Thursday, September 19, 2024

ಪ್ರಾಯೋಗಿಕ ಆವೃತ್ತಿ

ಒಂದು ಅಂಗನವಾಡಿ ಕಟ್ಟಿಸಿಲ್ಲ- ವಸತಿ ನೀಡಿಲ್ಲ : ಚಲುವರಾಯಸ್ವಾಮಿ

ಕಳೆದ 5 ವರ್ಷದಲ್ಲಿ ಒಂದು ಅಂಗನವಾಡಿ ಕಟ್ಟಿಸಲು ಆಗಿಲ್ಲ, ಒಂದೇ ಒಂದು ವಸತಿ ಕೊಡಲು ಆಗಿಲ್ಲ, ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಶಾಸಕ ಸುರೇಶ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಸ್ಥಾನದ ಆವರಣದಲ್ಲಿ ತಾಲೂಕು ಕಾಂಗ್ರೆಸ್ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಚ್.ಡಿ.ಕುಮಾರಸ್ವಾಮಿ ಅವರು 15 ತಿಂಗಳ ಅಧಿಕಾರದ ಅವಧಿಯಲ್ಲಿ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು. ಮಹಿಳೆಯರು ಗಿರಿವಿ ಇಟ್ಟ ಆಭರಣಗಳನ್ನು ಬಿಡಿಸಿಕೊಡುವುದಾಗಿ ಹೇಳಿದ್ದರು‌. ಆದರೆ ಅದ್ಯಾವುದೂ ಅವರಿಂದ ಸಾಧ್ಯವಾಗಲಿಲ್ಲ. ಮಹಿಳೆಯರು, ದಲಿತರು, ರೈತರು, ಕಾರ್ಮಿಕರಿಗೆ ಒಂದು ಅಭಿವೃದ್ಧಿ ಕಾರ್ಯಕ್ರಮವನ್ನು ಅವರು ನೀಡಲಿಲ್ಲ.ಕೆಆರ್‌ಎಸ್ ಮತ್ತು ಹೇಮಾವತಿ ನೀರನ್ನು ತಾಲ್ಲೂಕಿನ ಬಯಲು ಪ್ರದೇಶಗಳಿಗೆ ಕೊಡುವ ಪ್ರಯತ್ನವನ್ನೂ ಮಾಡಲಿಲ್ಲ. ನನಗಾಗಿ ಅಧಿಕಾರ ಕೇಳುತ್ತಿಲ್ಲ. ತಾಲ್ಲೂಕಿನ ಮತ್ತು ರಾಜ್ಯದ ಏಳು ಕೋಟಿ ಜನರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.

ಎಲ್ಲಾ ಭರವಸೆಗಳು ಈಡೇರಿಸಿದ್ದೆವು

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕೊಟ್ಟ ಎಲ್ಲಾ ಭರವಸೆಗಳು ಈಡೇರಿಸಿದ್ದೆವು. ಕಾಂಗ್ರೆಸ್ ಅಧಿಕಾರವಧಿಯಲ್ಲಿ ತಾಲೂಕಿನ ನೀರಾವರಿ ಯೋಜನೆಗೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಲಾಗಿದೆ.
ಗೊರೂರು,ಹೇಮಾವತಿ ನೀರನ್ನು ಕೆರೆಗಳಿಗೆ ತುಂಬಿಸಲಾಗಿತ್ತು.ಕಸಬಾ ,ಬಿಂಡಿಗನವಿಲೆ ಭಾಗಗಳಿಗೆ ನೀರು ಹರಿಸಲಾಗಿತ್ತು.ಹೊಣಕೆರೆ,ಕಸಬಾ, ಬಿಂಡಿಗನವಿಲೆ 240 ಕೋಟಿ ಮಂಜೂರು ಮಾಡಿಸಿದ್ದೆ.ಆದರೆ ಇಂದಿನ ಈ ಯೋಜನೆಗಳನ್ನು ಪೂರ್ಣಗೊಳಿಸಿಲ್ಲ ಎಂದರು.

ಒಂದು ವಸತಿ ನೀಡಲು ಆಗಿಲ್ಲ

ಮಾರ್ಕೋನಹಳ್ಳಿ ಡ್ಯಾಂನಿಂದ ದೇವಲಾಪುರ ಹೋಬಳಿಗೆ ನೀರು ಹರಿಸುವ ಕೆಲಸ ಇನ್ನೂ ಪೂರ್ಣಗೊಂಡಿಲ್ಲ.
ನನ್ನ ಅವಧಿಯಲ್ಲಿ ಇಡೀ ತಾಲೂಕಿನಲ್ಲಿ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿ ಮಾಡಲಾಗಿತ್ತು. ಟಿಸಿ ಕೆಟ್ಟು ವಾರಕ್ಕೆ ರಿಪೇರಿ ಮಾಡಿಕೊಡಲಾಗುತ್ತಿತ್ತು. ದೇವಲಾಪುರದಲ್ಲಿ 220 ಕೆವಿ ಸ್ಟೇಷನ್ ಅನ್ನು ಡಿ.ಕೆ. ಶಿವಕುಮಾರ್ ಅವರು ಮಾಡಿಕೊಟ್ಟರು. ಬಸ್ ನಿಲ್ದಾಣ, ಆಸ್ಪತ್ರೆ, ಮಿನಿ ವಿಧಾನಸೌಧ, ಆರ್ ಟಿ ಓ ಕಚೇರಿ, ಅಗ್ನಿಶಾಮಕ ಕಚೇರಿ, ಪಿಯು, ಪದವಿ, ಮಹಿಳಾ ಕಾಲೇಜುಗಳು, ಹೈಸ್ಕೂಲ್ ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ, ಅಂಬೇಡ್ಕರ್ ಭವನ, ಕುಡಿಯುವ ನೀರಿನ ಯೋಜನೆ ಎಲ್ಲವೂ ನಡೆಯಿತು. ಆದರೆ ಕಳೆದ ಐದು ವರ್ಷದಲ್ಲಿ ಹಾಲಿ ಶಾಸಕ ಸುರೇಶ್ ಗೌಡರಿಗೆ ಒಂದು ಅಂಗನವಾಡಿ ಕಟ್ಟಿಸಲು, ಒಂದು ವಸತಿ ನೀಡಲು ಆಗಿಲ್ಲ ಎಂದು ಕಿಡಿಕಾರಿದರು.

 ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ

ಕಳೆದ ಬಾರಿ ಏಳಕ್ಕೆ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸಿದ್ದೀರಾ. ನನ್ನ ಸೋಲಿಸಲು ಪದೇ ಪದೇ ಕ್ಷೇತ್ರಕ್ಕೆ ಕುಮಾರಸ್ವಾಮಿ ಬಂದು ಹೋದರು. ಅಧಿಕಾರ ಸಿಕ್ಕಾಗ ಒಮ್ಮೆಯೂ ನಿಮ್ಮ ಕಷ್ಟ ಸುಖ ಆಲಿಸಲು ಬರಲಿಲ್ಲ. ಎಲ್ಲಾ ವರ್ಗದ ಜನರಿಗೆ ಯೋಜನೆ ತಂದಿದ್ದು ಕಾಂಗ್ರೆಸ್ ಪಕ್ಷ ಮಾತ್ರ.ಕಾಂಗ್ರೆಸ್ ಜನಪರ ಕಾಳಜಿ ಇರುವ ಪಕ್ಷವಾಗಿದೆ ಎಂದರು.

ನಾನು ಶಾಸಕನಾಗಿ ಮೆರೆಯಲು ನಿಮ್ಮ ಬಳಿ ಮತ ಕೇಳುತ್ತಿಲ್ಲ. ಕ್ಷೇತ್ರ, ಜಿಲ್ಲೆ ಅಭಿವೃದ್ಧಿ ಆಗಬೇಕಾದರೆ ಏಳಕ್ಕೆ ಏಳರಲ್ಲೂ ಕಾಂಗ್ರೆಸ್ ಗೆಲ್ಲಿಸಬೇಕು. ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷದ ಯೋಜನೆಗಳಾದ ಉಚಿತ ವಿದ್ಯುತ್, ಮಹಿಳೆಯರಿಗೆ ಮಾಶಾಸನ,10 ಕೆಜಿ ಅಕ್ಕಿ ಬಗ್ಗೆ ಮತದಾರರ ಮನಕ್ಕೆ ಮುಟ್ಟಿಸಬೇಕು.ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಚಲುವರಾಯಸ್ವಾಮಿ ಅವರು ಜಿ.ಪಂ.ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ನೂರಾರು ಅಭಿವೃದ್ಧಿ ಕಾರ್ಯವನ್ನು ತಾಲ್ಲೂಕಿನಲ್ಲಿ ಮಾಡಿದ್ದಾರೆ. ಇದಕ್ಕೆಲ್ಲ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿಯಾಗಿವೆ. ಕ್ಷೇತ್ರದ ಜನರು ಚಲುವರಾಯಸ್ವಾಮಿ ಅವರನ್ನು ಗೆಲ್ಲಿಸಿ ಕಳುಹಿಸಿದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!