Friday, September 20, 2024

ಪ್ರಾಯೋಗಿಕ ಆವೃತ್ತಿ

ವಿಧಾನಸಭಾ ಚುನಾವಣೆ | ಸೋಲು ಕಂಡ ವಿವಿಧ ಪಕ್ಷಗಳ ಪ್ರಭಾವಿ ನಾಯಕರು

ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯಗಳಿಸುವತ್ತ ದಾಪುಗಾಲಿಡುತ್ತಿದ್ದು, ಭ್ರಷ್ಟಾಚಾರ, ಬೆಲೆಏರಿಕೆ ಹಾಗೂ ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷ ಕೊಚ್ಚಿಕೊಂಡು ಹೋಗಿವೆ.

ಇದೇ ಸಂದರ್ಭದಲ್ಲಿ ಮೂರು ಪಕ್ಷಗಳಲ್ಲಿ ಗೆಲ್ಲಲೇಬೇಕಾದ ಅತ್ಯಂತ ಪ್ರಭಾವಿ ಹಾಗೂ ಜನಪ್ರಿಯ ನಾಯಕರು ಹಲವು ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.

ಜಗದೀಶ್ ಶೆಟ್ಟರ್

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟಿಕೆಟ್ ದೊರಕದ ಕಾರಣ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ತಾವು ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಹೇಶ್ ಟೆಂಗಿನಕಾಯಿ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳಿಂದ ಸೋಲು ಕಂಡಿದ್ದಾರೆ. ಜಗದೀಶ್ ಶೆಟ್ಟರ್ ವಿರುದ್ಧ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ತೀವ್ರ ಪ್ರಚಾರ ಕೈಗೊಂಡಿದ್ದರು.

ಕೆ ಆರ್ ರಮೇಶ್ ಕುಮಾರ್

ಮಾಜಿ ಸ್ಪೀಕರ್ ಹಾಗೂ ಶ್ರೀನಿವಾಸ್‌ಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ರಮೇಶ್‌ ಕುಮಾರ್ ಜೆಡಿಎಸ್‌ನ ಜಿ ಕೆ ವೆಂಕಟಾಶಿವಾರೆಡ್ಡಿ ವಿರುದ್ಧ 10 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.

ವಿ ಸೋಮಣ್ಣ

ವೈಯಕ್ತಿನ ವರ್ಚಸ್ಸಿನ ಜೊತೆ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ವಿ ಸೋಮಣ್ಣ ತಮ್ಮ ಕ್ಷೇತ್ರ ಬೆಂಗಳೂರಿನ ಗೋವಿಂದರಾಜನಗರ ಬಿಟ್ಟು ಚಾಮರಾಜನಗರ ಹಾಗೂ ವರುಣಾ ಕ್ಷೇತ್ರಗಳಲ್ಲೂ ಕಣಕ್ಕಿಳಿದಿದ್ದರು. ಆದರೆ ಎರಡೂ ಕ್ಷೇತ್ರಗಳಲ್ಲೂ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ.

ಸಿ ಟಿ ರವಿ

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಲವು ರಾಜ್ಯಗಳ ಚುನಾವಣೆಯಲ್ಲಿ ಉಸ್ತುವಾರಿ ವಹಿಸಿದ್ದ ಸಿ ಟಿ ರವಿ ಪರಾಜಯ ಕಂಡಿದ್ದಾರೆ. ಹಿಂದುತ್ವವಾದಿ ನಾಯಕನೆಂದು ಗುರುತಿಸಿಕೊಂಡು ಕೋಮು ಪ್ರಚೋದಕ ಹೇಳಿಕೆಗಳನ್ನು ನೀಡುವಲ್ಲಿ ಪ್ರಸಿದ್ಧಿ ಪಡೆದಿದ್ದ ಸಿಟಿ ರವಿ, ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸಿನ ತಮ್ಮೇಶ್‌ ಗೌಡರಿಂದ ಸೋಲು ಕಂಡಿದ್ದಾರೆ. ರವಿ ಈ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು.

ನಿಖಿಲ್ ಕುಮಾರಸ್ವಾಮಿ

ರಾಮನಗರದಿಂದ ಸ್ಪರ್ಧಿಸಿದ್ದ ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷರಾಗಿದ್ದ ಹೆಚ್‌ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಕಾಂಗ್ರೆಸ್‌ನ ಹೆಚ್‌ ಎ ಇಕ್ಬಾಲ್‌ ಹುಸೇನ್ ವಿರುದ್ಧ 12 ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾರೆ. 2004ರಿಂದ ಈ ಕ್ಷೇತ್ರದಲ್ಲಿ ಜನತಾ ಪರಿವಾರದ ಅಭ್ಯರ್ಥಿಗಳು ಪ್ರತಿನಿಧಿಸುತ್ತಾ ಬಂದಿದ್ದರು.

ಆರ್‌ ಅಶೋಕ್

ರಾಜ್ಯ ಬಿಜೆಪಿಯ ಪ್ರಭಾವಿ ನಾಯಕರಾದ ಆರ್‌ ಅಶೋಕ್ ಕನಕಪುರ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಪದ್ಮನಾಭ ನಗರದಲ್ಲಿ ಸ್ಪರ್ಧಿಸುತ್ತಿದ್ದ ಅಶೋಕ್‌ ಅವರಿಗೆ ಈ ಬಾರಿ ಕನಕಪುರದಲ್ಲೂ ಟಿಕೆಟ್ ನೀಡಲಾಗಿತ್ತು. ಕಾಂಗ್ರೆಸ್‌ನ ಪ್ರಭಾವಿ ನಾಯಕ ಡಿ ಕೆ ಶಿವಕುಮಾರ್‌ ಅವರ ಮುಂದೆ ಇವರ ಆಟ ನಡೆಯಲಿಲ್ಲ.

ಹೆಚ್‌ ಕೆ ಕುಮಾರಸ್ವಾಮಿ

ಹಾಸನದ ಸಕಲೇಶಪುರ ಕ್ಷೇತ್ರದಿಂದ ಕಳೆದ ಸತತ ಮೂರು ಬಾರಿಯಿಂದ ಶಾಸಕರಾಗಿದ್ದ ಜೆಡಿಎಸ್‌ನ ಪ್ರಭಾವಿ ನಾಯಕ ಹೆಚ್ ಕೆ ಕುಮಾರಸ್ವಾಮಿ ಅವರು ಬಿಜೆಪಿಯ ಸಿಮೆಂಟ್ ಮಂಜು ವಿರುದ್ಧ ಪರಾಭವಗೊಂಡಿದ್ದಾರೆ.

ಬಿ ಶ್ರೀರಾಮುಲು

ಬಿಜೆಪಿಯ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಬಿ ಶ್ರೀರಾಮುಲು ಬಳ್ಳಾರಿ ಕ್ಷೇತ್ರದಿಂದ ಕಾಂಗ್ರೆಸ್‌ನ ಬಿ ನಾಗೇಂದ್ರ ಅವರಿಂದ 28 ಸಾವಿರ ಮತಗಳಿಂದ ಸೋಲುಕಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!