Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಹುಲ್ ಗಾಂಧಿ ಭೇಟಿ | ರಾತ್ರೋರಾತ್ರಿ ಸೆಲೆಬ್ರಿಟಿಯಾದ ಚಪ್ಪಲಿ ಹೊಲೆಯುವ ಶ್ರಮಜೀವಿ!

ಸುಲ್ತಾನ್‌ ಪುರ (ಉತ್ತರಪ್ರದೇಶ): ಇಷ್ಟು ದಿನಗಳ ಕಾಲ ರಸ್ತೆ ಬದಿಯಲ್ಲಿ ಚಪ್ಪಲಿ ಹೊಲೆಯುವ ಕಾಯಕ ಮಾಡಿಕೊಂಡು ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯನಂತೆ ಇದ್ದ ಸುಲ್ತಾನ್‌ ಪುರದ ರಾಮ್‌ ಚೇತ್‌ ಬದುಕೇ ಬದಲಾಗಿಹೋಗಿದೆ. ಅವರು ಈಗ ಸೆಲಬ್ರಿಟಿಯಾಗಿ ಬದಲಾಗಿಬಿಟ್ಟಿದ್ದಾರೆ. ಹೀಗಾಗಲು ಕಾರಣ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ!

ಮಾನನಷ್ಟ ಮೊಕದ್ದಮೆಯೊಂದರ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ಸುಲ್ತಾನ್‌ ಪುರಕ್ಕೆ ಬಂದಿದ್ದ ರಾಹುಲ್‌ ಗಾಂಧಿ ರಸ್ತೆ ಬದಿಯಲ್ಲಿ ಚಪ್ಪಲಿ ಹೊಲೆಯುತ್ತಿದ್ದ ರಾಮ್‌ ಚೇತ್‌ ಬಳಿ ತೆರಳಿ ಅವರೊಂದಿಗೆ ಕೆಲ ಕಾಲ ಸಮಯ ಕಳೆದಿದ್ದರು.

ಈಗ ರಾಮ್‌ ಚೇತ್‌ ಸ್ಥಳೀಯರ ಪಾಲಿಗೆ ಸೆಲಬ್ರಿಟಿಯಾಗಿಬಿಟ್ಟಿದ್ದಾರೆ. ರಸ್ತೆಯಲ್ಲಿ ಓಡಾಡುವ ಜನರು ತಮ್ಮ ಕಾರು, ಬೈಕ್‌ ಗಳನ್ನು ನಿಲ್ಲಿಸಿ ಅವರ ಪುಟ್ಟ ಅಂಗಡಿಗೆ ಬಂದುಹೋಗುತ್ತಿದ್ದಾರೆ. ರಾಮ್‌ ಚೇತ್‌ ಅವರೊಂದಿಗೆ ಸೆಲ್ಫಿಗಳನ್ನು ಕ್ಲಿಕ್‌ ಮಾಡಿಕೊಳ್ಳುತ್ತಿದ್ದಾರೆ. ಜನರು ಈಗ ನನಗೆ ಅತೀವ ಗೌರವ ನೀಡುತ್ತಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದು ರಾಹುಲ್‌ ಗಾಂಧಿಯವರಿಂದ ಎಂದು ರಾಮ್‌ ಚೇತ್‌ ಹೇಳುತ್ತಾರೆ.

ರಾಹುಲ್‌ ಗಾಂಧಿ ಅಂಗಡಿಗೆ ಬಂದಾಗ ಚಪ್ಪಲಿ ಹೊಲೆಯುವ ವಿಧಾನವನ್ನು ರಾಮ್‌ ಚೇತ್‌ ಅವರಿಂದ ತಿಳಿದುಕೊಂಡಿದ್ದರು. ಕೆಲ ಚಪ್ಪಲಿಗಳನ್ನು ತಾವೇ ಹೊಲೆದಿದ್ದರು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ರಾಮ್‌ ಚೇತ್‌ ಕೈಗಳಿಂದಲೇ ಚಪ್ಪಲಿ ಹೊಲೆಯುತ್ತಿದ್ದರು, ಮಿಷನ್‌ ಮೂಲಕ ಹೊಲೆಯಬಹುದೇ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದಾಗ ಹೌದು, ಮಿಷನ್‌ ನಲ್ಲಿ ಹೊಲೆದರೆ ದಿನಕ್ಕೆ ಹೆಚ್ಚು ಚಪ್ಪಲಿಗಳನ್ನು ಹೊಲೆಯಬಹುದು ಎಂದು ರಾಮ್‌ ಚೇತ್‌ ಉತ್ತರಿಸಿದ್ದರು.

ಇದಾದ ನಂತರ ರಾಮ್‌ ಚೇತ್‌ ಅವರಿಗೊಂದು ಸರ್ಪ್ರೈಸ್‌ ಗಿಫ್ಟ್‌ ಬಂದಿತ್ತು. ರಾಹುಲ್‌ ಗಾಂಧಿ ಚಪ್ಪಲಿ ಹೊಲೆಯುವ ಮಿಷನ್‌ ಒಂದನ್ನು ರಾಮ್‌ ಚೇತ್‌ ಅವರಿಗೆ ಕಳುಹಿಸಿದ್ದರು. ಈಗ ಅವರು ಅದೇ ಮಿಷನ್‌ ನಿಂದಲೇ ಚಪ್ಪಲಿ ಹೊಲೆಯುತ್ತಿದ್ದಾರೆ.

ವಿಶೇಷವೆಂದರೆ ಇಲ್ಲಿಗೆ ಬಂದಾಗ ರಾಹುಲ್‌ ಗಾಂಧಿ ಹೊಲೆದಿದ್ದ ಚಪ್ಪಲಿಗಳಿಗೆ ಬೇಡಿಕೆ ಬಂದುಬಿಟ್ಟಿದೆ. ರಾಹುಲ್‌ ಗಾಂಧಿ ಹೊಲೆದ ಚಪ್ಪಲಿ ಮಾರಾಟ ಮಾಡುವುದಾದರೆ 10 ಲಕ್ಷ ರೂ. ಕೊಡುವುದಾಗಿ ಕೆಲವರು ಹೇಳಿದ್ದಾರೆ. ಮತ್ತೊಬ್ಬ ವ್ಯಕ್ತಿ ಬ್ಯಾಗ್‌ ತುಂಬ ಹಣ ತಂದು, ಚಪ್ಪಲಿ ತಮಗೆ ಮಾರಾಟ ಮಾಡಲು ಕೋರಿದ್ದಾರೆ. ಆದರೆ ರಾಮ್‌ ಚೇತ್‌ ಈ ಎಲ್ಲ ಆಫರ್‌ ಗಳನ್ನು ನಯವಾಗಿ ನಿರಾಕರಿಸಿದ್ದಾರೆ. ಈ ಚಪ್ಪಲಿಗಳನ್ನು ರಿಪೇರಿಗೆ ತಂದು ಕೊಟ್ಟಿದ್ದವರಿಗೆ ಚಪ್ಪಲಿಯ ಹಣವನ್ನು ಕೊಟ್ಟಿದ್ದೇನೆ. ನಾನು ಇದನ್ನು ಯಾರಿಗೂ ಮಾರಾಟ ಮಾಡುವುದಿಲ್ಲ. ಇದು ನನ್ನ ಪಾಲಿಗೆ ಅಮೂಲ್ಯ ಎಂದು ಅವರು ಹೇಳಿದ್ದಾರೆ.

ರಾಮ್ ಚೇತ್ ಅವರ ಪುಟ್ಟ ಅಂಗಡಿ ಇರುವ ಸ್ಥಳಕ್ಕೆ ವಿದ್ಯುತ್ ಸಂಪರ್ಕವೂ ಇಲ್ಲ. ರಾಹುಲ್ ಗಾಂಧಿ ಇಲ್ಲಿಗೆ ಭೇಟಿ ನೀಡಿದ ನಂತರ ಸ್ಥಳೀಯ ಅಧಿಕಾರಿಗಳು ರಾಮ್ ಚೇತ್ ಅಂಗಡಿಗೆ ವಿದ್ಯುತ್ ಸಂಪರ್ಕ ನೀಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಹಲವಾರು ಅಧಿಕಾರಿಗಳು ಆಗಾಗ ಬಂದು ಏನಾದರೂ ಸಮಸ್ಯೆಗಳು ಇದ್ದರೆ ಹೇಳಿ, ಸರಿ ಮಾಡಿಕೊಡುತ್ತೇವೆ ಎಂದು ಹೇಳುತ್ತಿದ್ದಾರೆ.

ರಾಹುಲ್ ಗಾಂಧಿ ನಮ್ಮನ್ನು ಗೌರವ, ಘನತೆಯಿಂದ ನೋಡಿಕೊಂಡರು. ಆ ಭೇಟಿಯನ್ನು ಮರೆಯುವಂತಿಲ್ಲ ಎನ್ನುತ್ತಾರೆ ರಾಮ್ ಚೇತ್ ಅವರ ಪುತ್ರ ರಘುರಾಮ್. ನೀವು ಯಾಕೆ ಈ ಉದ್ಯೋಗ ಮಾಡುತ್ತಿಲ್ಲ ಎಂದು ರಾಹುಲ್ ನನ್ನನ್ನು ಕೇಳಿದ್ದರು. ನಾನು ಹಿಂದೆ ಚಮ್ಮಾರಿಕೆ ಮಾಡುತ್ತಿದ್ದೆ. ಜನ ನನಗೆ ಗೌರವ ನೀಡುತ್ತಿರಲಿಲ್ಲ. ಹೀಗಾಗಿ ಈ ಕೆಲಸ ಬಿಟ್ಟು ಕೂಲಿ ಕೆಲಸ ಮಾಡುತ್ತಿದ್ದೇನೆ ಎಂದು ನಾನು ಅವರಿಗೆ ಹೇಳಿದ್ದೆ ಎನ್ನುತ್ತಾರೆ ರಘುರಾಮ್.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!