ಕಾಂಗ್ರೆಸ್ ಪಕ್ಷ ಬಡವರು, ಯುವಜನರು, ಕಾರ್ಮಿಕರು, ರೈತರ ಪರವಾಗಿ ಕೆಲಸ ಮಾಡಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿ, ಅಂಬಾನಿ ಎಂಬ ಇಬ್ಬರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ವೀಕ್ಷಕ ಕುಸುಮ್ ಕುಮಾರ್ ಚೌಧರಿ ಟೀಕಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿಯವರ ಆಪ್ತಮಿತ್ರ ಅದಾನಿ ಸಾರ್ವಜನಿಕ ಸಂಸ್ಥೆಯಗಳಾದ ಎಸ್‌ಬಿಐ, ಎಲ್ಐಸಿಯ 2 ಲಕ್ಷ ಕೋಟಿ ಹಣ ನಷ್ಟ ಮಾಡಿದ್ದಾರೆ. 2002 ರಲ್ಲಿ ಸಣ್ಣ ಉದ್ಯಮಿಯಾಗಿದ್ದ ಅದಾನಿಯನ್ನು 2013-14ರಲ್ಲಿ ಮೋದಿ ಅವರು ಪ್ರಧಾನಿಯಾದ ನಂತರ ಆತನನ್ನು ಏಷ್ಯಾದ ಮೊದಲ ಶ್ರೀಮಂತ, ವಿಶ್ವದ ಎರಡನೇ ಶ್ರೀಮಂತನಾಗಿ ರಾಕೆಟ್ ವೇಗದಲ್ಲಿ ಬೆಳವಣಿಗೆಯಾಗಲು ಕಾರಣವಾಗಿದ್ದಾರೆ. ಹಿಂಡೆನ್ ಬರ್ಗ್ ವರದಿ ಹಿನ್ನೆಲೆಯಲ್ಲಿ ಅದಾನಿ ವಿರುದ್ಧ ಜಂಟಿ ಸಂಸದೀಯ ಸಮಿತಿಯಿಂದ ಅಥವಾ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಅದಾನಿಯ ಹಗರಣ ದೊಡ್ಡದು
1992ರಲ್ಲಿ ಹರ್ಷದ್ ಮೆಹ್ತಾ ಷೇರು ಮಾರುಕಟ್ಟೆಯಲ್ಲಿ ಮಾಡಿದ ಹಗರಣಕ್ಕಿಂತ ಅದಾನಿಯ ಈ ಹಗರಣ ದೊಡ್ಡದಾಗಿದ್ದು, ರಾಹುಲ್ ಗಾಂಧಿಯವರೇ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮತ್ತು ಅದಾನಿ ಒಟ್ಟಿಗೆ ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಬಡವರು, ಯುವಜನರು ಕಾರ್ಮಿಕರು, ರೈತರ ಪರ ಕೆಲಸ ಮಾಡಿದರೆ ಮೋದಿ ಸರ್ಕಾರ ಅದಾನಿ, ಅಂಬಾನಿ ಎಂಬ ಇಬ್ಬರಿಗಾಗಿ ದೇಶವನ್ನು ಅಡವಿಟ್ಟಿದೆ.ಮೋದಿ ಸರ್ಕಾರದಲ್ಲಿ ರಾಫೆಲ್ ವಿಮಾನ ಖರೀದಿಯಲ್ಲಿ ಹಗರಣ ನಡೆಯಿತು. ಆದರೆ ಅದರ ವಿರುದ್ಧ ಸರಿಯಾದ ತನಿಖೆ ನಡೆಯಲಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರಕ್ಕೆ
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿರುವುದು ಖಚಿತ.ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ಹಗರಣಗಳಾಗಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಮೇಲೆ ಎಲ್ಲಾ ಹಗರಣಗಳ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಿದೆ ಎಂದರು.
ಗ್ಯಾರಂಟಿ ಬಾಂಡ್
ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಭರವಸೆಗಳಾದ ಗೃಹಲಕ್ಷ್ಮಿಯರಿಗೆ ಮಾಸಿಕ 2,000 ರೂ.ಹಾಗೂ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಕಾರ್ಯಕ್ರಮವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಸಹಿಯೊಂದಿಗೆ ಗ್ಯಾರಂಟಿ ಬಾಂಡನ್ನು ಶೀಘ್ರ ಪ್ರತಿ ಮನೆಗೆ ವಿತರಿಸಲಾಗುತ್ತದೆ. ಕಾಂಗ್ರೆಸ್ ಪಕ್ಷದ ಮಹತ್ವಕಾಂಕ್ಷೆಯ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ತೊಡಗಿಸಿಕೊಂಡು ಪ್ರತಿ ಮನೆಗೆ ತಲುಪಿಸಬೇಕೆಂದು ತಿಳಿಸಿದರು.
ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ
ಕಾಂಗ್ರೆಸ್ ಪಕ್ಷದಲ್ಲಿ ಮೂಲ ಮತ್ತು ವಲಸಿಗ ಎಂಬ ಮಾತೇ ಇಲ್ಲ. ಆಕಾಂಕ್ಷಿಗಳೆಲ್ಲ ಒಂದಾಗಿದ್ದು ಯಾರಿಗೆ ಕಾಂಗ್ರೆಸ್ ಪಕ್ಷ ಬಿ.ಫಾರಂ ನೀಡುವುದೋ ಅವರ ಪರವಾಗಿ ಉಳಿದವರೆಲ್ಲ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಭ್ರಷ್ಟ, ಲೂಟಿಕೋರ ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡರೆಲ್ಲಾ ಒಗ್ಗಟ್ಟಾಗಿ ಹೋರಾಟ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಕೀಲಾರ ರಾಧಾಕೃಷ್ಣ, ಸಿದ್ದರಾಮೇಗೌಡ, ರುದ್ರಪ್ಪ, ಡಾ. ಕೃಷ್ಣ, ಅಂಜನಾ ಶ್ರೀಕಾಂತ್, ಅಮರಾವತಿ ಚಂದ್ರಶೇಖರ್, ಶಿವಾನಂದ ಉಪಸ್ಥಿತರಿದ್ದರು.




