Saturday, July 13, 2024

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ಅವರಿಗೆ ಅವಮಾನ: ಅಧಿಕಾರಿ ಅಮಾನತಿಗೆ ಆಗ್ರಹ

ಮಳವಳ್ಳಿ ಚೆಸ್ಕಾಂನ ಗ್ರಾಮಾಂತರ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿದ ದಸಂಸ ಕಾರ್ಯಕರ್ತರು ಅವರ ಅಮಾನತಿಗೆ ಆಗ್ರಹಿಸಿ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಚೆಸ್ಕಾಂ ಕಚೇರಿಯಲ್ಲಿ ಆಚರಿಸದೇ ಮಂಜುನಾಥ್ ಅವರು ಅಪಮಾನ ಮಾಡಿದ್ದಾರೆ.ಸರ್ಕಾರ ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ಅಂಬೇಡ್ಕರ್ ವಿಚಾರ ವೇದಿಕೆ,ದಲಿತ ಸಂಘರ್ಷ ಸಮಿತಿ ಹಾಗೂ ಜನಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಅಂಬೇಡ್ಕರ್ ವಿಚಾರ ವೇದಿಕೆ ತಾಲ್ಲೂಕು ಅಧ್ಯಕ್ಷ ಮಹೇಶ್‌ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಏಪ್ರಿಲ್ 14 ರಂದು ಇಡೀ ದೇಶವೇ ಆಚರಿಸುತ್ತಿರುವ ಸಂದರ್ಭದಲ್ಲಿ ಮಳವಳ್ಳಿ ತಾಲ್ಲೂಕು ಚೆಸ್ಕಾಂ ಗ್ರಾಮಾಂತರ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಅಂಬೇಡ್ಕರ್ ಅವರ ಜಯಂತಿ ಆಚರಿಸದೆ ತಾಲ್ಲೂಕು ಆಡಳಿತದಿಂದ ನಡೆದ ಕಾರ್ಯಕ್ರಮದಲ್ಲೂ ಭಾಗವಹಿಸದೆ ಬೇಜವಾಬ್ದಾರಿ ವರ್ತನೆ ತೋರಿದ್ದಾರೆಂದು ಕಿಡಿಕಾರಿದರು.

ಅಲ್ಲದೆ ತಾಲ್ಲೂಕು ಆಡಳಿತ ವತಿಯಿಂದ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಹಲವು ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗಿದ್ದರು. ಅಂತಹ ಅಧಿಕಾರಿಗಳಿಗೆ ತಹಶಿಲ್ದಾರ್ ಅವರು ನೋಟಿಸ್ ಜಾರಿಮಾಡಬೇಕು, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಮಂಜುನಾಥ್ ವಿರುದ್ದ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಿವೃತ್ತ ಉಪನ್ಯಾಸಕ ರಂಗಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಮೀಸಲಾತಿ ಅಡಿಯಲ್ಲಿ ಪ್ರತಿಯೊಬ್ಬರೂ ಉದ್ಯೋಗ ತೆಗೆದುಕೊಂಡಿರುತ್ತಾರೆ,

ಅಂಬೇಡ್ಕರ್ ಅವರ ಬಗ್ಗೆ ಕನಿಷ್ಟ ಜ್ಞಾನವೂ ಇಲ್ಲದ ರೀತಿಯಲ್ಲಿ ವರ್ತನೆ ಮಾಡಿರುವ ಅಧಿಕಾರಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ್ ವಿಜಯಣ್ಣ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ರಾಷ್ಟ್ರೀಯ ಹಬ್ಬವಾದ ಅಂಬೇಡ್ಕರ್ ಜಯಂತಿಯನ್ನು ಪ್ರತಿಯೊಂದು ಕಚೇರಿಯಲ್ಲಿಯೂ ಆಚರಿಸಬೇಕೆಂದು ಸರ್ಕಾರದ ಅದೇಶವಿದೆ. ಅಂಬೇಡ್ಕರ್ ಜಯಂತಿಯನ್ನು ಕಚೇರಿಯಲ್ಲಿ ಆಚರಿಸದೆ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲೂ ಭಾಗವಹಿಸದ ಎಇಇ ಮಂಜುನಾಥ್ ವಿರುದ್ದ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ, ಉತ್ತರ ಪಡೆದ ನಂತರ ಆಗತ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಮುಖಂಡರಾದ ಯತೀಶ್, ಪವನ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಜಯರಾಜು, ಮುಖಂಡರಾದ ಮಲ್ಲೇಶ್, ಲಿಂಗದೇವರು, ನಾಗರಾಜು, ಕಾಂತರಾಜು, ನಾರಾಯಣ್, ಮಹದೇವಸ್ವಾಮಿ ಸಾಗ್ಯ ಕೆಂಪಯ್ಯ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!