ಕಾಂಗ್ರೆಸ್ ಪಕ್ಷ ಮೇಕೆದಾಟು ವಿಚಾರವನ್ನು ಮುಂದಿಟ್ಟುಕೊಂಡು ಮಾತ್ರ ಪಾದಯಾತ್ರೆ ಮಾಡಿದೆ.ಆದರೆ ಜೆಡಿಎಸ್ ಪಕ್ಷ ದೇವೇಗೌಡರ ನೇತೃತ್ವದಲ್ಲಿ ಕಾವೇರಿ, ಕೃಷ್ಣ,ಮಹದಾಯಿ ಸೇರಿದಂತೆ ರಾಜ್ಯದ ಎಲ್ಲಾ ನದಿಗಳ ವಿಚಾರದಲ್ಲಿ ಮೊದಲಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಗುಡುಗಿದರು.
ಶ್ರೀರಂಗಪಟ್ಟಣದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮೇಕೆದಾಟು ಯೋಜನೆ ತನ್ನದು ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಳ್ಳುತ್ತದೆ.ಆದರೆ ಮೇಕೆದಾಟು ಅಣೆಕಟ್ಟಿನ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ. ಜೆಡಿಎಸ್ ಪಕ್ಷ ಮೊದಲಿನಿಂದಲೂ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ರಾಜ್ಯದ ಎಲ್ಲಾ ನದಿಗಳ ಪರ ಹೋರಾಟ ರೂಪಿಸಿಕೊಂಡು ಬಂದಿದೆ.ನೀರಾವರಿ ವಿಚಾರದಲ್ಲಿ ಜೆಡಿಎಸ್ ಹೋರಾಟ ಎಂದೆಂದಿಗೂ ನಿರಂತರವಾಗಿ ಇರುತ್ತದೆ ಎಂದರು.
ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಅತಿಹೆಚ್ಚು ಅನುದಾನ ನೀಡಿದ ಹೆಗ್ಗಳಿಕೆ ಜೆಡಿಎಸ್ ಪಕ್ಷಕ್ಕೆ ಸಲ್ಲುತ್ತದೆ. ಕಾವೇರಿ ವಿಚಾರದಲ್ಲಿ ದೇವೇಗೌಡರು ಉಪವಾಸ ಸತ್ಯಾಗ್ರಹ ಮಾಡಿದಾಗ ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದರಿಂದ ರಾಜ್ಯಕ್ಕೆ ಹೆಚ್ಚವರಿ ಪಾಲು ದೊರೆಯಿತು ಎಂದರು.