ಮಾಜಿ ಸಚಿವ, ಜನಪರ ರಾಜಕಾರಣಿ ದಿವಂಗತ ಎಸ್.ಡಿ.ಜಯರಾಂ ಪುತ್ರ ಅಶೋಕ್ ಜಯರಾಂ ಕಮಲ ಹಿಡೀತಾರಾ ಎನ್ನುವ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಣ್ಣದಾಗಿ ಕೇಳಿಬರುತ್ತಿತ್ತು.
ಜೆಡಿಎಸ್ ಎಂದರೆ ಎಸ್. ಡಿ. ಜಯರಾಂ ಮತ್ತವರ ಕುಟುಂಬ ಎಂಬಂತೆ ಇದ್ದ ಪರಿಸ್ಥಿತಿ ಈಗ ನಿಧಾನವಾಗಿ ಬದಲಾಗುತ್ತಿದೆ.
ಈಗ ಅವರು ಜೆಡಿಎಸ್ ಬಿಟ್ಥು ಬಿಜೆಪಿ ನಾಯಕರ ಜೊತೆ ಮಾತನಾಡುತ್ತಿರುವುದು ಏಕೆ? ಯಾವಾಗ ಅವರು ಬಿಜೆಪಿ ಸೇರುತ್ತಾರೆ ಎಂಬುಂದು ಅವರ ಬೆಂಬಲಿಗರು ಸೇರಿದಂತೆ ಜನರಿಗೆ ಯಕ್ಷ ಪ್ರಶ್ನೆಯಾಗಿದೆ.
ಇತ್ತೀಚೆಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕನಾಗಿ ಅಶೋಕ್ ಜಯರಾಂ ಭಾರೀ ಅಂತರದಿಂದ ಆಯ್ಕೆಯಾದ ನಂತರ ಅವರಲ್ಲಿ ಶಾಸಕನಾಗುವ ಹಂಬಲ ಬಲವಾಗಿ ಮೊಳೆತಿದೆ.
ತಂದೆ-ತಾಯಿ ಇಬ್ಬರೂ ಶಾಸಕರಾಗಿದ್ದವರು, ಅದರಲ್ಲೂ ತಂದೆ ಎಸ್.ಡಿ. ಜಯರಾಂ ಹೆಸರು ಜನರ ಮನದಲ್ಲಿ ಈಗಲೂ ಹಸಿರಾಗಿದೆ. ಅವರ ವ್ಯಕ್ತಿತ್ವ ಹಾಗೂ ಜನಪರ ಕೆಲಸಗಳ ಬಗ್ಗೆ ಕ್ಷೇತ್ರದ ಜನ ಈಗಲೂ ಮಾತನಾಡುತ್ತಾರೆ.
ಇಂತಹ ಜನಪರ ಕುಟುಂಬದ ಕುಡಿ, ಅಶೋಕ್ ಜಯರಾಂ ಬಹಳ ಹಿಂದೆಯೇ ಶಾಸಕರಾಗಬೇಕಿತ್ತು.ಆದರೆ ಜೆಡಿಎಸ್ ಪಕ್ಷದಲ್ಲಿ ಅವಕಾಶಗಳು ಸಿಗಲಿಲ್ಲ.
ಹಾಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಿದರು. ಒಕ್ಕಲಿಗರು ನಮ್ಮ ಜಯರಾಮಣ್ಣನ ಮಗ ಅಶೋಕನಿಗೆ ಒಂದು ಮತ ಖಚಿತ ಮಾಡಿಕೊಂಡೇ ಮತಗಟ್ಟೆಗೆ ಬಂದು ಮತ ಹಾಕಿ ಭಾರೀ ಅಂತರದಿಂದ ಗೆಲ್ಲಿಸಿದರು.
ಈಗ ಅಶೋಕ್ ಜಯರಾಂ ಅವರಿಗೆ ತಂದೆಯ ಹಾದಿಯಲ್ಲಿಯೇ ಸಾಗಿ, ಶಾಸಕನಾಗುವ ಉಮೇದು ಮೊಳೆತಿದೆ.
ಆ ಹಿನ್ನಲೆಯಲ್ಲಿ ಬಿಜೆಪಿ ಕಮಲ ಹಿಡಿಯಲು ಮುಂದಾಗಿದ್ದಾರೆ. ಹಲವು ಸಂದರ್ಭಗಳಲ್ಲಿ ಬಿಜೆಪಿ ಸಭೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಬಂದಾಗಲೆಲ್ಲ ಅವರ ಜೊತೆ ಬಹಿರಂಗವಾಗಿಯೇ ಕಾಣಿಸಿ ಕೊಂಡಿರುವ ಅಶೋಕ್ ಜಯರಾಂ ಬಿಜೆಪಿ ಸೇರುವ ಮಾತುಗಳು ಸದ್ದುಮಾಡುತ್ತಿದೆ.
ಆರೋಗ್ಯ ಸಚಿವ ಸುಧಾಕರ್ ಏನಂದ್ರು…!
ಇಂದು ಆರೋಗ್ಯ ಸಚಿವ ಸುಧಾಕರ್ ಅಶೋಕ್ ಜಯರಾಂ ಮನೆಗೆ ಭೇಟಿ ನೀಡಿದ್ದಲ್ಲದೇ, ಅವರಿಬ್ಬರೇ ಕೆಲಕಾಲ ರಹಸ್ಯವಾಗಿ ಮಾತನಾಡಿರುವುದು ಮಂಡ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದೆ.
ಅಶೋಕ್ ಜಯರಾಂ ಜೊತೆಯಲ್ಲಿ ನಿಂತು ಮಾಧ್ಯಮದವರೊಂದಿಗೆ ಮಾತನಾಡಿದ ಸುಧಾಕರ್, ಎಸ್.ಡಿ.ಜಯರಾಂ ಅವರ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿದರು.
ಅಲ್ಲದೆ ಅಶೋಕ್ ಜಯರಾಂ ಅವರಂತಹ ಯುವ ನಾಯಕನನ್ನು ನಮ್ಮ ಪಕ್ಷ ಗುರುತಿಸಿ ಅವರಿಗೆ ಉತ್ತಮ ಭವಿಷ್ಯ ನೀಡುತ್ತದೆ ಎಂದು ಹೇಳಿದ್ದಾರೆ.
ಹೀಗೆ ದಿನೇ ದಿನೇ ಬಿಜೆಪಿ ಪ್ರಭಾವಿ ನಾಯಕರು ಅಶೋಕ್ ಜಯರಾಂ ಅವರ ಜೊತೆ ಮಾತನಾಡುತ್ತಿರುವುದನ್ನು ನೋಡಿದರೆ, ಅವರು ಬಿಜೆಪಿ ಸೇರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ ಎಂಬ ಸುದ್ದಿ ದಟ್ಟವಾಗುತ್ತಿದೆ.
ನೋಡೋಣ…ಈ ಬಗ್ಗೆ ಸ್ಪಷ್ಟ ಚಿತ್ರಣ ಇನ್ನು ಕೆಲದಿನಗಳಲ್ಲಿ ಸಿಗಲಿದೆ. ಎಲ್ಲವನ್ನು ಮುಂದಿನ ಚುನಾವಣೆಯು ನಿರ್ಣಯಿಸುತ್ತದೆ.