Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ ₹ 31ಲಕ್ಷ ಆನ್ ಲೈನ್ ವಂಚನೆ ಮಾಡಿದ್ದ ಆರೋಪಿ ಬಂಧನ

ಲಿಂಗಾಯತ್ ಮ್ಯಾಟ್ರಿಮೋನಿ.ಕಾಮ್ (lingayatmatrimony.com) ಮೂಲಕ ಪರಿಚಯವಾದ ವ್ಯಕ್ತಿಯೊಬ್ಬರಿಗೆ ₹ 31 ಲಕ್ಷಕ್ಕೂ ಹೆಚ್ಚು ವಂಚನೆ ಮಾಡಿದ ಮಂಡ್ಯ ತಾಲ್ಲೂಕಿನ ಮಾಚಹಳ್ಳಿ ಗ್ರಾಮದ ಆರೋಪಿಯನ್ನು ಮಂಡ್ಯದ ಸಿ.ಇ.ಎನ್‌ ಅಪರಾಧ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಳೆದ ಮಾ.29ರಂದು ಮಂಡ್ಯ ಸಿ.ಇ.ಎನ್ ಪೊಲೀಸ್ ಠಾಣೆಗೆ ವಂಚನೆಗೊಳಗಾದ ವ್ಯಕ್ತಿ ಹಾಜರಾಗಿ ದೂರೊಂದನ್ನು ನೀಡಿದ್ದರು. ತಾನು lingayatmatrimony.com ನಲ್ಲಿ ತನ್ನ ವೈಯಕ್ತಿಕ ವಿವರಗಳನ್ನು ದಾಖಲು ಮಾಡಿದ್ದು, ಇದರಿಂದ ವ್ಯಕ್ತಿಯೊಬ್ಬ ಪರಿಚಯವಾಗಿ ತನಗೆ ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಕೆಲಸ ಕೊಡಿಸುವುದಾಗಿ ನಂಬಿಸಿ ಕೆಲಸದ ಸಂಬಂಧ ಡಿ.ಡಿ.ತೆಗೆದುಕೊಳ್ಳಲು, ಸ್ಯಾಲರಿ ಖಾತೆ ಮಾಡಿಸಲು, ಮೊಬೈಲ್ ನಂಬರ್‌ಗೆ ಆಧಾರ್ ಲಿಂಕ್ ಮಾಡಿಸಲು, ಸೆಕ್ಯೂರಿಟಿ ಡಿಪಾಸಿಟ್ ಹಣ ಪಾವತಿಸಲು ಇತ್ಯಾದಿ ಕಾರಣಗಳನ್ನು ನೀಡಿ ಹಂತ ಹಂತವಾಗಿ ಫೋನ್‌, ಗೂಗಲ್‌ಪೇ ಹಾಗೂ ಇತರೆ ಆನ್‌ಲೈನ್‌ ಪೇಮಂಟ್ ಮುಖಾಂತರ ಆ ವ್ಯಕ್ತಿಯ ಹಾಗೂ ಆತನ ಪರಿಚಯಸ್ಥರು ಹಾಗೂ ಆತನ ಸ್ನೇಹಿತರ ಖಾತೆಗಳಿಗೆ ಒಟ್ಟು ₹ 31,34,300 ಗಳನ್ನು  ಪಾವತಿಸಿಕೊಂಡು ಕೆಲಸ ಕೊಡಿಸದೇ ಮತ್ತು ಹಣ ವಾಪಸ್‌ ನೀಡದೆ ಮೋಸ ಮಾಡಿದ್ದಾರೆಂದು ದೂರು ದಾಖಲಿಸಿದ್ದರು.

ಈ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಹೆಚ್ಚುವರಿ ಪೊಲೀಸ್ ತಿಮ್ಮಯ್ಯನವರ ಮಾರ್ಗದರ್ಶನದಲ್ಲಿ ಮಂಡ್ಯ ಸಿ.ಇ.ಎನ್ ಅಪರಾಧ ಪೊಲೀಸ್ ಎನ್.ಜಯಕುಮಾರ್ ನೇತೃತ್ವದಲ್ಲಿ ಪಿಎಸ್‌ಐಗಳಾದ ರಸೂಲಸಾಬ ಎಂ ಗೌಂಡಿ, ರಾಘವೇದ್ರ ಎಂ ಕಠಾರಿ, ಎಎಸ್‌ಐ ಧನಪಾಲ, ಸಿಬ್ಬಂದಿಯವರಾದ ಎ.ಎಂ. ರಾಜೇಅರಸ್, ಸಿ.ಟಿ. ಆನಂದ, ಇ.ಎನ್.ಶಂಕರೇಗೌಡ, ಎಸ್.ಗಿರೀಶ್, ಟಿ.ಪಿ.ರಾಜೀವ್, ಮಂಜುನಾಥ್, ರವಿಕಿರಣ್, ಲೋಕೇಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.

ಈ ತಂಡವು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹ ಮಾಡಿ ಮಂಡ್ಯ ಜಿಲ್ಲೆಯ ಮಂಡ್ಯ ತಾಲ್ಲೂಕಿನ ಮಾಚಹಳ್ಳಿ ಗ್ರಾಮದ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದೆ. ಆತನಿಂದ ₹ 16 ಲಕ್ಷ ರೂ. ಹಣ, ಒಡವೆ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದೆ.

ನಗದು ₹ 10 ಲಕ್ಷ ರೂ., ಮೂರು ಚಿನ್ನದ ಉಂಗುರಗಳು, ಒಂದು ಚಿನ್ನದ ಚೈನು (ಇವುಗಳ ಒಟ್ಟು ತೂಕ 37 ಗ್ರಾಂ)  ಒಂದು ಆಫಲ್ ಐ ಫೋನ್ (ಇದರ ಮೌಲ್ಯ ₹1,30 ಲಕ್ಷ), ಒಂದು ಫಲ್ಸರ್ ಬೈಕನ್ನು ವಶ ಪಡಿಸಿಕೊಳ್ಳಲಾಗಿದೆ.

ಆರೋಪಿಯು ಮೈಸೂರು ಸಿ.ಇ.ಎನ್ ಅಪರಾಧ ಪೊಲೀಸ್‌ ಠಾಣೆ, ಕೆ.ಆರ್.ನಗರ ಗ್ರಾಮಾಂತರ ಠಾಣೆ, ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ, ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್‌ ಠಾಣೆ, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ಹರಿಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 6 ಪ್ರಕರಣಗಳಲ್ಲಿ ವಂಚನೆ ಮಾಡಿರುವ ಬಗ್ಗೆ ದೂರುಗಳು ದಾಖಲಾಗಿವೆ.

ಮಂಡ್ಯ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ಶ್ಲಾಘಿಸಿ, ಪ್ರಶಂಸಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!