Thursday, September 19, 2024

ಪ್ರಾಯೋಗಿಕ ಆವೃತ್ತಿ

ನಟ ಶಿವರಾಜ್ ಕುಮಾರ್, ಸಮಾಜಸೇವಕ ಜಯದೇವ್ ಅವರಿಗೆ ಪ್ರಶಸ್ತಿ ಪ್ರದಾನ

ಮಾನಸ ಎಜುಕೇಷನ್ ಟ್ರಸ್ಟ್ ಮತ್ತು ಡಿ.ಕರಡೀಗೌಡ ಪ್ರತಿಷ್ಟಾನದ ಸಂಯುಕ್ತಾಶ್ರಯದಲ್ಲಿ ನೀಡಲಾಗುವ ಡಿ.ಕರಡೀಗೌಡ ಕಲಾ ಕೌಸ್ತುಭ ಪ್ರಶಸ್ತಿಯನ್ನು ನಟ ಡಾ.ಶಿವಕುಮಾರ್ ಹಾಗೂ ಡಿ.ಕರಡೀಗೌಡ ಸಮಾಜ ಸೇವಾ ಪ್ರಶಸ್ತಿಯನ್ನು ಹಾಗೂ ದೀನಬಂಧು ಮಕ್ಕಳ ಮನೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ ಅವರಿಗೆ ಪ್ರಧಾನ ಮಾಡಲಾಗುವುದೆಂದು ಮಾನಸ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ವಿ.ಕೆ.ಜಗದೀಶ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ಡಿ.ಕರಡರ ಹೆಜ್ಜೆ ಗುರುತುಗಳನ್ನು ಮುಂದಿನ ತಲೆಮಾರಿಗೆ ಪಸರಿಸುವ ಸದುದ್ದೇಶದಿಂದ ಪ್ರತಿವರ್ಷ ಸಮಾಜದ ಸಾಧಕರನ್ನು ಗೌರವಿಸಲಾಗುತ್ತಿದೆ. ಡಿ.ಕರಡೀಗೌಡರ 10ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅ.22ರಂದು ಪ್ರಶಸ್ತಿ ಪ್ರದಾನ ಸಮಾರಂಭ ಮದ್ದೂರು ತಾಲ್ಲೂಕು ವಳಗೆರೆಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದರು.

ಅಭಿನಂದಿತರಿಗೆ ಸ್ಮರಣೆಕೆ, ಶಾಲು ಹಾಗೂ ತಲಾ 50 ಸಾವಿರ ರೂ. ನಗದು ಪುರಸ್ಕಾರ ನೀಡಿ, ಅವರ ಸಮಾಜಸೇವೆಗೆ ನೀರೆರೆಯುವ ಕಾರ್ಯವನ್ನು ನಮ್ಮ ಟ್ರಸ್ಟ್ ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಆಗಮಿಸಲಿದ್ದು, ಈ ಹಿಂದೆ ಡಾ.ಹಂಸಲೇಖ, ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಮಂಡ್ಯ ರಮೇಶ್, ಪ್ರೊ.ಚಿದಾನಂದ, ಪ್ರೊ.ರಾಮಮೂರ್ತಿ ಸೇರಿದಂತೆ ಹಲವರಿಗೆ ಸಮಾಜಸೇವಾ ಪ್ರಶಸ್ತಿ ನೀಡಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ತಾವು ವಹಿಸಲಿದ್ದು, ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನೆಯನ್ನು ನಿವೃತ್ತ ನ್ಯಾಯಾಧೀಶ ಟಿ.ಜಿ.ಶಿವಶಂಕರೇಗೌಡ ನೆರವೇರಿಸಿಕೊಡಲಿದ್ದು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಪ್ರೊ.ಎನ್.ಕೆ.ಲೋಲಾಕ್ಷಿ ಅಭಿನಂದನಾ ನುಡಿಗಳನ್ನು ನುಡಿಯಲಿದ್ದಾರೆಂದು ತಿಳಿಸಿದರು.

ನೂತನ ಶಾಲಾ ಕಟ್ಟಡದ ಶಂಕುಸ್ಥಾಪನೆಯನ್ನು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಹೆಚ್.ಎಲ್.ವಿಶಾಲ ರಘು, ವಕೀಲರ ಪರಿಷತ್ ರಾಜ್ಯ ಸಮಿತಿ ಸದಸ್ಯರಾದ ಎಸ್.ಬಸವರಾಜು, ಎಂ.ಎಸ್.ಮಧುಸೂದನ್ ಹಾಗೂ ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಮಿತಿ ಅಧ್ಯಕ್ಷ, ಖ್ಯಾತ ಅಂಕಣಕಾರ ಡಾ.ಗುಬ್ಬಿಗೂಡು ರಮೇಶ್ ಉಪಸ್ಥಿತರಿರಲಿದ್ದಾರೆಂದು ತಿಳಿಸಿದರು.

ಗೋಷ್ಠಿಯಲ್ಲಿ ಮಾನಸ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಹೆಚ್.ಬಿ.ನಾಗರಾಜು, ಸಂಸ್ಥೆಯ ಪ್ರಾಂಶುಪಾಲ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!