ಕೆ.ಆರ್.ಪೇಟೆ ಪಟ್ಟಣದ ಮುಸ್ಲಿಂ ಬ್ಲಾಕ್ ಕಾಲೋನಿಯಲ್ಲಿ ಕರ್ನಾಟಕ ಕೊಳೆಗೇರಿ ಮಂಡಳಿಯ ವತಿಯಿಂದ ನಿರ್ಮಾಣವಾಗುತ್ತಿರುವ 500 ಮನೆಗಳ ನಿರ್ಮಾಣ ಕಾಮಗಾರಿಗೆ ರೇಷ್ಮೆ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಇಂದು ಭೂಮಿ ಪೂಜೆ ನೆರವೇರಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯ ಸರ್ವರಿಗೂ ಸೂರು ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 6,25,000 ವೆಚ್ಚದಲ್ಲಿ ಮೂರೂವರೆ ಚದರ ವಿಸ್ತೀರ್ಣದ ಮನೆಗಳ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ದೊರೆತಿದ್ದು, ವಸತಿ ರಹಿತ ಬಡಜನರು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಶ್ರಯದಲ್ಲಿ 1,80,000 ಮನೆಗಳು 2022-23 ನೇ ಸಾಲಿನಲ್ಲಿ ನಿರ್ಮಾಣವಾಗುತ್ತಿದ್ದು, ಕೆ.ಆರ್.ಪೇಟೆ ಪಟ್ಟಣದ ಜನತೆಗಾಗಿ 500 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಪಟ್ಟಣದ ಬಡಜನರು ಹಾಗೂ ಮಧ್ಯಮ ವರ್ಗದ ಕುಟುಂಬಗಳು ಸರ್ವರಿಗೂ ಸೂರು ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಸ್ವಂತಸೂರು ಹೊಂದಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಬೇಕು ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದ್ದಲ್ಲದೆ ಕೆ.ಆರ್.ಪೇಟೆ ಪುರಸಭೆಗೆ 31 ಕೋಟಿ ರೂಪಾಯಿಗಳ ವೆಚ್ಚದಲ್ಲಿ 500 ಮನೆಗಳು ಮಂಜೂರಾಗಿವೆ.


ಪ್ರತೀ ಫಲಾನುಭವಿಯು ಯೋಜನೆಯ ವೆಚ್ಚದ ಶೇ.10ರಷ್ಟು ಹಣದ ಬಾಬ್ತು 62,500 ರೂಗಳನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಪಾವತಿಸಬೇಕು. ಪರಿಶಿಷ್ಠ ಜಾತಿ ಹಾಗೂ ವರ್ಗಗಳ ಜನರಿಗೆ 3,50,000 ಸಹಾಯ ಧನ ದೊರೆತರೆ ಇತರೆ ಜನರಿಗೆ 2,70,000 ರೂ ಸಹಾಯ ಧನವು ದೊರೆಯಲಿದ್ದು, ಉಳಿದ ಬಾಕಿ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸುಲಭವಾಗಿ ಸಾಲ ಸೌಲಭ್ಯ ದೊರೆಯಲಿದೆ.ಪಟ್ಟಣದಲ್ಲಿ ಸ್ವಂತ ಮನೆ ಹೊಂದಿಲ್ಲದ ಜನರು ಯೋಜನೆಯ ಫಲಾನುಭವಿಗಳಾಗಿ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಪುರಸಭೆ ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷೆ ಗಾಯತ್ರಿ, ಸದಸ್ಯರಾದ ತಿಮ್ಮೇಗೌಡ, ಡಾ.ಕೆ.ಎಸ್.ರಾಜೇಶ್, ಹೆಚ್.ಆರ್.ಲೋಕೇಶ್ ಮುಖ್ಯಾಧಿಕಾರಿ ಕುಮಾರ್, ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಜಿ.ಹರೀಶ್, ಎಇಇ ಬಿ.ಕೆ.ಬೋರಯ್ಯ, ಸಹಾಯಕ ಎಂಜಿನಿಯರ್ ನಂದೀಶ್, ಪುರಸಭೆಯ ಸಹಾಯಕ ಎಂಜಿನಿಯರ್ ಮಧುಸೂದನ್, ಪರಿಸರ ಎಂಜಿನಿಯರ್ ಅರ್ಚನಾ ಆರಾಧ್ಯ ಮತ್ತಿತರರು ಈ ಸಂದರ್ಭದಲ್ಲಿದ್ದರು.