ಮೇ 3 ರಂದು ನಡೆಯುವ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಮಂಡ್ಯ ಜಿಲ್ಲಾಡಳಿತ, ಕೇವಲ ಒಂದು ವೀರಶೈವ ಸಮಾಜಕ್ಕೆ ಮೀಸಲಿರುವ ರೀತಿಯಲ್ಲಿ ಆಚರಿಸುತ್ತಿದ್ದು, ನಮಗೆ ತುಂಬಾ ನೋವು ತಂದಿದೆ ಎಂದು ಮಂಡ್ಯ ಜಿಲ್ಲಾ ವೀರಶೈವ ಲಿಂಗಾಯತ ವೇದಿಕೆಯ ಜಿಲ್ಲಾಧ್ಯಕ್ಷ ಸುಂಡಳ್ಳಿ ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.
ಮಂಡ್ಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿಯ ನಿರ್ದೇಶಕರುಗಳಿಗೆ ಈಗಾಗಲೇ ನಮ್ಮ ಸಮಿತಿಯ ಎಲ್ಲರೂ ತೆರಳಿ ಈ ಬಗ್ಗೆ ಒಂದು ಮನವಿಯನ್ನು ಸಹ ಸಲ್ಲಿಸಿದ್ದೇವೆ ಎಂದರು.
ರಾಜ್ಯ ಸರ್ಕಾರ, ಭಾರತ ಸರ್ಕಾರ, ವಿಶ್ವಕ್ಕೆ ಸಮಾನತೆಯನ್ನು ಸಾರಿರುವ ವಿಶ್ವಗುರು ಬಸವಣ್ಣನವರನ್ನೇ ಆಗಲಿ, ಡಾ.ಬಿ.ಆರ್. ಅಂಬೇಡ್ಕರ್ ರವನ್ನಾಗಲಿ, ಮಹಾನ್ ವ್ಯಕ್ತಿ ಬುದ್ಧರನ್ನಾಗಲಿ, ಒಂದು ಸಮಾಜಕ್ಕೆ ಮೀಸಲಿಡಬಾರದು. ಈ ಕಾರ್ಯಕ್ರವವನ್ನು ಯಾವುದೇ ಸಂಘಟನೆ ಮಾಡಿದರೂ ಸಹ ಸಮಾನತೆ ಸಾರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯಬೇಕು ಎಂದು ಹಲವು ಬಾರಿ ನಮ್ಮ ಸಂಘಟನೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಆದರೂ ಎಲ್ಲರನ್ನೂ ಒಳಗೊಂಡು ಜಯಂತಿ ಆಚರಿಸುತ್ತಿಲ್ಲ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ಸಮಾಜದ ಸಮುದಾಯಗಳಿರಬಹುದು, ದಲಿತ ಸಂಘರ್ಷ ಸಮಿತಿಯಾಗಿರಬಹುದು, ಕುರುಬ ಸಮಾಜವಾಗಿರಬಹುದು, ಸವಿತ ಸಮಾಜವಾಗಿರಬಹುದು, ಮುಸಲ್ಮಾನ ಸಮಾಜವಾಗಿರಬಹುದು, ಬಸವಣ್ಣನವರ ತತ್ವ ಒಪ್ಪುವ ಎಲ್ಲರನ್ನೂ ಸೇರಿಸಿಕೊಂಡು ಕಾರ್ಯಕ್ರಮ ನಡೆಸಬೇಕಿತ್ತು ಎಂದರು.
ಈ ಕಾರ್ಯಕ್ರಮವು ವೈಶಾಲ್ಯಯುತವಾಗಿ ಬಹಳ ವಿಜೃಂಭಣೆಯಿಂದ ನಡೆಯಲಿ ಎಂದು ನಾವು ಮನವಿ ಮಾಡಿಕೊಂಡೆವು. ಆದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಕೈಚಳಕ ತೋರಿಸಿ, ಜಿಲ್ಲಾಡಳಿತ ಮೇಲೆ ಒತ್ತಡ ತಂದಿರುವ ರೀತಿ ಕಾಣುತ್ತಿದೆ ಎಂದು ಆರೋಪಿಸಿದರು.
ಈ ಕಾರ್ಯಕ್ರಮದಲ್ಲಿ ಮತ್ತು ಮೆರವಣಿಗೆಯಲ್ಲೂ ನಮ್ಮ ಸಂಘಟನೆಯವರು ಪಾಲ್ಗೊಳ್ಳುತ್ತೇವೆ ಅದರೆ, ಆ ಕಾರ್ಯಕ್ರಮದಲ್ಲಿ ನಾವು ಕಪ್ಪು ಬಟ್ಟೆ ಕಟ್ಟಿಕೊಂಡು ನಮ್ಮ ಪತಿಭಟನೆ ವ್ಯಕ್ತಪಡಿಸುತ್ತೇವೆ ಎಂದರು.
ಈ ನಾಡಿಗೆ, ವಿಶ್ವಕ್ಕೆ ಸಮಾನತೆಯನ್ನು ಸಾರಿರುವಂತಹ ಮಹಾನ್ ಚೇತನಗಳಾದ ಬುದ್ದ, ಬಸವಣ್ಣ, ಅಂಬೇಡ್ಕರ್ ಇಂತಹ ಒಂದು ಮಹನೀಯರ ಜಯಂತಿಯನ್ನು ದಯಾಮಾಡಿ ಒಂದು ಸಮಾಜಕ್ಕೆ, ಒಂದು ವರ್ಗಕ್ಕೆ ಮೀಸಲಿಡಬೇಡಿ. ಈ ವರ್ಗದಿಂದ, ಸಮಾಜದಲ್ಲಿ ಎಲ್ಲವನ್ನೂ ಮೀರಿ ಬೆಳೆದಂತಹ ಈ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಎಲ್ಲರೂ ಆಚರಿಸಲು ಅವಕಾಶ ಮಾಡಿಕೊಡಬೇಕಾದ ಜಿಲ್ಲಾಡಳಿತ ವಿಫಲವಾಗಿದೆ ಎಂದರು.
ಇದನ್ನು ಓದಿ: ಸಚಿವ ಅಶ್ವಥ್ ನಾರಾಯಣ್ ಸಹೋದರನ ಬಂಧನಕ್ಕೆ ಆಗ್ರಹ