ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಫಲವಾಗಿ ಕೃಷಿ ಉದ್ಯಮದ ಮೇಲೆ ದೊಡ್ಡ ಪೆಟ್ಟು, ಶ್ರಮ, ಗಳಿಕೆ, ಸಂಪನ್ಮೂಲ ಕಸಿಯುವ ಕೆಲಸವಾಗುತ್ತಿದೆ ಎಂದು ರೈತನಾಯಕಿ ಸುನಂದ ಜಯರಾಂ ಆತಂಕ ವ್ಯಕ್ತಪಡಿಸಿದ್ದರು.
ಮಂಡ್ಯ ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಮುದ್ರಣ ರಂಗದ ಪಿತಾಮಹ ಜೋಹಾನ್ಸ್ ಗುಟೆನ್ ಬರ್ಗ್ ನೆನಪಿನಲ್ಲಿ ನಡೆದ ಮುದ್ರಣಕಾರರ ದಿನಾಚರಣೆ ಮತ್ತು ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಬೆವರು, ಶ್ರಮವನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ, ಇದು ದೊಡ್ಡ ಅಪಾಯ ಎಂದು ಹೇಳಿದರು.
ಭಾರತದಲ್ಲಿ ಶೇಕಡಾ 80ರಷ್ಟು ಭಾಗ ಕಾರ್ಮಿಕರೇ ಆಗಿದ್ದಾರೆ. ಶೇಕಡ 20ರಷ್ಟು ಮಾತ್ರ ಶ್ರಮ ಎಂದರೆ ಏನೆಂದು ಗೊತ್ತಿಲ್ಲದವರಿರಬಹುದು. ರಾಷ್ಟ್ರದಲ್ಲಿ ಕೃಷಿಯನ್ನೇ ಅವಲಂಬನೆ ಮಾಡಿರುವವರೇ ಹೆಚ್ಚು. 90ರ ದಶಕದಲ್ಲಿ ಇಂತಹ ಉದ್ಯಮಕ್ಕೆ ದೊಡ್ಡ ಪೆಟ್ಟು ಕೆಲಸ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿಕರು, ಶ್ರಮಿಕರು, ಮಹಿಳೆಯರು, ಕಾರ್ಮಿಕರು, ದುಡಿಯುವ ಎಲ್ಲಾ ವರ್ಗದ ಜನತೆ ಈ ದೇಶವನ್ನು ಕಟ್ಟಿದ್ದೇವೆ, ಉಳಿಸಿದ್ದೇವೆ, ಉಸಿರನ್ನು ಕೊಟ್ಟಿದ್ದೇವೆ. ಈ ದೇಶದ ಎಲ್ಲಾ ಗೌರವ ಸಂಪನ್ಮೂಲ ಶ್ರಮಿಕರಿಗೆ, ಕಾರ್ಮಿಕರಿಗೆ ಬೆವರನ್ನು ಸುರಿಸಿ ದುಡಿಯುವವರಿಗೆ ಸಲ್ಲಬೇಕು, ಆದರೆ ಅದು ಆಗುತ್ತಿಲ್ಲ. ಶೇಕಡ 20ರಷ್ಟು ಜನ ಇಡೀ ದೇಶವನ್ನು ಬಲಿಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಜೋಹಾನ್ಸ್ ಗುಟೆನ್ ಬರ್ಗ್ 50ರ ವಯೋಮಾನದಲ್ಲಿ ಮುದ್ರಣ ಮಾಧ್ಯಮವನ್ನು ಸಂಶೋಧಿಸಿದರು. ಇಂದು ಈ ಕ್ಷೇತ್ರದಲ್ಲಿ ಬಹಳಷ್ಟು ತಾಂತ್ರಿಕತೆ ಬಂದು ವೇಗ ಪಡೆದುಕೊಂಡಿರಬಹುದು, ಆದರೆ ಮೊದಲು ಅದನ್ನು ಪರಿಚಯಿಸಿದ ವ್ಯಕ್ತಿಗೆ ಗೌರವ ಕೊಡುವುದು ಎಲ್ಲರ ಧರ್ಮವಾಗಿದೆ ಎಂದರು. ಈ ಕ್ಷೇತ್ರದಲ್ಲಿ ದುಡಿಮೆ, ಗಳಿಕೆ ಅಷ್ಟೇ ಅಲ್ಲದೆ ಬಹಳ ಎಚ್ಚರಿಕೆಯಿಂದಲೂ ಕೆಲಸ ಮಾಡಬೇಕಾಗುತ್ತದೆ. ಜೊತೆಗೆ ಪತ್ರಿಕಾ ಮಾಧ್ಯಮದಲ್ಲಿಯೂ ನಾವು ಬಹಳಷ್ಟು ಶ್ರಮವನ್ನು ಕಾಣುತ್ತಿದ್ದೇವೆ ಎಂದು ಉದಾಹರಣೆ ಸಮೇತ ವಿವರಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಚ್.ಎಸ್. ಮುದ್ದೇಗೌಡ ಮಾತನಾಡಿ, ಮನುಷ್ಯ ಜೀವಂತವಿರುವಾಗ ಏನಾದರೂ ಒಂದು ಸಾಧನೆ ಮಾಡಬೇಕು ಇಲ್ಲದಿದ್ದರೆ ಅವನ ಹೆಸರು ಅಳಿಸಿ ಹೋಗುತ್ತದೆ, ಆದರೆ ಮುದ್ರಣ ಮಾಧ್ಯಮ ಒಂದನ್ನು ಜಗತ್ತಿಗೆ ಪರಿಚಯಿಸಿದ ಜೋಹಾನ್ಸ್ ಗುಟೆನ್ ಬರ್ಗ್ ಅವರನ್ನು ಜಗತ್ತು ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೂ ನೆನಪಿಸಿಕೊಳ್ಳುವಂತಹ ಕಾರ್ಯ ಮಾಡಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಹಿರಿಯ ಸಾಹಿತಿಗಳಾದ ಪ್ರೊ. ಹೆಚ್.ಎಸ್. ಮುದ್ದೇಗೌಡರವರು ಉದ್ಘಾಟಿಸಿದರು. ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ .ಜೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್, ಮುದ್ರಣಕಾರರ ಸಂಘದ ರಾಜ್ಯ ಸಂಚಾಲಕ ಎಂ.ಎಸ್. ಸತೀಶ್, ಸಂಘದ ಗೌರವಾಧ್ಯಕ್ಷ ಎಂ.ಎಸ್. ಶಿವಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ಹಿರಿಯ ಮುದ್ರಣ ಮಾಲೀಕರಾದ ಕೆ. ನಾಗರಾಜು, ರಾಜಪ್ಪ, ನಾರಾಯಣಸ್ವಾಮಿ ಎಂ.ಆರ್ ಅವರನ್ನು ಸನ್ಮಾನಿಸಿ ಗೌರವ ಗೌರವಿಸಲಾಯಿತು.