Saturday, May 18, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರೀಯ ಸಂಸ್ಥೆಗಳಿಂದಲೇ ”ಅನ್ನಭಾಗ್ಯ” ಅಕ್ಕಿ ಖರೀದಿಗೆ ಪ್ರಯತ್ನ; ಸಿಎಂ ಸಿದ್ದರಾಮಯ್ಯ

ಛತ್ತೀಸ್‌ಗಢ ರಾಜ್ಯದಲ್ಲಿ 1.5 ಲಕ್ಷ ಟನ್ ಅಕ್ಕಿಯ ದಾಸ್ತಾನು ಇದೆ ಆದರೆ ಅದು ಸಾಕಾಗುವುದಿಲ್ಲ ಹಾಗಾಗಿ ಕೇಂದ್ರೀಯ ಸಂಸ್ಥೆಗಳಿಂದಲೇ ಅಗತ್ಯವಿರುವ ಅಕ್ಕಿ ಖರೀದಿಗೆ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಈ ಬಗ್ಗೆ ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ”ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ (ಎನ್ ಸಿಸಿಎಫ್), ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್) ಮತ್ತು ಭಾರತೀಯ ಆಹಾರ ನಿಗಮ (ಎಫ್ ಸಿಐ) ಸೇರಿದಂತೆ ಕೇಂದ್ರೀಯ ಸಂಸ್ಥೆಗಳಿಂದಲೇ ಅನ್ನ ಭಾಗ್ಯ ಯೋಜನೆಗೆ ಅಗತ್ಯವಿರುವ ಅಕ್ಕಿ ಖರೀದಿಗೆ ಪ್ರಯತ್ನ ಮಾಡಲಾಗುವುದು” ಎಂದು ತಿಳಿಸಿದರು.

”ಭಾರತೀಯ ಆಹಾರ ನಿಗಮ (ಎಫ್ ಸಿಐ) ಪ್ರತಿ ಕೆ.ಜಿ.ಗೆ 34ರೂ.ನಂತೆ ಅಕ್ಕಿ ಒದಗಿಸುತ್ತದೆ. 2.60ರೂ. ಸಾಗಾಣಿಕೆ ವೆಚ್ಚ ಸೇರಿದರೆ ಪ್ರತಿ ಕೆ.ಜಿ.ಗೆ ‍36.60ರೂ. ವೆಚ್ಚವಾಗುತ್ತದೆ. ಈಗ ಮೂರೂ ಸಂಸ್ಥೆಗಳಿಂದ ದರ ಪಟ್ಟಿ ಅಹ್ವಾನಿಸಿ, ಟೆಂಡರ್ ಮೂಲಕ ಅಕ್ಕಿ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು.

”ಸಧ್ಯಕ್ಕೆ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ ಐದು ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಹೆಚ್ಚುವರಿಯಾಗಿ ಜೋಳ, ರಾಗಿ ವಿತರಿಸುವ ಕುರಿತು ಚರ್ಚೆ ನಡೆದಿದೆ. ಆದರೆ, ತಲಾ ಎರಡು ಕೆ.ಜಿ. ಜೋಳ ಅಥವಾ ರಾಗಿ ವಿತರಿಸಿದರೂ ಆರು ತಿಂಗಳಿಗೆ ಸಾಕಾಗುವಷ್ಟು ದಾಸ್ತಾನು ಮಾತ್ರ ಇದೆ. ಬಾಕಿ ಉಳಿದ ಮೂರು ಕೆ.ಜಿ. ಅಕ್ಕಿಯನ್ನು ಖರೀದಿಸಲೇಬೇಕಾಗುತ್ತದೆ” ಎಂದು ಹೇಳಿದರು.

”ಅನ್ನಭಾಗ್ಯ ಯೋಜನೆಯಡಿ ತಲಾ ಹತ್ತು ಕೆ.ಜಿ. ಅಕ್ಕಿ ವಿತರಿಸಲು ತಿಂಗಳಿಗೆ 1842 ಕೋಟಿ ವೆಚ್ಚವಾಗುತ್ತದೆ. ವರ್ಷಕ್ಕೆ 710,092 ಕೋಟಿ ಬೇಕಾಗುತ್ತದೆ” ಎಂದು ಸಿದ್ದರಾಮಯ್ಯ ಅಂಕಿಅಂಶಗಳ ಮಾಹಿತಿ ನೀಡಿದರು.

”ಕೇಂದ್ರ ಸರ್ಕಾರದ ಸ್ವಾಮ್ಯದ ಎಫ್ ಸಿಐ ಬಳಿ ಅಕ್ಕಿಯ ದಾಸ್ತಾನು ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಹಕಾರ ನೀಡಬೇಕಾದ ಕೇಂದ್ರ ಸರ್ಕಾರ ಬಡವರ ಪರ ಯೋಜನೆ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡುತ್ತಿದೆ” ಎಂದು ದೂರಿದರು.

”ಛತ್ತೀಸ್ ಗಢ ರಾಜ್ಯದಲ್ಲಿ 1.5 ಲಕ್ಷ ಟನ್ ಅಕ್ಕಿಯ ದಾಸ್ತಾನು ಇದೆ, ಆದರೆ ಅದು ಸಾಕಾಗುವುದಿಲ್ಲ. ಆದ್ದರಿಂದ ಪಂಜಾಬ್ ರಾಜ್ಯದಿಂದ ಅಕ್ಕಿ ಖರೀದಿಗೆ ಪ್ರಯತ್ನ ನಡೆಯುತ್ತಿದೆ. ಮುಖ್ಯ ಕಾರ್ಯದದರ್ಶಿಯವರು ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಜತೆ ಚರ್ಚಿಸುತ್ತಿದ್ದಾರೆ ಎಂದು ತಿಳಿಸಿದರು.

ಮತ್ತೊಂದೆಡೆ ಕರ್ನಾಟಕದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ಪಂಜಾಬ್ ಸಿಎಂ ಭಗವಂತ್ ಮಾನ್ ನೇತೃತ್ವದ ಸರ್ಕಾರ ಸಿದ್ದವಿದೆ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಕರ್ನಾಟಕ ಆಪ್ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಪತ್ರ ಬರೆದಿದ್ದಾರೆ.

ನಮ್ಮ ರಾಜ್ಯದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ನಿನ್ನೆ, ನಾನು ಪಂಜಾಬ್ ಮುಖ್ಯಮಂತ್ರಿ ಶ್ರೀ ಭಗವಂತ್ ಮಾನ್ ಅವರೊಂದಿಗೆ ಈ ವಿಷಯದ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯದಲ್ಲಿನ ಅಕ್ಕಿ ಕೊರತೆಯನ್ನು ಪಂಜಾಬ್ ನಿಂದ ಪೂರೈಸಲು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!