Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರ ರಚನೆಗೂ ಮುನ್ನವೇ ಸಂಕಷ್ಟ| ಬಿಜೆಪಿಯ ಅಗ್ನಿವೀರ್ ಯೋಜನೆಗೆ ಜೆಡಿಯು ಆಕ್ಷೇಪ

ನೂತನ ಸರ್ಕಾರ ರಚನೆಯಾಗುವ ಮುನ್ನವೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸಂಕಷ್ಟಗಳು ಶುರುವಾಗುವ ಸಾಧ್ಯತೆಯಿದೆ. ಒಕ್ಕೂಟದ ಪ್ರಮುಖ ಪಕ್ಷವಾಗಿ ಕಿಂಗ್‌ ಮೇಕರ್‌ ಸ್ಥಾನದಲ್ಲಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸೇನೆಯಲ್ಲಿನ ಅಗ್ನಿವೀರ್ ನೇಮಕಾತಿ ಯೋಜನೆಯನ್ನು ಪರಿಶೀಲಿಸುವಂತೆ ಬೇಡಿಕೆಯಿಟ್ಟಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಯು ವಕ್ತಾರ ಕೆ ಸಿ ತ್ಯಾಗಿ, ಅಗ್ನಿವೀರ್ ಯೋಜನೆಯನ್ನು ಪುನರ್‌ಪರಿಶೀಲಿಸುವ ಅಗತ್ಯವಿದೆ. ಈ ಯೋಜನೆಗೆ ಹಲವು ವಿರೋಧವಿದೆ. ಚುನಾವಣೆಯಲ್ಲೂ ಕೂಡ ಇದರ ಪರಿಣಾಮವನ್ನು ನೋಡಿದ್ದೇವೆ ಎಂದು ತಿಳಿಸಿದ್ದಾರೆ.

“ಅಗ್ನಿವೀರ್ ಯೋಜನೆ ಪ್ರಾರಂಭಿಸಿದಾಗ ನಾವು ಇದರ ಬಗ್ಗೆ ಜಗಳವಾಡಲಿಲ್ಲ. ಸೇನಾ ಪಡೆಗಳ ದೊಡ್ಡ ದೊಡ್ಡ ವಿಭಾಗಗಳಲ್ಲಿ ಈ ಯೋಜನೆ ಬಗ್ಗೆ ಅಸಮಾಧಾನವಿತ್ತು. ಸೇನಾ ಕುಟುಂಬಗಳು ಚುನಾವಣಾ ಸಂದರ್ಭದಲ್ಲಿ ಯೋಜನೆಯ ಬಗ್ಗೆ ಪ್ರತಿಭಟನೆ ನಡೆಸಿದ್ದರು. ಹಾಗಾಗಿ, ಈ ಬಗ್ಗೆ ಚರ್ಚಿಸುವ ಅಗತ್ಯವಿದೆ” ಎಂದು ಕೆ ಸಿ ತ್ಯಾಗಿ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿರುವ ಒಂದು ದೇಶ ಒಂದು ಚುನಾವಣೆ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾನೂನು ಆಯೋಗದ ಅಧ್ಯಕ್ಷರಿಗೆ ಈ ಬಗ್ಗೆ ಪತ್ರ ಬರೆದು ಎಲ್ಲ ಮುಖ್ಯಮಂತ್ರಿಗಳು, ಎಲ್ಲ ಪಕ್ಷಗಳು, ವಿವಿಧ ಪಂಗಡಗಳ ನಾಯಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದರು ಎಂದು ತ್ಯಾಗಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ರಕ್ಷಣಾ ಪಡೆಯ ಪಿಂಚಣಿ ಮಸೂದೆಯನ್ನು ಕಡಿತ ಮಾಡಲು ಹಾಗೂ ಸೇನಾ ಪಡೆಯನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರವು ಅಗ್ನಿವೀರ್ ಯೋಜನೆಯನ್ನು 2022ರಲ್ಲಿ ಪರಿಚಯಿಸಿತ್ತು.

ಈ ಯೋಜನೆಯಡಿ, ಭೂಸೇನೆ, ವಾಯು ಸೇನೆ ಹಾಗೂ ನೌಕಾಸೇನೆಗಳಿಗೆ 4 ವರ್ಷದ ಅವಧಿಯ ಅಲ್ಪಾವಧಿಯವರೆಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಯೋಜನೆಯಲ್ಲಿ ನೇಮಕಗೊಂಡವರು ಕೇವಲ 25 ರಷ್ಟು ಮಾತ್ರ 15 ವರ್ಷಗಳವರೆಗೆ ಶಾಶ್ವತ ಹುದ್ದೆ ಪಡೆಯಲಿದ್ದಾರೆ. ಈ ಯೋಜನೆ ಜಾರಿಗೊಂಡ ನಂತರ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಬೃಹತ್‌ ಪ್ರತಿಭಟನೆ ನಡೆದಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!