Saturday, May 18, 2024

ಪ್ರಾಯೋಗಿಕ ಆವೃತ್ತಿ

ರೈತರ ಬದುಕಿಗಾಗಿ ಕಾವೇರಿ ಹೋರಾಟ- ಕೆ.ಪಿ.ನಂಜುಂಡಿ

ರೈತರೆಂದರೆ ದೇಹದ ಪ್ರಾಣವಿದ್ದಂತೆ, ಪ್ರತಿಯೊಬ್ಬರು ಸೇವಿಸುವ ಆಹಾರದ ಬೆಳೆಯನ್ನು ರೈತರು ಬೆಳೆಯದಿದ್ದರೆ ಏನಾಗುತ್ತದೆ ಎಂಬ ಅರಿವು ಹೊಂದಿ, ರೈತರ ಬದುಕಿನ ಹಕ್ಕಿಗಾಗಿ ಪ್ರತಿಯೊಬ್ಬರು ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ತಿಳಿಸಿದರು.

ನಗರದ ಸರ್.ಎಂ.ವಿ ಪ್ರತಿಮೆ ಮುಂಭಾಗ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿ ಹೋರಾಟವನ್ನು ನಾನು ಹಲವಾರು ವರ್ಷಗಳಿಂದ ಕಂಡಿದ್ದೇನೆ, ರೈತರ ಬದುಕಿನ ಅಸ್ವಿತ್ವಕ್ಕಾಗಿ ಕಾವೇರಿ ಹೋರಾಟವನ್ನು ಪ್ರತಿಯೊಬ್ಬರು ಬೆಂಬಲಿಸಬೇಕಿದೆ ಎಂದರು.

ಕಾವೇರಿ ನದಿ ಪಾತ್ರದ ರೈತರ ಕೃಷಿಗೆ ಎಷ್ಟು ನೀರು ಅಗತ್ಯವೋ ಅಷ್ಟೆ ಪ್ರಮಾಣದ ನೀರು ಸಹ ಕುಡಿಯಲು ಅಗತ್ಯವಾಗಿದೆ, ಆದರೆ ಹೋರಾಟ ಮಾತ್ರ ಮಂಡ್ಯದಲ್ಲೇ ಏಕೆ ಆಗಬೇಕು ? ಬೆಂಗಳೂರು ವಾಸಿಗಳಿಗೆ ಕಾವೇರಿ ಹೋರಾಟ ಬೇಡವೇ ಎಂದು ಪ್ರಶ್ನಿಸಿದರು.

ಮಂಡ್ಯ ರೈತರು ಪ್ರತಿಭಟಿಸದಿದ್ದರೆ ಬೆಂಗಳೂರು ಜನರಿಗೆ ಕುಡಿಯಲು ನೀರು, ಆಹಾರ ಸೇವಿಸಲು ದಿನಸಿ ಖರೀದಿ ಸಾಧ್ಯವಿಲ್ಲ ಎಂಬುವುದನ್ನು ಮನಗೊಂಡು ಹೋರಾಟಕ್ಕೆ ಇಳಿಯಬೇಕೆಂದು ಕರೆ ನೀಡಿದರು.

ಜಾತಿ ಭಾಷೆ ಮೀರಿದ ಹೋರಾಟ ಕಾವೇರಿಗಾಗಿ ನಡೆಯಬೇಕು. ರಾಜ್ಯದ ಬಹುಪಾಲು ಜನತೆ ಕಾವೇರಿ ನೀರನ್ನು ಕುಡಿಯುತ್ತಿದ್ದಾರೆ. ಆದರೆ ಹೋರಾಟ ಮಾತ್ರ ಮಂಡ್ಯ ಸೀಮಿತವಾಗಿರುವುದು ಬೇಸರದ ಸಂಗತಿ ಎಂದರು.

ವಿಶ್ವಕರ್ಮ ಸಮಾಜ ಕಾಯಕ ಸಮಾಜವಾಗಿದ್ದು, ನಮ್ಮ ಸಮುದಾಯಕ್ಕೆ ಅನ್ನದಾತರೇ ಅವಲಂಬಿತರಾಗಿದ್ದು, ಪ್ರತಿ ಜಿಲ್ಲೆಯ ವಿಶ್ವಕರ್ಮ ಬಂಧುಗಳು ಕಾವೇರಿಗಾಗಿ ಜಾಗೃತಿ ಮೂಡಿಸಲು ಕರೆ ನೀಡಲಾಗುವುದೆಂದರು.

ನಮ್ಮ ನದಿ ಪಾತ್ರದ ನೀರನ್ನು ನಮಗೆ ವಂಚಿಸಿ, ಅನ್ಯರಿಗೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಎಲ್ಲ ಸಮಾಜದವರು, ಎಲ್ಲ ಭಾಷಿಕರು, ಕಾವೇರಿಗಾಗಿ ಪ್ರಬಲ ಹೋರಾಟಕ್ಕಾಗಿ ಬೀದಿಗಿಳಿದರೆ ನಮಗೆ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸುನಂದ ಜಯರಾಂ, ಕೆ.ಬೋರಯ್ಯ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್, ಜನಾಂಗದ ಮುಖಂಡರಾದ ಹರಿಪ್ರಸಾದ್, ಸುದರ್ಶನ್ ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!