Thursday, September 19, 2024

ಪ್ರಾಯೋಗಿಕ ಆವೃತ್ತಿ

ನ್ಯಾಯಾಂಗದ ಸಾರ್ವಭೌಮತೆ ಮೇಲೆ ಬಿಜೆಪಿ ಸರ್ಕಾರದ ದಾಳಿ : ನ್ಯಾಯಾಂಗದ ರಕ್ಷಣೆಗೆ ಹೋರಾಟಕ್ಕೀಳಿಯಲು ಜನತೆಗೆ ಕರೆ


  • ನೊಂದವರ ಏಕೈಕ ಆಶಾಕಿರಣವಾದ ನ್ಯಾಯಾಂಗವನ್ನು ರಕ್ಷಿಸಿಕೊಳ್ಳಲು ಹೋರಾಟಕ್ಕೀಳಿಯಬೇಕಿದೆ

  • ಅಖಿಲ ಭಾರತ ವಕೀಲರ ಒಕ್ಕೂಟದ ಮಂಡ್ಯ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್ ಕರೆ

ಭಾರತದ ಸ್ವಾತಂತ್ರ್ಯ ನ್ಯಾಯಾಂಗದ ಮೇಲೆ ಕೇಂದ್ರದ ಬಿಜೆಪಿ ಸರ್ಕಾರವು ನಿರಂತರ ದಾಳಿ ನಡೆಸುತ್ತಿದ್ದು, ನೊಂದವರ ಹಾಗೂ ಅನ್ಯಾಯಕ್ಕೊಳಗಾದವರ ಏಕೈಕ ಆಶಾಕಿರಣವಾಗಿರುವ ನ್ಯಾಯಾಂಗವನ್ನು ರಕ್ಷಿಸಿಕೊಳ್ಳಲು ಈ ಸಮಯದಲ್ಲಿ ದೇಶದ ಜನತೆ ಹೋರಾಟಕ್ಕೀಳಿಯಬೇಕಿದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ಮಂಡ್ಯ ಜಿಲ್ಲಾ ಘಟಕ ಕರೆ ನೀಡಿದೆ.

ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟದ ಮಂಡ್ಯ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್ ಮಾತನಾಡಿ, ದೇಶಕ್ಕೆ ಬೇಕಿರುವುದೇ ನ್ಯಾಯ ನಿಷ್ಠ ನ್ಯಾಯಾಧೀಶರೋ ? ಮೋದಿ ನಿಷ್ಠ ನ್ಯಾಯಾಧೀಶರೋ ? ಎನ್ನುವ ಪ್ರಶ್ನೆಗೆ ತನಗಿಷ್ಠವಾದ ಉತ್ತರ ಹುಡುಕಿಕೊಳ್ಳಲು ಕೇಂದ್ರ ಬಿಜೆಪಿ ಸರ್ಕಾರ ನ್ಯಾಯಾಂಗದ ಸಾರ್ವಭೌಮತೆ ಮೇಲೆ ನಿರಂತರ ದಾಳಿ ನಡೆಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೈಕೋರ್ಟುಗಳು ಆಯಾ ರಾಜ್ಯದ ಹೈಕೋರ್ಟುಗಳ ಮುಖ್ಯ ನ್ಯಾಯಮೂರ್ತಿ ಮತ್ತು ನಂತರದ ಹಿರಿತನವುಳ್ಳ  ಇಬ್ಬರು ನ್ಯಾಯಮೂರ್ತಿಗಳು ಸೇರಿದ ಕೊಲಿಜಿಯಂ ಹೈಕೋರ್ಟ್ ಗೆ ಯಾರನ್ನು ನ್ಯಾಯಮೂರ್ತಿಯನ್ನಾಗಿ ಆರಿಸಬೇಕು ಎಂದು ಆಯಾ ರಾಜ್ಯಗಳ ಸರ್ಕಾರದ ಪರಿಶೀಲನೆಯನ್ನು ಒಳಗೊಂಡಂತೆ ಸುಪ್ರಿಂಕೋರ್ಟಿಗೆ ಶಿಫಾರಸ್ಸು ಮಾಡುತ್ತದೆ,  ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಮತ್ತು ಅಲ್ಲಿನ ಹಿರಿಯ 5 ಜನ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸ್ಸು ಮಾಡುತ್ತದೆ. ಈಗ ಕೇಂದ್ರ ಸರಕಾರದ ಕಾನೂನು ಮಂತ್ರಿ ರಿಜಿಜು ಮತ್ತು ಉಪ ರಾಷ್ಟ್ರಪತಿ ಧನ್ ಕರ್ ಈ ಕೊಲಿಜಿಯಂ ವ್ಯವಸ್ಥೆ ವಿರುದ್ಧ ನಿರಂತರ ದಾಳಿ ಎಸಗುತ್ತಿದ್ದಾರೆ.  ಇದಕ್ಕೆ ಕಾರಣವೆಂದರೆ ‘ಸಂಸತ್ತಿನ ಪರಮಾಧಿಕಾರದ ಹೆಸರಿನಲ್ಲಿ ‘ನ್ಯಾಯಾಂಗದ ಸಾರ್ವಭೌಮತೆಯನ್ನು ಕಸಿದು ಕೊಳ್ಳುವ ದುರುದ್ಧೇಶ ಬಿಟ್ಟರೇ ಬೇರೆನೂ ಇಲ್ಲ’ ಎಂದು ದೂರಿದರು.

ಕಾಂಗ್ರೆಸ್ ಕೂಡ ಈ ಹಿಂದೆ ಇಂತಹ ಪ್ರಯತ್ನ ಮಾಡಿ ಸೋತಿತ್ತು, ನಂತರ ಸುಮ್ಮನಾಗಿತ್ತು. ಆದರೆ ಬಿಜೆಪಿ ಸೋಲೊಪ್ಪಿಕೊಳ್ಳಲು ಸಿದ್ದವಿಲ್ಲ, ಆದರೆ ಈ ದೇಶದ ಕೊನೆಯ ಆಶಾಕಿರಣವಾದ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಭಂಗವಾದರೆ ಈ ದೇಶದ ಸಾಂವಿಧಾನಿಕ ಪ್ರಜಾಪ್ರಭುತ್ವವೇ ಕುಸಿಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇದನ್ನು ದೇಶದ ಜನತೆ ತೀವ್ರವಾಗಿ ಗಮನಿಸಬೇಕೆಂದು ತಿಳಿಸಿದರು.

ಕಾನೂನು ಡಿಗ್ರಿ ನೇತಾಕಿಕೊಂಡ ಯಾವ್ಯಾವುದೋ ರಾಜಕೀಯ ಪಕ್ಷದ ರಾಜಕೀಯ ಪಕ್ಷಗಳ ಕಾರ್ಯಕರ್ತರೆಲ್ಲ, ನ್ಯಾಯಾಧೀಶರಾಗಿ ಕುಂತು ಬಿಡುವ ಅಪಾಯ ಈಗ ಬಂದೊದಗಿದೆ. ಆಗ ಈ ದೇಶದ ಜನ ನ್ಯಾಯ ಕೇಳಲು ಎಲ್ಲಿಗೆ ಹೋಗಬೇಕು ? ಇಂತಹ ಪ್ರಯತ್ನಗಳನ್ನು ಕಾಂಗ್ರೆಸೆ ಮಾಡಲಿ ಬಿಜೆಪಿಯೆ ಮಾಡಲಿ, ದೇಶದ ಜನ  ಶತಾಯ ಗತಾಯವಾಗಿ ವಿರೋಧಿಸಬೇಕೆಂದು ಕರೆ ನೀಡಿದರು.

ದೆಹಲಿ ಹೈಕೋರ್ಟ್ ಸೌರಭ್ ಕಿರ್ಪಾಲ್, ಮದ್ರಾಸ್ ಹೈಕೋರ್ಟ್ ಜಾನ್ ಸತ್ಯನ್ ಹಾಗೂ ಬಾಂಬೆ ಹೈಕೋರ್ಟ್ ಸೋಮಶೇಖರ್ ಸುಂದರೇಶನ್ ಅವರನ್ನು ಆಯಾ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಸುಪ್ರಿಂಕೋರ್ಟ್ ಮಾಡಿರುವ ಶಿಫಾರಸ್ಸನ್ನು ಒಪ್ಪಲು ನಿರಾಕರಿಸಿ ಕೇಂದ್ರ ಸರಕಾರ ಪಟ್ಟಿ ಮಾಡಿ ಕಳಿಸಿರುವ ತಕರಾರನ್ನು ಮೊದಲ ಬಾರಿಗೆ ಸುಪ್ರೀಂಕೋರ್ಟ್ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಆ ಮೂರು ತಕರಾರುಗಳಲ್ಲಿನ ಸಮಾನ ಅಂಶ ಮೋದಿ ನೇತೃತ್ವದ ಸರಕಾರದ ಆಡಳಿತ ವೈಖರಿಯನ್ನು ವಿಮರ್ಶೆ ಮಾಡಿದ್ದ ಸುದ್ದಿಗಳನ್ನು ಅವರು ಹಂಚಿಕೊಂಡಿದ್ದರು ಎಂಬುದಾಗಿದೆ. ಒಟ್ಟಾರೆಯಾಗಿ ಈ ಸರಕಾರ ಹೌದಪ್ಪಗಳನ್ನು ಮಾತ್ರ ನ್ಯಾಯಪೀಠದಲ್ಲಿ ಕೂರಿಸಲು ಪ್ರಯತ್ನಿಸುತ್ತಿದೆ ಎಂದಾಗುತ್ತದಲ್ಲವೇ ಎಂದು ಪ್ರಶ್ನಿಸಿದರು.

ಕೊಲಿಜಿಯಂ ಲೋಪದೋಷಗಳನ್ನು ಎತ್ತಿ ತೋರಿಸುವ ನೆಪದಲ್ಲಿ ಈ ಸರಕಾರ ನ್ಯಾಯಾಂಗದ ಸಾರ್ವಭೌಮತೆಯನ್ನು ಕಸಿಸುವ ಪಯತ್ನ ಮಾಡುತ್ತಿದೆ, ಕೊಲಿಜಿಯಂನಲ್ಲಿ ಸರಕಾರದ ಪ್ರತಿನಿಧಿಗಳು ಇರಬೇಕು ಎಂದು ಅದಕ್ಕೆ ಹೇಳುತ್ತಿದೆ,  ಅದ್ದರಿಂದ ಆಲ್ ಇಂಡಿಯಾ ಲಾಯರ್‍ಸ್ ಯೂನಿಯನ್ ಸರ್ಕಾರದ ಇಂತಹ ದುಷ್ಠ ಪ್ರಯತ್ನವನ್ನು ವಿರೋಧಿಸಿ ಖಂಡಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್ ಮಾತನಾಡಿದರು. ಪದಾಧಿಕಾರಿಗಳಾದ ದೇವರಾಜ್, ಸುಂಡಹಳ್ಳಿ ಮಂಜುನಾಥ್, ಪ್ರಕಾಶ್, ನಳಿನ, ಚೇತನ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!