Thursday, June 13, 2024

ಪ್ರಾಯೋಗಿಕ ಆವೃತ್ತಿ

ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ…….

ವಿವೇಕಾನಂದ ಎಚ್.ಕೆ

ಭಾವನಾತ್ಮಕ ದೃಶ್ಯದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರ ಒಳ ಅರ್ಥ ಮಾತ್ರ ವಿಶಾಲವಾಗಿದೆ ಮತ್ತು ತಂದೆ ತಾಯಿ ಅಜ್ಜ ಅಜ್ಜಿ ಮೊದಲಾದ ಹಿರಿಯರನ್ನು ನಿರ್ಲಕ್ಷಿಸುವವರ ಆತ್ಮಕ್ಕೆ ನೇರವಾಗಿ ಚುಚ್ಚುತ್ತದೆ…….

ನೀವು ಈಗಾಗಲೇ ಇದನ್ನು ನೋಡಿರಬಹುದು ಅಥವಾ ಕೇಳಿರಬಹುದು‌. ಅದನ್ನು ಮತ್ತೊಮ್ಮೆ ನೆನಪಿಸುತ್ತಾ…………

ಒಂದು ಪಾರ್ಕಿನ ಬೆಂಚಿನ ಮೇಲೆ ಎಳೆ ಬಿಸಿಲಿನ ಬೆಳಗಿನ ಸಮಯದಲ್ಲಿ 75/85 ರ ವಯಸ್ಸಿನ ವೃದ್ದರೊಬ್ಬರು ಕುಳಿತಿದ್ದಾರೆ. ಅವರ ಪಕ್ಕದಲ್ಲೇ ಅವರ ಸುಮಾರು 25 ವರ್ಷದ ಮಗ ಪತ್ರಿಕೆ ಓದುತ್ತಾ ಕುಳಿತಿದ್ದಾನೆ……

ಆ ಪಾರ್ಕಿನ ನಿಶ್ಯಬ್ದ ವಾತಾವರಣದಲ್ಲಿ ಒಂದು ಮರದಿಂದ ಯಾವುದೋ ಪಕ್ಷಿಯ ವಿಚಿತ್ರ ಧ್ವನಿ ಕೇಳಿ ಬರುತ್ತದೆ. ಆ ತಂದೆಗೆ ಕುತೂಹಲ ಉಂಟಾಗುತ್ತದೆ. ಪತ್ರಿಕೆ ಓದುತ್ತಿದ್ದ ಮಗನನ್ನು ” ಕಂದ, ಆ ಧ್ವನಿ ಕೇಳುತ್ತಿದೆಯಲ್ಲ ಅದು ಯಾವ ಹಕ್ಕಿಯ ಧ್ವನಿ ನಿನಗೆ ಗೊತ್ತೆ ” ಎಂದು ಕೇಳುತ್ತಾರೆ……

ಓದುವುದರಲ್ಲಿ ಮಗ್ನನಾಗಿದ್ದ ಮಗ ನಿರ್ಲಕ್ಷ್ಯದಿಂದ ” ಗೊತ್ತಿಲ್ಲ ” ಎಂದು ಉತ್ತರಿಸಿ ಸುಮ್ಮನಾಗುತ್ತಾನೆ……

ಆ ಪಕ್ಷಿಯ ಧ್ವನಿ ಮತ್ತೆ ಮತ್ತೆ ಕೇಳಿಬರುತ್ತದೆ. ಆ ಹಿರಿಯರಿಗೆ ಮತ್ತಷ್ಟು ಕುತೂಹಲ ಹೆಚ್ಚಾಗುತ್ತದೆ. ಯೋಚಿಸಿದಷ್ಟು ಯಾವ ಪಕ್ಷಿ ಎಂಬ ಗೊಂದಲ ಉಂಟಾಗುತ್ತದೆ……

ಮತ್ತೊಮ್ಮೆ ಮಗನನ್ನು ” ಪುಟ್ಟ ಸರಿಯಾಗಿ ಕೇಳು. ಇದರ ಧ್ವನಿ ನಾನು ಬಹಳ ಕೇಳಿದ್ದೇನೆ. ಆದರೆ ಪಕ್ಷಿಯ ಹೆಸರು ನೆನಪಾಗುತ್ತಿಲ್ಲ. ನಿನಗೆ ತಿಳಿದಿರಬಹುದು ” ಎನ್ನುತ್ತಾರೆ…….

ಪತ್ರಿಕೆ ಓದುತ್ತಿದ್ದ ಮಗನಿಗೆ ಸ್ವಲ್ಪ ಅಸಹನೆ ಉಂಟಾಗುತ್ತದೆ. ” ಆಗಲೇ ಹೇಳಿದೆನಲ್ಲಾ ನನಗೆ ಅದೆಲ್ಲಾ ಗೊತ್ತಿಲ್ಲ ” ಎಂದು ಧ್ವನಿ ಏರಿಸಿ ಉತ್ತರಿಸುತ್ತಾನೆ…..

ಹಿರಿಯರು ಸುಮ್ಮನಾಗುತ್ತಾರೆ. ಸ್ವಲ್ಪ ಹೊತ್ತಿಗೆ ಆ ಪಕ್ಷಿಯ ಧ್ವನಿ ಇನ್ನೂ ಹತ್ತಿರವಾಗುತ್ತದೆ ಮತ್ತೂ ಜೋರಾಗಿ ಕೇಳಿಸುತ್ತದೆ. ವೃದ್ದರಿಗೆ ಆ ಧ್ವನಿ ಮಾಡುತ್ತಿರುವ ಹಕ್ಕಿಯ ಹೆಸರು ನೆನಪಾಗುತ್ತಿಲ್ಲ. ಆದರೆ ಅದನ್ನು ಬಹಳ ಹಿಂದೆ ಕೇಳಿದ ನೆನಪು ಮಾತ್ರ ಸ್ಮೃತಿಪಟಲದಲ್ಲಿ ಅಚ್ಚೊತ್ತಿದಂತಿದೆ…..

ಮನಸ್ಸು ತಡೆಯದೆ ವಿಲ ವಿಲ ಒದ್ದಾಡುತ್ತದೆ. ಮತ್ತೆ ಮಗನನ್ನು ” ಮಗನೇ ದಯವಿಟ್ಟು ಇನ್ನೊಮ್ಮೆ ಆ ಧ್ವನಿ ಕೇಳು. ನಿನಗೆ ನೆನಪಾಗಬಹುದು. ಆ ಧ್ವನಿ ನನಗೆ ಬಾಲ್ಯದ ದಿನಗಳನ್ನು ಜ್ಞಾಪಿಸುತ್ತಿದೆ. ಹಕ್ಕಿಯ ಹೆಸರು ಗೊತ್ತಾದರೆ ತುಂಬಾ ಖುಷಿಯಾಗುತ್ತದೆ.”…..

ಪದೇ ಪದೇ ತನ್ನ ಪತ್ರಿಕೆಯ ಓದಿಗೆ ಅಡ್ಡಿಪಡಿಸುತ್ತಿದ್ದ ತಂದೆಯ ಬಗ್ಗೆ ಅವನ ಅಸಹನೆ ಮೇರೆ ಮೀರುತ್ತದೆ.
” ಅಪ್ಪಾ ಆಗಲೇ ಹೇಳಿದೆನಲ್ಲ. ನನಗೆ ಗೊತ್ತಿಲ್ಲ ಅಂತ. ಎಷ್ಟು ಸಾರಿ ಹೇಳುವುದು. ಯಾಕೆ ಸುಮ್ಮನೆ ತಲೆ ತಿನ್ನುವೆ. ಅದಕ್ಕೆ ನನಗೆ ನಿನ್ನ ಜೊತೆ ಬರಲು ಇಷ್ಟವಾಗುವುದಿಲ್ಲ ” ಎಂದು ಕೋಪದಿಂದ ಹೇಳಿ ಪತ್ರಿಕೆ ಮುದುಡಿ ಇನ್ನೊಂದು ಬೆಂಚಿನ ಮೇಲೆ ಹೋಗಿ ಕುಳಿತುಕೊಳ್ಳುತ್ತಾನೆ…..

ಆ ವೃದ್ದರಿಗೆ ಬೇಸರವಾದರೂ ಅದನ್ನು ತೋರಿಸಿಕೊಳ್ಳದೆ ಸ್ವಲ್ಪ ಸಮಯದ ನಂತರ ಮಗ ಕುಳಿತಿದ್ದ ಬೆಂಚಿನ ಬಳಿ ಹೋಗಿ ” ಚಿನ್ನ ಕ್ಷಮಿಸು ನನ್ನದು ತಪ್ಪಾಯಿತು. ನಿನಗೆ ಬೇಸರ ಮಾಡಿದ್ದಕ್ಕೆ. ಏನೋ ಮನಸ್ಸು ತಡೆಯಲಿಲ್ಲ ” ಎಂದು ಹೇಳಿ ಪಕ್ಕದಲ್ಲಿ ಕುಳಿತು ಅವನ ಮೈದಡವುತ್ತಾ……

” ಬಂಗಾರ ಆಗಿನ್ನೂ ನಿನಗೆ 5 ವರ್ಷ. ನಿನ್ನ ಅಮ್ಮನಿಗೆ ಖಾಯಿಲೆಯಾಗಿತ್ತು. ನೀನು ಅಮ್ಮನ ಬಳಿ ಹೋಗುವಂತಿರಲಿಲ್ಲ. ತುಂಬಾ ಹಠ ಮಾಡಿ ಅಳುತ್ತಿದ್ದೆ. ಆಗ ನಿನ್ನನ್ನು ಹೊರಗೆ ತಿರುಗಾಡಲು ಭುಜದ ಮೇಲೆ ಹೊತ್ತು ಸಾಗುತ್ತಿದ್ದೆ. ನೀನು ದಾರಿಯಲ್ಲಿ ಕಾಣುತ್ತಿದ್ದ ಪ್ರತಿ ವಸ್ತುಗಳನ್ನು ಪ್ರಾಣಿ ಪಕ್ಷಿಗಳನ್ನು ಇದು ಏನು ಇದು ಏನು ಎಂದು ಮತ್ತೆ ಮತ್ತೆ ನೂರಾರು ಬಾರಿ ಕೇಳುತ್ತಿದ್ದೆ. ನೀನು ಪ್ರತಿ ಬಾರಿ ಕೇಳಿದಾಗಲೂ ನಾನು ಸಂತೋಷದಿಂದಲೇ ನಗುನಗುತ್ತಾ ಮತ್ತೆ ಮತ್ತೆ ಹೇಳುತ್ತಿದ್ದೆ. ಇದು ಕೇವಲ ಒಂದು ದಿನದ ಘಟನೆಯಲ್ಲ. ನೀನು ಕಾಲೇಜಿಗೆ ಸೇರುವವರೆಗೂ ನಾನು ನಿನ್ನ ಎಲ್ಲಾ ಪ್ರಶ್ನೆಗಳಿಗೂ ನಗುನಗುತ್ತಾಲೇ ಉತ್ತರಿಸುತ್ತಿದ್ದೆ ಮತ್ತು ನೀನು ಈಗಲೂ ಕೇಳಿದರೂ ಸಹ…………” ಎಂದು ಆಕಾಶದ ಕಡೆ ದೃಷ್ಟಿ ನೆಡುತ್ತಾರೆ……….

ಈ ದೃಶ್ಯದ ತುಣುಕಿನಲ್ಲಿ ಮಗನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆತ ತಂದೆಯನ್ನು ತಬ್ಬಿಕೊಂಡು ಕ್ಷಮೆ ಕೇಳುತ್ತಾನೆ ಮತ್ತು ತನ್ನ ವರ್ತನೆ ಬದಲಾಯಿಸಿಕೊಳ್ಳುತ್ತಾನೆ……….

ಇದನ್ನು ಓದಿದ ( ನನ್ನನ್ನೂ ಸೇರಿ ) ನಾವುಗಳು ಸಹ ಕನಿಷ್ಠ ಪಕ್ಷ ಒಂದಷ್ಟು ಪ್ರಮಾಣದ ತಾಳ್ಮೆ ಮತ್ತು ಪ್ರೀತಿಯನ್ನು ನಮ್ಮ ಹಿರಿಯರ ಬಗ್ಗೆ ತೋರಿಸೋಣ. ಈ ಕಥೆಯ ಸಾರಾಂಶವನ್ನು ಪ್ರಾಯೋಗಿಕವಾಗಿ ಅನುಸರಿಸಲು ಪ್ರಯತ್ನಿಸೋಣ…..

( ಕೆಲವು ತಂದೆ ತಾಯಿ ಮತ್ತು ಹಿರಿಯರು ಸಹ ತಮ್ಮ ಮಕ್ಕಳಿಗೆ ಅವರ ಸ್ವಾತಂತ್ರ್ಯ ಅನುಭವಿಸಲು ಬಿಡದೆ, ಅವರ ಪರಿಸ್ಥಿತಿ ಅರ್ಥಮಾಡಿಕೊಳ್ಳದೆ, ಅವರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವ ಸರ್ವಾಧಿಕಾರಿಗಳಂತೆ ವರ್ತಿಸುವ ಘಟನೆಗಳು ಸಹ ಇವೆ. ಅದೂ ಸಹ ಸ್ವಲ್ಪ ಕಿರಿ ಕಿರಿ ಮಾಡುತ್ತದೆ. ಅದನ್ನೂ ಸಹ ನೆನಪಿಸುತ್ತಾ……..)

ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!