Thursday, September 19, 2024

ಪ್ರಾಯೋಗಿಕ ಆವೃತ್ತಿ

ತಿದ್ದುಪಡಿ ಕಾಯ್ದೆ ಜಾರಿಯಾದರೆ ವಿದ್ಯುತ್ ಖಾಸಗಿ ಪಾಲು

  • ಬಡವರು-ರೈತರಿಗೆ ಸಿಗುತ್ತಿರುವ ರಿಯಾಯಿತಿ ಕಡಿತ
  • ವಿದ್ಯುತ್  ಬಳಕೆಗೂ ಕೂಡ ಕರೆನ್ಸಿ ಹಾಕಿಸಿಕೊಳ್ಳುವ ಪರಿಸ್ಥಿತಿ

ಕೇಂದ್ರ ಸರ್ಕಾರವು 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ, ಒಂದು ವೇಳೆ ಈ ಕಾಯ್ದೆ ತಿದ್ದುಪಡಿಗೊಂಡರೆ ವಿದ್ಯುತ್ ಮೇಲಿನ ಹಿಡಿದ ಸಂಪೂರ್ಣವಾಗಿ ಖಾಸಗಿ, ಬಂಡವಾಳಶಾಹಿಗಳ ಪಾಲಾಗಲಿದೆ.  ಆಗ ಬಡವರಿಗೆ ಹಾಗೂ ರೈತರಿಗೆ ಸಿಗುತ್ತಿರುವ ರಿಯಾಯಿತಿ ರದ್ದುಗೊಂಡು, ಅವರು ಸಹ ಎಲ್ಲಾರಂತೆ ಸರಿ ಸಮವಾಗಿ ನಿಗದಿತ ಹಣಕೊಟ್ಟು ವಿದ್ಯುತ್ ಖರೀದಿ ಮಾಡಬೇಕಾಗುತ್ತದೆ.

ಪ್ರಸ್ತುತ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಕೊಟ್ಟರೂ, ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ, ಒಂದು ವೇಳೆ ವಿದ್ಯುತ್ ಗೆ ಹಣ ಪಾವತಿ ಮಾಡಬೇಕು ಎಂಬ ಕಾನೂನು ಜಾರಿಯಾದರೆ ಇನ್ನೂ ರೈತ ಸಂಪೂರ್ಣ ನೆಲಕಚ್ಚಿದಂತೆಯೇ ಸರಿ, ಆಗ  ಮತ್ತಷ್ಟು ಆತ್ಮಹತ್ಯೆಗಳು ಹೆಚ್ಚಳವಾಗುತ್ತವೆಯಷ್ಟೆ.

ಪ್ರಸ್ತುತ ವಿದ್ಯುತ್ ಉತ್ಪಾದನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಖಾಸಗಿಯವರ ಹಿಡಿತದಲ್ಲಿದೆ, ಬಹುಪಾಲು ವಿದ್ಯುತ್ ಕೇಂದ್ರ ಹಾಗೂ ರಾಜ್ಯಗಳ ಹಿಡಿತದಲ್ಲಿದೆ, ವಿತರಣೆಯೂ ಸಂಪೂರ್ಣ ರಾಜ್ಯಗಳ ಹಿಡಿತದಲ್ಲಿದೆ.

ಕರ್ನಾಟಕದಲ್ಲಿ 1980ರ ದಶಕದಲ್ಲಿ ನಡೆಸಿದ ಹೋರಾಟಗಳಿಂದಾಗಿ 10 ಎಚ್.ಪಿ.ವರೆಗಿನ ರೈತರ ಪಂಪಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ, ಇದರಿಂದ ರಾಜ್ಯದ 45 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಅಲ್ಲದೇ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಹೆಸರಿನಲ್ಲಿ ಲಕ್ಷಾಂತರ ಬಡ ಕುಟುಂಬಗಳ ಗೃಹ ಬಳಕೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ವಿದ್ಯುತ್ ತಿದ್ದುಪಡಿ ಕಾಯ್ದೆ ಜಾರಿಯಾದರೆ ಈ ಎಲ್ಲಾ ರಿಯಾಯಿತಿಗಳಿಗೆ ಕತ್ತರಿ ಬೀಳಲಿದೆ.

ಈಗಾಗಲೇ ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆ -2003ಕ್ಕೆ ತಿದ್ದುಪಡಿ ತರಲು ಮುಂದಾಗಿದೆ, ಕರಡು ತಿದ್ದುಪಡಿಗಳನ್ನು ಪ್ರಕಟಿಸಿ ರಾಜ್ಯ ಸರ್ಕಾರಗಳ ಅಭಿಪ್ರಾಯಗಳನ್ನು ತಿಳಿಸುವಂತೆ ಸೂಚಿಸಲಾಗಿದೆ.

ಈ ತಿದ್ದುಪಡಿಯ ಪ್ರಮುಖ ಅಂಶಗಳು 

ವಿದ್ಯುತ್ ಗುತ್ತಿಗೆ ಜಾರಿ ಪ್ರಾಧಿಕಾರ ರಚನೆಗೆ ಅನುವು ಮಾಡಿಕೊಡಲಾಗುತ್ತದೆ, ವಿದ್ಯುತ್ ಮಾರಾಟ, ಖರೀದಿ, ರವಾನೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸುವ ಅಧಿಕಾರ ಈ ಪ್ರಾಧಿಕಾರಕ್ಕೆ ಇರುತ್ತದೆ.

ಒಂದು ಪ್ರದೇಶದಲ್ಲಿ ವಿದ್ಯುತ್ ವಿತರಣೆಯ ಗುತ್ತಿಗೆ ಹೊಂದಿರುವ ಕಂಪನಿಯು ತನ್ನ ವ್ಯಾಪ್ತಿಯೊಳಗೆ ವಿದ್ಯುತ್ ವಿತರಣೆಗಾಗಿ ಬೇರೊಂದು ಕಂಪನಿಗೆ ಉಪ ಗುತ್ತಿಗೆ ನೀಡಬಹುದು, ಅಂದರೆ ಖಾಸಗಿ ಕಂಪನಿಗಳು ವಿದ್ಯುತ್ ಮಾರಾಟದ ಅಂಗಡಿಗಳನ್ನು ಪ್ರಾರಂಭಿಸಬಹುದು. ಶುಲ್ಕ ಪಾವತಿಯ ಖಾತರಿ ಇಲ್ಲದೇ ಇದ್ದರೆ ವಿತರಣಾ ಕಂಪನಿಗೆ ವಿದ್ಯುತ್ ಹಂಚಿಕೆಯನ್ನು ತಡೆ ಹಿಡಿಯುವ ಅವಕಾಶವಿರುತ್ತದೆ.

ರೈತರೂ ಸೇರಿದಂತೆ ಯಾವುದೇ ವರ್ಗಕ್ಕೆ ನೀಡುವ ಶುಲ್ಕ ಸಹಾಯಧನವನ್ನು ವಿದ್ಯುತ್ ದರ ನಿಗದಿ ಮಾಡುವಾಗ ಗಣನೆಗೆ ತೆಗೆದುಕೊಳ್ಳುವುದಿಲ್ಲ, ಸಹಾಯಧನವನ್ನು ಸರ್ಕಾರವು ಗ್ರಾಹಕರಿಗೆ ನಗದು ವರ್ಗಾವಣೆ ಮೂಲಕ ನೀಡಬಹುದು ಅಥವಾ ನೀಡದೆ ಇರಬಹುದು.

ವಿದ್ಯುತ್ ಗೆ ಸ್ಮಾರ್ಟ್ ಮೀಟರ್

ಈಗ ಮೊಬೈಲ್ ಗೆ ಹೇಗೆ ಕರೆನ್ಸಿ ಹಾಕುತ್ತಾರೆಯೋ ಹಾಗೆ ಮುಂದೆ ಕೆರೆಂಟ್ ಬಳಕೆಗೂ ಕೂಡ ಕರೆನ್ಸಿ ಹಾಕಿಸಿಕೊಳ್ಳುವ ಪರಿಸ್ಥಿತಿ ಬರಲಿದೆ.

ಕರೆಂಟ್ ಮೀಟರ್ ಗಳಿಗೆ ಸ್ಮಾರ್ಟ್ ಮೀಟರ್ ಜೋಡಿಸಲಾಗುತ್ತದೆ,  ಗ್ರಾಹಕರು ವಿದ್ಯುತ್ ಬಳಕೆ ಮಾಡುವುದಕ್ಕೆ ಮುನ್ನ ಕರೆನ್ಸಿ ಹಾಕಿಸಿಕೊಳ್ಳಬೇಕು. ಕರೆನ್ಸಿ ಮುಗಿದ ನಂತರ ಲೈಟ್ಸ್ ಗಳು ತಾನಾಗೇ ಆಫ್ ಆಗುತ್ತವೆ, ಕರೆನ್ಸಿ ಇಲ್ಲದಿದ್ದರೆ ರೈತರ ಹೊಲದಲ್ಲೂ ವಿದ್ಯುತ್ ಓಡಲ್ಲ.

ಕಾಯ್ದೆ ತಿದ್ದುಪಡಿಯಿಂದಾಗುವ ದುಷ್ಪರಿಣಾಮಗಳು

ವಿದ್ಯುತ್ ಉತ್ಪಾದನೆ, ರವಾನೆ ಮತ್ತು ವಿತರಣೆ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳ ಅಧಿಕಾರ ಮೊಟಕುಗೊಳ್ಳುತ್ತದೆ, ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ.

ಬಡ  ಗ್ರಾಹಕರು ಹಾಗೂ ರೈತರಿಗೆ ಸಿಗುತ್ತಿರುವ ರಿಯಾಯಿತಿ ಮತ್ತು ಸಹಾಯಧನ ಕಡಿತಗೊಂಡು, ಆರ್ಥಿಕ ಹೊರೆ ಹೆಚ್ಚುತ್ತದೆ.

ಪ್ರಸ್ತುತ ವಿದ್ಯುತ್ ಒಂದು ವಲಯದಲ್ಲಿದ್ದು, ಸರ್ಕಾರದ ಸ್ವಾಮ್ಯದಲ್ಲಿದೆ, ತಿದ್ದುಪಡಿಗಳ ನಂತರ ಅದು ಕೋರ್ ವಲಯದಿಂದ ಖಾಸಗಿ ವಲಯಕ್ಕೆ ಹಸ್ತಾಂತರವಾಗುತ್ತದೆ.

ಖಾಸಗಿಯವರ ಕೈಗೆ ವಿದ್ಯುತ್ ಹೋದರೆ, ಲಾಭ ಮಾಡುವುದೆ ಅವರ ಗುರಿ, ಇದರಿಂದಾಗಿ ಜನಸಾಮಾನ್ಯರ ಗೃಹ ಬಳಕೆ, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಕ್ಕೆ ಹೊಡೆತ ಬೀಳುತ್ತದೆ.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!