Thursday, September 19, 2024

ಪ್ರಾಯೋಗಿಕ ಆವೃತ್ತಿ

ನಡೆಯದೆ ಗಣಿಗಾರಿಕೆ:ವ್ಯಕ್ತಿ ಆತ್ಮಹತ್ಯೆಗೆ ಶರಣು

ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ನಂಬಿದ್ದ ವ್ಯಕ್ತಿಯೊಬ್ಬ ಗಣಿಗಾರಿಕೆ ನಡೆಯದ ಕಾರಣ ಸಾಲ ತೀರಿಸಲು ಆಗದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಸಂಜೆ ನಡೆದಿದೆ.

ಪಾಂಡವಪುರ ತಾಲೂಕಿನ ಕಾವೇರಿಪುರ ಗ್ರಾಮದ ಬೋವಿ ಜನಾಂಗಕ್ಕೆ ಸೇರಿದ ಮಂಜುನಾಥ್ (33)ಎಂಬ ವ್ಯಕ್ತಿಯೇ ನೇಣಿಗೆ ಶರಣಾದ ವ್ಯಕ್ತಿ.

ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯಲ್ಲಿ ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದ ಮಂಜುನಾಥ್ ರೂ. 4 ಲಕ್ಷ ರೂ.ಗಳಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದ. ಕಳೆದ ಒಂದು ವರ್ಷದಿಂದ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಂತುಹೋಗಿತ್ತು. ಇದರಿಂದ ಕಂಗಲಾಗಿದ್ದ ಮಂಜುನಾಥ್ ಆರ್ಥಿಕ ಪರಿಸ್ಥಿತಿಯಿಂದಲೂ ಜರ್ಜರಿತನಾಗಿದ್ದ.

ಕಳೆದ ಜುಲೈ 25ರಂದು ಬೇಬಿ ಬೆಟ್ಟದಲ್ಲಿ ಜಾರ್ಖಂಡ್ ವಿಜ್ಞಾನಿಗಳು ಪರೀಕ್ಷಾರ್ಥ ಸ್ಪೋಟ ನಡೆಸಿದ ನಂತರ ಮತ್ತೆ ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡುವುದೆಂದು ಮಂಜುನಾಥ್ ತಿಳಿದಿದ್ದ.

ಮತ್ತೆ ಗಣಿಗಾರಿಕೆ ಶುರುವಾದರೆ ಸಾಲ ತೀರಿಸಬಹುದೆಂದು ಅಂದುಕೊಂಡಿದ್ದ. ಆದರೆ ಪರೀಕ್ಷಾ ಸ್ಫೋಟ ನಡೆಯದ ಕಾರಣ ಇನ್ನು ಗಣಿಗಾರಿಕೆ ಆರಂಭವಾಗುವುದು ಯಾವಾಗ,ಹೀಗಾದರೆ ಸಾಲ ತೀರಿಸುವುದು ಹೇಗೆ ಎಂದು ಆತಂಕಗೊಂಡ ಮಂಜುನಾಥ್ ಇಂದು ಸಂಜೆ ಕಾವೇರಿಪುರ ಗ್ರಾಮದ ಬಳಿ ಇರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಗ್ರಾಮಸ್ಥರ ಪ್ರತಿಭಟನೆ

ಕೆಲಸವಿಲ್ಲದ ಕಾರಣ ಮಂಜುನಾಥ್ ಸಾಲ ತೀರಿಸಲು ಆಗದೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಿದ ಕಾವೇರಿ ಪುರ ಗ್ರಾಮಸ್ಥರು ಸ್ಥಳಕ್ಕೆ ಸಂಸದೆ ಸುಮಲತಾ ಅಂಬರೀಶ್, ಶಾಸಕ ಪುಟ್ಟರಾಜು, ಜಿಲ್ಲಾಧಿಕಾರಿ ಅಶ್ವತಿ, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಸ್ಥಳಕ್ಕೆ ಬಂದು ಮಂಜುನಾಥನ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸುವವರೆಗೂ ಶವವನ್ನು ಕೆಳಕ್ಕಿಳಿಸುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಗಣಿಗಾರಿಕೆಯಲ್ಲಿ ನಂಬಿ ಜೀವನ ನಡೆಸುತ್ತಿದ್ದ ಜನರಿಗೆ ಪರ್ಯಾಯ ಕೆಲಸ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!