Thursday, May 16, 2024

ಪ್ರಾಯೋಗಿಕ ಆವೃತ್ತಿ

“ನಿರ್ವಾಣ ಸಮಯದಲ್ಲಿ ಬುದ್ದಂಗೂ ಕಾಡಿತ್ತು ಕಿಬ್ಬೊಟ್ಟೆ ನೋವು ……..”

ವಿವೇಕಾನಂದ ಎಚ್.ಕೆ

ತನ್ನ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ನಿಯಂತ್ರಣ ಹೊಂದಿ, ಆಸೆಗಳನ್ನೆಲ್ಲ ಜಯಿಸಿದ, ಜ್ಞಾನೋದಯವನ್ನು ಹೊಂದಿದ ಗೌತಮ ಬುದ್ಧರಿಗೂ ತಮ್ಮ ಪರಿನಿರ್ವಾಣ ಸಮಯದಲ್ಲಿ ಕಿಬ್ಬೊಟ್ಟೆಯ ನೋವು ಕಾಡುತ್ತಿತ್ತು ಎಂಬ ಮಾತೊಂದಿದೆ. ಅದರ ಅರ್ಥ ಕಷ್ಟಗಳು ಯಾರನ್ನು ಬಿಡುವುದಿಲ್ಲ ಅವು ಬದುಕಿನ, ಪ್ರಕೃತಿಯ, ಸಹಜಕ್ರಿಯೆಗಳು…..

ಇತ್ತೀಚಿನ ಒಂದು ಸುದ್ದಿಯ ಪ್ರಕಾರ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿ ಶಸ್ತ್ರಚಿಕಿತ್ಸೆಯಾಗಿದೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮೂರನೆಯ ಬಾರಿಗೆ ಹೃದಯಕವಾಟದ ಶಸ್ತ್ರಚಿಕಿತ್ಸೆಯೂ ಆಯಿತು. ಇಡೀ ವಿಶ್ವದ ಎಲ್ಲಾ ಪ್ರದೇಶಗಳಲ್ಲಿ ಸಹ ಒಂದಲ್ಲ ಒಂದು ರೀತಿಯ ಆರೋಗ್ಯದ ಸಮಸ್ಯೆಗಳು ಅನೇಕ ಜನರನ್ನು ಕಾಡುತ್ತಿರುತ್ತವೆ. ಕೇವಲ ಆರೋಗ್ಯ ಮಾತ್ರವಲ್ಲ ಆರ್ಥಿಕ ಸಮಸ್ಯೆಗಳು, ವಂಚನೆಯ ಸಮಸ್ಯೆಗಳು, ನಂಬಿಕೆ ದ್ರೋಹಗಳು, ಪ್ರೀತಿ ಪ್ರೇಮ ವೈಫಲ್ಯಗಳು, ಯುದ್ದಗಳು, ಭಯೋತ್ಪಾದಕ ಕೃತ್ಯಗಳು, ಪ್ರಾಕೃತಿಕ ವಿಕೋಪಗಳು ಹೀಗೆ ನಾನಾ ಕಷ್ಟಗಳು, ಸೋಲುಗಳು ಪ್ರತಿಯೊಬ್ಬರನ್ನು ಕಾಡುತ್ತಲೇ ಇರುತ್ತದೆ. ಅದರ ರೂಪಗಳು ಬೇರೆ ಇರಬಹುದಷ್ಟೇ……

ಇದರ ಒಟ್ಟು ಸಾರಾಂಶ ಕಷ್ಟಗಳು ಯಾರಿಗೂ ತಪ್ಪಿದ್ದಲ್ಲ. ಆದರೆ ಅದಕ್ಕೆ ಪ್ರತಿಕ್ರಿಯಿಸುವ ವಿವಿಧ ಮಾರ್ಗಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸಾಮಾನ್ಯ ಜನ ಶ್ರೀಮಂತರನ್ನು, ಜನಪ್ರಿಯ ವ್ಯಕ್ತಿಗಳನ್ನು, ದೊಡ್ಡ ಅಧಿಕಾರಸ್ತರನ್ನು, ಧಾರ್ಮಿಕ ನಾಯಕರನ್ನು ಒಂದು ಭ್ರಮಾತ್ಮಕ ಭಾವನೆಯಲ್ಲಿ ನೋಡುತ್ತಿರುತ್ತಾರೆ. ಅವರು ಎಲ್ಲವನ್ನು ಗೆದ್ದವರು. ವಿಶಿಷ್ಟವಾಗಿ, ವಿಶೇಷ ಶಕ್ತಿಯನ್ನು ಹೊಂದಿರುವವರು, ಎಲ್ಲಾ ಕಷ್ಟಗಳಿಂದ ದೂರಾದವರು ಎನ್ನುವ ಒಂದು ಭಾವ ಸಾಮಾನ್ಯ ಜನರಲ್ಲಿ ಇರುತ್ತದೆ. ಆದರೆ ಪ್ರಕೃತಿಗೆ ಇದಾವುದು ತಿಳಿಯುವುದಿಲ್ಲ. ಅದು ಸಹಜವಾಗಿ ತನ್ನ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ…….

ಅನೇಕ ಸಾಮಾನ್ಯ ಜನರನ್ನು ಗಮನಿಸಿ. ಅವರು, ಅವರಿಗೆ ಬಂದಿರುವ ಕಷ್ಟಗಳನ್ನೇ ಬಹುದೊಡ್ಡದು ಎನ್ನುವಂತೆ ಭಾವಿಸಿರುತ್ತಾರೆ. ಎಲ್ಲರೂ ಚೆನ್ನಾಗಿದ್ದಾರೆ, ನನಗೆ ಮಾತ್ರ ಇಷ್ಟೊಂದು ಕಷ್ಟ ಬಂದಿದೆ ಎಂದು ಇತರರನ್ನು ನೋಡುತ್ತಾ, ಒಳಗೊಳಗೆ ಮತ್ತಷ್ಟು ಸಂಕಷ್ಟ ಪಡುತ್ತಾರೆ. ತಮ್ಮ ದುರಾದೃಷ್ಟಕ್ಕೆ ಹಳಿಯುತ್ತಾರೆ…

ಖಾಯಿಲೆಯ, ಹಣಕಾಸಿನ ವಂಚನೆಯ, ಪ್ರೀತಿಯ ನಿರಾಕರಣೆಯ ಒಟ್ಟಿನಲ್ಲಿ ತಮಗಾಗಿರುವುದೇ ಹೆಚ್ಚು ಎಂಬ ಹೋಲಿಕೆಯ ಭಾವನೆ ಅವರಲ್ಲಿ ಖಿನ್ನತೆಯನ್ನು ಉಂಟುಮಾಡುತ್ತದೆ. ಆ ನಿರಾಶೆಯ ಭಾವ ಒಳ್ಳೆಯದಲ್ಲ. ಈ ಸೃಷ್ಟಿಯಲ್ಲಿ ಮನುಷ್ಯರು ಮಾತ್ರವಲ್ಲ ಅನೇಕ ಜೀವರಾಶಿಗಳು ಸಹ ಇದೆ. ಅವುಗಳು ಪ್ರಕೃತಿಯೊಂದಿಗೆ ಪ್ರತಿಕ್ಷಣ ಸಂಘರ್ಷ ಮಾಡುತ್ತಲೇ ಬದುಕುತ್ತಿರುತ್ತವೆ. ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ತಿಂದೇ ಜೀವಿಸುತ್ತದೆ……

ಪ್ರಾಕೃತಿಕ ವಿಕೋಪಗಳು ಸಹ ಮನುಷ್ಯನನ್ನು ನಿರಂತರವಾಗಿ ಕಾಡುತ್ತಿರುತ್ತದೆ. ಅದರ ಜೊತೆಗೆ ಸಾಮಾಜಿಕ ವ್ಯವಸ್ಥೆ ಅನೇಕ ಸವಾಲುಗಳನ್ನು ಒಡ್ಡುತ್ತದೆ. ಯುದ್ಧ, ಭಯೋತ್ಪಾದನೆ, ಅಪಘಾತಗಳು ಅನೇಕ ರೀತಿಯ ಹೊಡೆದಾಟಗಳು, ಎಲ್ಲವನ್ನು ಸಹ ಸಮಾಜ ನಿರಂತರವಾಗಿ ಅನುಭವಿಸುತ್ತದೆ. ಆ ಸಂದರ್ಭದಲ್ಲಿ ಯಾವ ಪ್ರದೇಶದಲ್ಲಿ ನಾವು ವಾಸಿಸುತ್ತಿರುವೆಯೋ ಅದರ ಪರಿಣಾಮವನ್ನು ನಾವು ಅನುಭವಿಸಲೇಬೇಕು. ಉಕ್ರೇನಿನಲ್ಲಿರಲಿ, ಪ್ಯಾಲೆಸ್ಟೈನ್ ನಲ್ಲಿರಲಿ, ಸಿರಿಯಾದಲ್ಲಿರಲಿ, ಆಫ್ಘಾನಿಸ್ತಾನದಲ್ಲಿರಲಿ, ಸುಡಾನ್ ನಲ್ಲಿರಲಿ, ಸ್ವಿಟ್ಜರ್ಲ್ಯಾಂಡ್ ನಿಲ್ಲಿರಲಿ, ನಾರ್ವೆಯಲ್ಲಿರಲಿ, ಅಮೆರಿಕದಲ್ಲಿರಲಿ, ಭಾರತದಲ್ಲಿರಲಿ, ನಮ್ಮ ಹುಟ್ಟು, ನಮ್ಮ ಬೆಳವಣಿಗೆ, ನಮ್ಮ ಅವಶ್ಯಕತೆ, ನಮ್ಮ ಅನಿವಾರ್ಯತೆ, ಎಲ್ಲೆಲ್ಲಿ ಏನೇನಿದೆಯೋ ಅದು ನಮಗೆ ಅನ್ವಯಿಸಿ ಅನುಭವ ಕೊಡುತ್ತದೆ…….

ಇಷ್ಟೇ ಅಲ್ಲ, ಪ್ರತಿ ಕಷ್ಟ ಸುಖಗಳು, ಕ್ರಿಯೆ ಪ್ರತಿಕ್ರಿಯೆಗಳು, ಅದೃಷ್ಟ ದುರಾದೃಷ್ಟಗಳು, ಪ್ರತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ‌. ಈ ತಿಳುವಳಿಕೆ ನಮಗೆ ಮೂಡಿದಾಗ ನಮ್ಮ ಕಷ್ಟಗಳು ಸಹಜವೇ ಅನಿಸುತ್ತದೆ. ಹೋಲಿಕೆಗಳು ಕಡಿಮೆಯಾಗುತ್ತದೆ……

ಒಮ್ಮೆ ನೀವು ಈ ಅಗಾಧವಾದ ಸೃಷ್ಟಿಯಲ್ಲಿ ನಾವು ಒಂದು ಸಣ್ಣ ಅಣುವಿನ ಕಣ ಜೊತೆಗೆ ಸೃಷ್ಟಿಯ ಶಿಶು ಎಂದು ಭಾವಿಸಿದಾಗ ಇಲ್ಲಿನ ಎಲ್ಲಾ ಪರಿಸ್ಥಿತಿಯು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿ ಅತ್ಯುತ್ತಮ, ಸುಂದರ ಕ್ಷಣಗಳ ಜೊತೆಗೆ ಕಷ್ಟಗಳು ಸೇರಿ ಎಲ್ಲವೂ ಇರುತ್ತದೆ. ಅದರೊಂದಿಗೆ ಸಂಘರ್ಷ ಮತ್ತು ಪರಿಣಾಮವನ್ನು ಸ್ವೀಕರಿಸುವುದಷ್ಟೇ ನಮ್ಮ ಕರ್ತವ್ಯ. ಹಿಂದಿನ ಅನೇಕ ಐತಿಹಾಸಿಕ ಘಟನೆಗಳನ್ನು ಗಮನಿಸಿದಾಗ ಈಗ ನಾವಿರುವ ಪರಿಸ್ಥಿತಿಯೇ ಎಷ್ಟೋ ಉತ್ತಮ ಎಂಬ ತೃಪ್ತಿಕರ, ಸಮಾಧಾನಕರ ಮನಸ್ಥಿತಿ ನಮ್ಮದಾದರೆ, ನೆಮ್ಮದಿಯ ಗುಣಮಟ್ಟ, ಸಂತೋಷದ ಕ್ಷಣಗಳು ಹೆಚ್ಚಾಗಬಹುದು. ಕಷ್ಟಗಳ ತೀವ್ರತೆ, ಮನದೊಳಗಿನ ಕೊರಗು ಕಡಿಮೆಯಾಗಬಹುದು…..

ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಿರಾಶಾವಾದ, ವೈರಾಗ್ಯ ಸಾಮಾನ್ಯ ಜನರಲ್ಲಿ, ಸಾಮಾನ್ಯ ವಯಸ್ಸಿನಲ್ಲಿಯೇ ಕಾಡುತ್ತಿದೆ. ಅನೇಕರು ಅದನ್ನು ವ್ಯಕ್ತಪಡಿಸುತ್ತಲೂ ಇದ್ದಾರೆ. ಆದ್ದರಿಂದ ಎಲ್ಲರಲ್ಲೂ ಜೀವನೋತ್ಸಾಹ ಮತ್ತೆ ಪುಟಿದೇಳಲಿ ಎಂದು ಆಶಿಸುತ್ತಾ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!