Wednesday, May 15, 2024

ಪ್ರಾಯೋಗಿಕ ಆವೃತ್ತಿ

ಮತದಾರರಿಗೆ ಆಮಿಷ ಒಡ್ಡುವ ರಾಜಕಾರಣಿಗಳಿಗೆ ಕಡಿವಾಣ ಹಾಕಿ : ರವಿ ಕೃಷ್ಣಾರೆಡ್ಡಿ

ಮತದಾರರಿಗೆ ಆಮಿಷ ಒಡ್ಡುತ್ತಿರುವ ಕ್ರಿಮಿನಲ್ ನಡವಳಿಕೆಯ ರಾಜಕಾರಣಿಗಳ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳನ್ನು ಚುನಾವಣಾ ಆಯೋಗಕ್ಕೆ ವರದಿ ಮಾಡುವಂತೆ ಕೋರಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಷ್ಟ್ರ ಸಮಿತಿಯ ಕಾರ್ಯಕರ್ತರ ಜೊತೆ ಪ್ರತಿಭಟನೆ ನಡೆಸಿದ ಅವರು, ಜನರಿಗೆ ಆಮಿಷ ಒಡ್ಡುತ್ತಿರುವ ಭ್ರಷ್ಟ ರಾಜಕಾರಣಿಗಳು ಹಾಗೂ ಪುಡಾರಿಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ರಾಜ್ಯ ವಿಧಾನಸಭಾ ಚುನಾವಣೆ ಇದೇ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಭ್ರಷ್ಟ ರಾಜಕಾರಣಿಗಳು ಹಾಗೂ ಪುಡಾರಿಗಳು ತಮ್ಮ ತಮ್ಮ ಕ್ಷೇತ್ರದ ಮತದಾರರಿಗೆ ಕುಕ್ಕರ್, ಸೀರೆ, ಕುಪ್ಪಸ, ತಟ್ಟೆ, ಚೆಂಬು, ಲೋಟ, ಬೆಳ್ಳಿ ವಿಗ್ರಹ, ಸ್ಪೋರ್ಟ್ ಕಿಟ್ ಇತ್ಯಾದಿ ವಸ್ತುಗಳನ್ನು ವಿತರಿಸುತ್ತಿದ್ದಾರೆ. ತೀರ್ಥ ಕ್ಷೇತ್ರಗಳ ಪ್ರವಾಸಗಳನ್ನು ಆಯೋಜಿಸುತ್ತಿದ್ದಾರೆ.ಬಾಡೂಟ, ಬಿರಿಯಾನಿ, ಮದ್ಯದ ಪಾರ್ಟಿಯನ್ನು ಆಯೋಜಿಸುತ್ತಿದ್ದಾರೆ. ಇದು ಕ್ರಿಮಿನಲ್ ಕೃತ್ಯ ಎಂದು ಟೀಕಿಸಿದರು.

ಮತದಾರರಿಗೆ ಆಮಿಷ ಒಡ್ಡುವಂತಹ ಗಂಡಸರಿಗೆ ಲಿಕ್ಕರ್, ಹೆಂಗಸರಿಗೆ ಕುಕ್ಕರ್‌, ಇವರೆಡೂ ಬೇಡದಿರುವವರಿಗೆ ನಿಕ್ಕರ್ ಹಂಚುವ ಚುನಾವಣಾ ಅಕ್ರಮಗಳು, ಕಳೆದ ಒಂದೆರಡು ದಶಕಗಳಿಂದ ಕರ್ನಾಟಕದಲ್ಲಿ ಸರ್ವೇಸಾಮಾನ್ಯವಾಗಿದೆ. ಇಂತಹ ಭ್ರಷ್ಟ, ಕಾನೂನು ಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋದಿ ಚುನಾವಣಾ ವ್ಯವಸ್ಥೆಗೆ ಕೇವಲ ಭ್ರಷ ಮತ್ತು ದುರುಳ ರಾಜಕಾರಣಿಗಳು ಮಾತ್ರವಲ್ಲದೆ ಅವರ ಕಾನೂನು ಬಾಹಿರ ಕುಕೃತ್ಯಗಳನ್ನು ನಿಯಂತ್ರಿಸಲು ವಿಫಲವಾಗುತ್ತಿರುವ ಆಡಳಿತ ವರ್ಗವೂ ಕಾರಣವಾಗಿದೆ ಎಂದು ದೂರಿದರು.
ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರಿಗೆ, ಭ್ರಷ್ಟ ಮತ್ತು ನೀಚ ಜನಪ್ರತಿನಿಧಿಗಳು ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ತಮ್ಮ ಜಿಲ್ಲೆಯಲ್ಲಿ ವರದಿಯಾಗುತ್ತಿರುವ, ಭ್ರಷ್ಟ ರಾಜಕಾರಣಿಗಳು ಮತದಾರರಿಗೆ ಆಮಿಷ ಒಡುತ್ತಿರುವ ಕಾನೂನುಬಾಹಿರ ಪ್ರಕರಣಗಳನ್ನು ಕಾನೂನುಗಳ ಅಡಿಯಲ್ಲಿ ಮಟ್ಟ ಹಾಕುವ ಕೆಲಸವನ್ನು ಜಿಲ್ಲಾಧಿಕಾರಿಗಳಾಗಿ ತಾವು ಮಾಡಬೇಕು ಮತ್ತು ಆ ಪ್ರಕರಣಗಳನ್ನು ಚುನಾವಣಾ ಆಯೋಗದ ಗಮನಕ್ಕೆ ತರಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಆಗ್ರಹಿಸುತ್ತದೆ ಎಂದು ಮನವಿ ಮಾಡಿದರು.

ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ ಜಿಲ್ಲೆಯಲ್ಲಿ ರಾಜಕಾರಣಿಗಳು ಒಡ್ಡುತ್ತಿರುವ ಆಮಿಷಗಳ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್‌.ಎಚ್.ಲಿಂಗೇಗೌಡ, ಜಿಲ್ಲಾಧ್ಯಕ್ಷ ರಮೇಶ್ ಗೌಡ, ಸದಸ್ಯರಾದ ಸಿರಾಜ್ ಅಹ್ಮದ್, ರಘು ಜಾಣಗೆರೆ, ಕೆ.ಜೆ.ರಮೇಶ್, ಸಿದ್ದಲಿಂಗಯ್ಯ, ಮಂಜುನಾಥ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!