Friday, September 20, 2024

ಪ್ರಾಯೋಗಿಕ ಆವೃತ್ತಿ

ದೇವೇಗೌಡರ ಬಲಿ ಪಡೆಯಲು ಕಾಂಗ್ರೆಸ್ ಸರಕಾರದ ಸಂಚು: ಜೆಡಿಎಸ್ ಆರೋಪ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೀವ ಬಲಿ ಪಡೆಯಲು ರಾಜ್ಯ ಕಾಂಗ್ರೆಸ್ ಸರಕಾರ ಸಂಚು ರೂಪಿಸಿದೆ ಎಂದು ಜೆಡಿಎಸ್ ಪಕ್ಷವು ಗಂಭೀರ ಆರೋಪ ಮಾಡಿದೆ.

ದೇವೆಗೌಡರ ಕುಟುಂಬವನ್ನು ಮುಗಿಸಲು ಕಾಂಗ್ರೆಸ್ ಸರ್ಕಾರ ವ್ಯವಸ್ಥಿತ ಹುನ್ನಾರ ನಡೆಸಿ ಯೋಜಿತವಾಗಿ ಟಾರ್ಗೆಟ್ ಮಾಡಿದೆ ಎಂದಿರುವ ಜೆಡಿಎಸ್; ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಗುರುತರ ಆರೋಪಗಳನ್ನು ಮಾಡಿದೆ.

ವಕೀಲ ದೇವರಾಜೇಗೌಡರ ಜತೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ನಡೆಸಿರುವ ಮೊಬೈಲ್ ಸಂಭಾಷಣೆಯ ತುಣುಕುಗಳು ಮಾಧ್ಯಮಗಳಲ್ಲಿ ಬಹಿರಂಗವಾದ ಬೆನ್ನಲ್ಲಿಯೇ ಜೆಡಿಎಸ್ ಪಕ್ಷವು ತನ್ನ ಎಕ್ಸ್ ಖಾತೆಯಲ್ಲಿ ಡಿಸಿಎಂ ಡಿಕೆಶಿ ವಿರುದ್ಧ ನೇರ ವಾಗ್ದಾಳಿ ನಡೆಸಿದೆ.

ಅಸಲಿ ಮುಖ ಕಳಚಿ ಕೆಳಕ್ಕೆ ಬಿದ್ದಿದೆ

ಹೊಂಚು ಹಾಕಿ ಸಂಚು ಮಾಡುವ ಕಾಂಗ್ರೆಸ್ ಪಕ್ಷದ ಅಸಲಿ ಮುಖ ಕಳಚಿ ಕೆಳಕ್ಕೆ ಬಿದ್ದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ… ಹೌದಲ್ಲವೇ ಕಾಂಗ್ರೆಸ್ಸಿಗರೇ? ಸತ್ಯ ನಿಮ್ಮ ಮುಂದೆಯೇ ಇದೆ. ನಿಮ್ಮ ಅಧ್ಯಕ್ಷರೇ ಪೆನ್ ಡ್ರೈವ್ ಫ್ಯಾಕ್ಟರಿಯ ಒರಿಜಿನಲ್ ಓನರ್. ಡಿ.ಕೆ ಶಿವಕುಮಾರ್ ಗ್ಯಾಂಗ್ ನಡೆಸಿದ ಪೆನ್ ಡ್ರೈವ್ ಹಂಚಿಕೆಯ ಹೇಯ ಕೃತ್ಯದ ಸಂಚುಗಳೇ ಅವೆಲ್ಲಾ. ದೇವರಾಜೇಗೌಡರ ಹೇಳಿಕೆಯ ನಂತರ ಹೊರಬಿದ್ದಿರುವ ಆಡಿಯೋ ಟೇಪುಗಳೇ ಮಹಾಸಂಚಿನ ಮಹಾಕಥೆಯನ್ನು ಬಿಚ್ಚಿಟ್ಟಿವೆ. ಈಗ ಹೇಳಿ, ಯಾರು ಮೆಂಟಲ್? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಡಿ.ಕೆ.ಶಿವಕುಮಾರ್ ಗ್ಯಾಂಗಿನ ಸಂಚುಗಳು ಹೀಗಿವೆ ಎಂದಿರುವ ಜೆಡಿಎಸ್, ಡಿ.ಕೆ.ಶಿವಕುಮಾರ್ ಹೂಡಿರುವ 4  ಸಂಚುಗಳನ್ನು ಪಟ್ಟಿ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಖ್ಯಾತಿ ತರುವುದು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಾಯಕತ್ವ ಹಾಳು ಮಾಡುವುದು. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುರಿದು ಬೀಳುವಂತೆ ಮಾಡುವುದು ಹಾಗೂ ಹೆಚ್.ಡಿ.ದೇವೆಗೌಡರ ಜೀವವನ್ನು ಬಲಿ ಪಡೆಯುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದೆ.

ಟೂಲ್ ಕಿಟ್ ಏನು?

ಈ ಸಂಚು ಜಾರಿಗೆ ಡಿ.ಕೆ.ಶಿವಕುಮಾರ್ ಸ್ಲೀಪರ್ ಸೆಲ್ ನ ಟೂಲ್ ಕಿಟ್ ವ್ಯವಹಾರದ ಬಗ್ಗೆ ಜೆಡಿಎಸ್ ಎಳೆಎಳೆಯಾಗಿ ವಿವರಿಸಿದೆ. ಈ ಮಹಾಸಂಚು ಸಾಕಾರಕ್ಕೆ ಡಿ.ಕೆ.ಶಿವಕುಮಾರ್ ಹೂಡಲಿದ್ದ ಬಂಡವಾಳ ಬರೋಬ್ಬರಿ ₹100 ಕೋಟಿ!!. ಹೆಚ್.ಡಿ.ಕುಮಾರಸ್ವಾಮಿ ಅವರೇ ಪೆನ್ ಡ್ರೈವ್ ಹಂಚಿದ್ದಾರೆ ಎಂದು ಹೇಳಲು ವಕೀಲ ದೇವರಾಜೇಗೌಡರಿಗೆ ₹100 ಕೋಟಿ ಆಫರ್!!, ಅಡ್ವಾನ್ಸ್ ಆಗಿ ₹5 ಕೋಟಿ ಹಣವನ್ನು ಬೌರಿಂಗ್ ಕ್ಲಬ್ಬಿನ ಕೊಠಡಿ ಸಂಖ್ಯೆ 110ಕ್ಕೆ ರವಾನೆ ರವಾನೆ, ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್ ಎಂದು ಆರೋಪಿಸಿದೆ.

ಮೋದಿ, ಕುಮಾರಸ್ವಾಮಿ ಅವರುಗಳ ವಿರುದ್ಧ ಅಪಪ್ರಚಾರ ನಡೆಸಲು, ಇಡೀ ಸಂಚು ಅನುಷ್ಠಾನಕ್ಕೆ ನಾಲ್ವರು ಪ್ರಮುಖ ಸಚಿವರ ಸಮಿತಿ ರಚಿಸಿದ್ದೇ ಡಿ.ಕೆ ಶಿವಕುಮಾರ್, ದೇವೇಗೌಡರನ್ನು ಸಾವಿನ ದವಡೆಗೆ ನೂಕುವುದು ಈ ಸ್ಲೀಪರ್ ಸೆಲ್ ನ ಮಹಾನ್ ಟಾರ್ಗೆಟ್!! ಎಂದು ದೂಷಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!