Friday, May 17, 2024

ಪ್ರಾಯೋಗಿಕ ಆವೃತ್ತಿ

ಆಧಾರ್- ಪಾನ್ ಕಾರ್ಡ್ ಜೋಡಣೆ ಶುಲ್ಕ ರದ್ದುಪಡಿಸಲು ಒತ್ತಾಯಿಸಿ ಪ್ರತಿಭಟನೆ

ಮಳವಳ್ಳಿ ತಾಲ್ಲೂಕು ಮಟ್ಟದ ಕಚೇರಿಗಳಲ್ಲಿ ಭ್ರಷ್ಟಚಾರ ನಿಲ್ಲಬೇಕು, ವಿದ್ಯುತ್ ತಿದ್ದುಪಡಿ ಕಾಯ್ದೆ ರದ್ದುಮಾಡಬೇಕು, ಉಚಿತ ಆರ್‌ಟಿಸಿ ವಿತರಿಸಬೇಕು, ಆಧಾರ್ ಪಾನ್ ಲಿಂಕ್‌ಗೆ ನಿಗಧಿಪಡಿಸಿರುವ ಶುಲ್ಕವನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಕಚೇರಿಗೆ ತೆರಳಿ ಪ್ರತಿಭಟನಾ ಧರಣಿ ನಡೆಸಿ ತಹಶೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.

ರೈತಸಂಘದ ಗೌರವ ಅಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ವಿರೋಧಿ ನೀತಿಯಿಂದಾಗಿ ಕೃಷಿ ಉತ್ಪಾದನಾ ವೆಚ್ಚಗಳು ಮಿತಿ ಮೀರಿ ಹೋಗುತ್ತಿದೆಯೇ ಹೊರತು ರೈತರು ಬೆಳೆದ ಬೆಳೆಗಳಿಗೆ ಸರಿಯಾದ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ, ಕೃಷಿಗಾಗಿ ಸಾಲ ಮಾಡಿದ ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಕೂಡಲೇ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಆಗ್ರಹಿಸಿದರು.

ನಂದಿನಿ ಹಾಲು ತನ್ನದೇ ಆದ ಶ್ರೇಷ್ಟತೆಯೊಂದಿಗೆ ಉತ್ತಮವಾಗಿ ಮಾರಾಟವಾಗುತ್ತಿದೆ, ನಮ್ಮ ರಾಜ್ಯದ್ದೇ ನಂದಿನಿ ಬ್ರಾಂಡ್ ಇರುವಾಗ ಅಮುಲ್ ಏಕೆ ಬೇಕು ಎಂದು ಪ್ರಶ್ನಿಸಿದ ಅವರು, ನಂದಿನಿ ಜೊತೆ ಅಮುಲ್ ವಿಲೀನಮಾಡಲು ಎಂದಿಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇವುಗಳು ಆತ್ಕಹತ್ಯೆಯಲ್ಲ ಸರ್ಕಾರ ಮಾಡುವ ಕೊಲೆಗಳಾಗಿವೆ, ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿಮಾಡಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ್ ಲೋಕೇಶ್ ಮನವಿಯನ್ನು ಸ್ವೀಕರಿಸಿ ಮಾತನಾಡಿ, ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ರೈತರಿಗೆ ಅನಾನುಕೂಲವಾಗದಂತೆ ಎಚ್ಚರ ವಹಿಸಬೇಕೆಂದು ತಾಕೀತು ಮಾಡಲಾಗಿದೆ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸುವ ಕೆಲಸವನ್ನು ತಾಲ್ಲೂಕು ಆಢಳಿತ ಮಾಡುತ್ತದೆ, ಸರ್ಕಾರದಿಂದ ಆಗಬೇಕಿರುವ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘ ಪ್ರಧಾನ ಕಾರ್ಯದರ್ಶಿ ಎಸ್ ಮಂಜೇಶ್‌ಗೌಡ, ಕೆ.ರಾಮಲಿಂಗೇಗೌಡ, ನಾಗೇಂದ್ರ ಸ್ವಾಮಿ, ವೆಂಕಟೇಶ್, ಪ್ರಭುಲಿಂಗು, ಮಹೇಶ್, ರಾಮೇಗೌಡ, ದೇವಿಪುರ ಮಹೇಶ್, ಬಸಬರಾಜು, ಎಳೇಗೌಡ, ರಾಮೇಗೌಡ, ಕೃಷ್ಣ, ಬಸವಯ್ಯ, ಚಿಕ್ಕಿರಪ್ಪ, ಜಯರಾಮು, ಸಣ್ಣೇಗೌಡ, ಶಿವಕುಮಾರ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!