Thursday, September 19, 2024

ಪ್ರಾಯೋಗಿಕ ಆವೃತ್ತಿ

ಚಿನ್ನದಂಗಡಿಗೆ ಕನ್ನ ಕೊರೆದಿದ್ದ ನಾಲ್ವರು ಆರೋಪಿಗಳ ಬಂಧನ : ₹35 ಲಕ್ಷ ಮೌಲ್ಯದ ವಸ್ತುಗಳ ವಶ

ಕೆ.ಆರ್. ಪೇಟೆ ಠಾಣಾ ವ್ಯಾಪ್ತಿಯ ಹೊಸ ಹೊಳಲು-ಅಕ್ಕಿಹೆಬ್ಬಾಳು ಮುಖ್ಯ ರಸ್ತೆಯಲ್ಲಿರುವ ಲೀಲಾ ಬ್ಯಾಂಕರ್ಸ್ ಆಂಡ್ ಜ್ಯೂವೆಲರಿ ಶಾಪ್‌ ಗೆ ಕನ್ನ ಕೊರೆದು ಚಿನ್ನ ಮತ್ತು ಬೆಳ್ಳಿಯ ಆಭರಣ ದೋಚಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ ನಗದು ಸೇರಿ 35.86 ಲಕ್ಷ ರೂ.ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದರು.

ಮಂಡ್ಯ ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ನಾಲ್ವರು ಆರೋಪಿಗಳ ಬಂಧನದಿಂದ 11 ಪ್ರಕರಣಗಳು ಬೆಳಕಿಗೆ ಬಂದಿದ್ದು,ಬಂಧಿತರು ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 154 ಗ್ರಾಂ ಚಿನ್ನ, 20 ಕೆ.ಜಿ ಬೆಳ್ಳಿಯ ಪದಾರ್ಥಗಳು, ಅಶೋಕ ಲೈಲ್ಯಾಂಡ್ ವಾಹನ, ಮಾರುತಿ ಎರ್ಟಿಗಾ ಕಾರು, ಯಮಹಾ ಆರ್ ಎಕ್ಸ್ ಬೈಕ್, ಲ್ಯಾಪ್ ಟಾಪ್, 8 ಹೆಚ್ ಎಫ್ ಇಲಾತಿ ಹಸುಗಳು, ಎಲ್ ಪಿಜಿ ಸಿಲಿಂಡರ್, ಆಕ್ಸಿಜನ್ ಸಿಲಿಂಡರ್,ವಾಟರ್ ಟ್ಯಾಂಕ್, ಗ್ಯಾಸ್ ಕಟರ್ ಮತ್ತು 40 ಸಾವಿರ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಬಂಧಿತ ಆರೋಪಿಗಳ ವಿವರ

ಈ ಪ್ರಕರಣದಲ್ಲಿ ಬಂಧಿತ ನಾಲ್ವರು ಆರೋಪಿಗಳ ವಿವರ ಇಂತಿದೆ.
ರವಿಕುಮಾರ್ ಸಿ.ಅಲಿಯಾಸ್ ರವಿ(42)ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಚಾಕೇನಹಳ್ಳಿ ಗ್ರಾಮ,ಉಳಿದ ಮೂವರು ಆರೋಪಿಗಳು ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಹೋಬಳಿಯ ಎಸ್.ಆರ್.ಮಂಜುನಾಥ್(36),ವಿಷ್ಣು ಸಿ.(31) ಹಾಗೂ ಹೇಮಂತ್ ಕುಮಾರ್(30).

ಇವರಲ್ಲಿ ರವಿಕುಮಾರ್ ಈ ಹಿಂದೆ ಶಾಲೆಗಳಲ್ಲಿ ಕಂಪ್ಯೂಟರ್ ಕಳವು ಮಾಡಿದ 18 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.ಅಲ್ಲದೆ ಚಾಕೇನಹಳ್ಳಿ ಗ್ರಾ.ಪಂ.ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾನೆ.

ಆರೋಪಿಗಳ ಪೈಕಿ ಮತ್ತೊಬ್ಬ ಗ್ರಾ.ಪಂ.ಉಪಾಧ್ಯಕ್ಷ ಕೂಡ ಆಗಿದ್ದ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ 4 ಪ್ರಕರಣ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ, ಹಲಗೂರು, ಮಂಡ್ಯ ಸೆಂಟ್ರಲ್, ಚನ್ನರಾಯಪಟ್ಟಣ ಗ್ರಾಮಾಂತರ, ಚನ್ನಪಟ್ಟಣ ಗ್ರಾಮಾಂತರ, ಮೈಸೂರಿನ ಉದಯಗಿರಿ ಮತ್ತು ಬನ್ನೂರು ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣಗಳು ಪತ್ತೆಯಾಗಿದೆ ಎಂದು ತಿಳಿಸಿದರು.

ಕಳೆದ ಆಗಸ್ಟ್ ತಿಂಗಳಿನಲ್ಲಿ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಹೊಳಲು- ಆಕ್ಕಿಹೆಬ್ಬಾಳು ಮುಖ್ಯ ರಸ್ತೆಯ ಲೀಲಾ ಬ್ಯಾಂಕರ್ಸ್ ಅಂಡ್ ಜ್ಯುವಲರಿ ಶಾಪ್‌ನಲ್ಲಿ ಕಳ್ಳರು ಅಂಗಡಿಯ ಹಿಂಭಾಗದಲ್ಲಿದ್ದ ವೆಂಟಿಲೇಟರ್ ಸರಳನ್ನು ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಗೋಡೆ ಕೊರೆದು ಶೋಕೇಸ್‌ನಲ್ಲಿದ್ದ ಬೆಳ್ಳಿಯ ಪದಾರ್ಥಗಳನ್ನು ಕಳ್ಳತನ ಮಾಡಿದ್ದರು.ಈ ಬಗ್ಗೆ ಕೆ.ಆರ್.ಪೇಟೆ ಟೌನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಪತ್ತೆಗಾಗಿ ರಚಿಸಿದ್ದ ನಾಗಮಂಗಲ ಆರಕ್ಷಕ ಉಪ ಅಧೀಕ್ಷಕ ಲಕ್ಷ್ಮೀನಾರಾಯಣ ಪ್ರಸಾದ್, ಪೊಲೀಸ್ ಇನ್ಸ್ ಸ್ಪೆಕ್ಟರ್ ದೀಪಕ್,ಜಗದೀಶ್ ಪಿಎಸ್‌ಐ ಸುನಿಲ್, ಸಿದ್ದಲಿಂಗ ಬಾಣಸೆ, ಮತ್ತು ಸಿಬ್ಬಂದಿಗಳಾದ ಚಂದ್ರಶೇಖರ್ ಎ.ಎಸ್.ಐ. ಬಸವರಾಜು, ರಘು, ಜಯವರ್ಧನ್, ಜೀಸನ್, ಉಮೇಶ್, ಅರುಣ್ ಕುಮಾರ್, ಅವಿನಾಶ್, ಮಂಜು, ಪ್ರದೀಪ, ಪ್ರದೀಪ ಎನ್‌.ಎಲ್, ರವಿಕಿರಣ್, ಲೋಕೇಶ್,ಉಮೇಶ್‌, ಷರೀಫ್ ರವರ ತಂಡ ಕಾರ್ಯಾಚರಣೆ ನಡೆಸಿ ನಾಗಮಂಗಲ ತಾಲ್ಲೂಕು ಬೆಳ್ಳೂರು ಕ್ರಾಸ್‌ನ ಉಮರ್ ನಗರದ ಬಳಿ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನಂತರ ಹೆಚ್ಚಿನ ತನಿಖೆಯ ಸಂಬಂಧ ಪೊಲೀಸ್ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿಗಳು 11 ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದರು.

ಕೊಲೆ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದೆ

ಮಂಡ್ಯ ನಗರದ ಗಾಂಧಿನಗರದ ಬಳಿ 22 ವರ್ಷದ ಯುವಕ ಅಕ್ಷಯ್ ನನ್ನು ಕೊಲೆ ಮಾಡಿದ ನಾಲ್ವರು ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೀಘ್ರ ಅವರನ್ನು ಬಂಧಿಸುವುದಾಗಿ ಎಸ್ಪಿ ಎನ್.ಯತೀಶ್ ತಿಳಿಸಿದರು.

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ದರೋಡೆ ಮಾಡಿದ ಪ್ರಕರಣದಲ್ಲಿ ಓರ್ವವನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದೇವೆ. ಕಳೆದ ರಾತ್ರಿ ಮದ್ಯ ಸೇವಿಸಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಹಲವು ವಾಹನಗಳನ್ನ ಜಖಂ ಮಾಡಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಆತ ಇನ್ನೂ ಮತ್ತಿನಲ್ಲಿದ್ದ ಹಿನ್ನೆಲೆಯಲ್ಲಿ ವಿಚಾರಣೆ ಮುಂದುವರೆದಿದೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಈ.ತಿಮ್ಮಯ್ಯ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!