ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವ ಆದೇಶವನ್ನು ಹಿಂಪಡೆಯಬೇಕು, ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಬಡ ಕುಟುಂಬಗಳಿಗೆ ನಿರಂತರ ವಿದ್ಯುತ್ ಒದಗಿಸಬೇಕೆಂದು ಆಗ್ರಹಿಸಿ ರೈತಸಂಘದ ಕಾರ್ಯಕರ್ತರು ಶೀರಂಗಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ರೈತರಿಗೆ ಸುಳ್ಳು ಭರವಸೆಕೊಟ್ಟು ಅಧಿಕಾರಕ್ಕೆ ಬಂದು ರೈತರ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ಕೊಡುತಿದೆ, ರೈತರನ್ನು ಕಿತ್ತು ತಿನ್ನುವ ಕಾನೂನುಗಳನ್ನು ತಂದು ರೈತರನ್ನು ಕಷ್ಟಕ್ಕೆ ದೂಡುತ್ತಿದೆ ಎಂದು ದೂರಿದರು.
ಇಡೀ ದೇಶಕ್ಕೆ ಅನ್ನ ಹಾಕುವ ರೈತರು, ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದೇ, ಅವರ ಶ್ರಮಕ್ಕೆ ಬೆಲೆ ಸಿಗುವ ಹಾಗೇ ಯಾವುದೇ ಕಾನೂನುಗಳನ್ನು ಮಾಡದೇ ವಂಚಿಸುತ್ತಿದೆ ಎಂದು ಆರೋಪಿಸಿದರು.
ಲಕ್ಷಾಂತರ ರೈತರು ಪಂಪ್ ಸೇಟ್ಗಳನ್ನೆ ಅವಲಂಬಿಸಿ ಕೃಷಿ ಮಾಡುತ್ತಿದ್ದಾರೆ, ಹೀಗಿರುವಾಗ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಿ ಹಣ ಮಾಡಿಕೊಳ್ಳಲು ಸರ್ಕಾರ ಯೋಚಿಸುತ್ತಿದೆ ಎಂದು ಕಿಡಿಕಾರಿದರು.
ರೈತರ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಾ, ಬಲಿಷ್ಟರ ಉದ್ಯಮಿಗಳ ಪರ ಸರ್ಕಾರ ಕೆಲಸ ಮಾಡುತ್ತಿದೆ, ಕರೋನದಂತಹ ಸಂಕಷ್ಟದ ಸಮಯದಲ್ಲಿ ಎಲ್ಲಾ ವರ್ಗದ ಜನರು ಮನೆಯಲ್ಲಿ ಇದ್ದರೂ, ರೈತರು ಮಾತ್ರ ತಮ್ಮ ಕೆಲಸದಲ್ಲಿ ನಿರತರಾಗಿದ್ದರು.
ಆದರೂ ಇಂತಹ ಸಮಯದಲ್ಲಿ ಸರ್ಕಾರವು ರೈತರ ನೆರವಿಗೆ ಬಾರದೇ ನಿರ್ಲಕ್ಷ್ಯವಹಿಸಿತು, ಎಲ್ಲಾ ಬೆಲೆಗಳು ಗಗನ ಮುಟ್ಟಿವೆ, ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯಯುತ್ತಿಲ್ಲ, ಎಲ್ಲವು ಮಧ್ಯವರ್ತಿಗಳ ಪಾಲಗುತ್ತಿವೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪಾಂಡು, ರಮೇಶ್, ಶಂಭುಗೌಡ, ಸ್ವಾಮಿಗೌಡ, ಕುಬೇರಪ್ಪ, ರವಿಚಂದ್ರ ಸುರೇಶ್, ಬಾಲು, ಮಂಜೇಶ್ ಗೌಡ, ಜಯರಾಮು, ಚಂದ್ರು ಹಾಗೂ ಶಂಕರ್ ಸೇರಿದಂತೆ ಮತ್ತಿತರರಿದ್ದರು.




