿಷರ ಆಡಳಿತದ ದಾಸ್ಯ ಸಂಕೋಲೆಗಳಿಂದ ವಿಮುಕ್ತಿ ಹೊಂದಲು 200 ವರ್ಷಗಳೇ ಬೇಕಾಯಿತು, ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟವು ಜಗದ್ವಿಖ್ಯಾತಿಯಾಯಿತು, ಉಪವಾಸ ಮತ್ತು ಅಹಿಂಸೆ ಪ್ರತಿಭಟನೆಗೆ ಪರಿಣಾಮಕಾರಿಯಾದ ಅಸ್ತ್ರ ಎಂದು ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಗಾಂಧೀಜಿಯವರಿಗೆ ಸಲ್ಲುತ್ತದೆ ಎಂದರು.

ಡಾ.ಬಿ.ಆರ್‌.ಅಂಬೇಡ್ಕರ್ ಸಾರಥ್ಯದಲ್ಲಿ ರಚಿತವಾದ ಶ್ರೇಷ್ಠ ಸಂವಿಧಾನವೆಂದೇ ಪರಿಗಣಿಸಲ್ಪಟ್ಟ ಸಂವಿಧಾನದೊಂದಿಗೆ ನಮ್ಮದೇ ಆದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನದಲ್ಲಿ ಸ್ವತಂತ್ರ ಆಡಳಿತವನ್ನು ಪ್ರಾರಂಭಿಸಿದವು. ವಿವಿಧತೆಯಲ್ಲಿ ಏಕತೆ ಎಂಬ ದೊಡ್ಡ ಶಕ್ತಿಯೇ ಭಾರತವನ್ನು ಮುನ್ನಡೆಸುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಸಿ.ಕೆ. ಸುಬ್ಬರಾಯ, ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರುಗಳಾದ ಡಾ.ಬಿ.ಕೆ.ನರೇಂದ್ರ, ಡಾ. ಎಂ. ಜಿ.ಶಿವರಾಮು, ಡಾ.ಎ.ಟಿ.ಶಿವರಾಮು, ಡಾ.ಬಿ ರಮೇಶ್,ಡಾ. ಪ್ರಶಾಂತ್, ಡಾ. ಮಹದೇವಯ್ಯ, ಪ್ರೊ. ಚಂದ್ರಶೇಖರ್ ಸೇರಿದಂತೆ 4000ಕ್ಕೂ ಹೆಚ್ಚು ವಿದ್ಯಾರ್ಥಿಗಳು,ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!