Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ : ಶಾಸಕ ಎಂ.ಶ್ರೀನಿವಾಸ್

ಬೆಂಗಳೂರು ಕರ್ನಾಟಕ ಜಾನಪದ ಪರಿಷತ್ ಹಾಗೂ ಮಂಡ್ಯ ಜಿಲ್ಲಾ ಘಟಕ ಇವರ ವತಿಯಿಂದ ಮಂಡ್ಯ ನಗರದಲ್ಲಿ ಡಿ.9 ಮತ್ತು 10ರಂದು ನಡೆಯುವ ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಮಂಡ್ಯ ಶಾಸಕ ಎಂ.ಶ್ರೀನಿವಾಸ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ ರಾಜ್ಯಾದ್ಯಂತ 1 ಸಾವಿರಕ್ಕಿಂತಲೂ ಹೆಚ್ಚು ಕಲಾವಿದರು ಹಾಗೂ 50 ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಸಮ್ಮೇಳಾನಾಧ್ಯಕ್ಷರಾಗಿ ಜಾನಪದ ವಿದ್ವಾಂಸ ಡಾ.ರಾಮೇಗೌಡ ಅವರು ಆಯ್ಕೆಯಾಗಿದ್ದು ವೇದಿಕೆ ಕಾರ್ಯಕ್ರಮವು ಮಂಡ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ,  ಡಿ.9ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸುವರು. ಜಿ.ಪಂ.ಸಿಇಓ ಶಾಂತ ಎಲ್.ಹುಲ್ಮನಿ ನಾಡಧ್ವಜಾರೋಹಣ ನೆರವೇರಿಸುವರು ಎಂದರು.

ಬೆಳಿಗ್ಗೆ 9 ಗಂಟೆಗೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಚಾಲನೆ ನೀಡುವರು. ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಉಪಸ್ಥಿತರಿರುವರು ಎಂದು ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಆದಿಚುಂಚನಗಿರಿ ಪೀಠಾಧ್ಯಕ್ಷ  ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸುವರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ಡಾ.ಹಿ.ಶಿ.ರಾಮಚಂದ್ರೇಗೌಡ ಆಶಯ ನುಡಿ ನುಡಿಯುವರು. ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಗೋಪಾಲಯ್ಯ ಸಮಾರಂಭ ಉದ್ಘಾಟಿಸುವರು. ರೇಷ್ಮೇ ಸಚಿವ ಡಾ.ಕೆ.ಸಿ.ನಾರಾಯಣಗೌಡ ಮಳಿಗೆಗಳ ಉದ್ಘಾಟನೆ ಮಾಡುವರು. ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು ಎಂದರು.

ಶಾಸಕ ಡಿ.ಸಿ.ತಮ್ಮಣ್ಣ ”ಜನಪದ ಬಾಗಿನ” ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಸಿ.ಎಸ್.ಪುಟ್ಟರಾಜು ಸ್ಮರಣ ಸಂಪುಣ ”ಬುಜ್ಜಣಿಗೆ” ಬಿಡುಗಡೆ ಮಾಡಲಿದ್ದು, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಅವರು ಕೆ.ಪಿ.ವೀರಪ್ಪನವರ ”ಜಾನಪದ ಗಾದೆಗಳು” ಕೃತಿ ಬಿಡುಗಡೆ ಮಾಡುವರು. ಪ್ರೊ.ಎಂ.ಕೃ‍ಷ್ಣೇಗೌಡ ಪುಸ್ತಕಗಳನ್ನು ಕುರಿತು ಮಾತನಾಡುವರು. ಡಾ.ರೌಗೌ ಅವರು ಸಮ್ಮೇಳನಾಧ್ಯಕ್ಷ ನುಡಿ ನುಡಿಯುವರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ, ಸಂಘಟನಾ ಕಾರ್ಯದರ್ಶಿ ಕೆ.ಎಂ.ಕೃಷ್ಣೇಗೌಡ, ಕಾರಸವಾಡಿ ಮಹದೇವು, ಕೋ.ಪು.ಗುಣಶೇಖರ್, ಸುಂದರೇಶ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!