Saturday, May 18, 2024

ಪ್ರಾಯೋಗಿಕ ಆವೃತ್ತಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಿದ ಮೋದಿ : ಮಹಿಳಾ ಕಾಂಗ್ರೆಸ್ ಆಕ್ರೋಶ

ಜಾಗತಿಕ ನಾಯಕ ಎಂದು ಹೇಳಿಕೊಳ್ಳದ ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡದ ತಮ್ಮದೇ ಪಕ್ಷದ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಿದ್ದಾರೆಂದು ಮಂಡ್ಯ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಅಂಜನಾ ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಪಂಚದ 176 ದೇಶಗಳ ವಿಶ್ವ ಕುಸ್ತಿ ಸಂಸ್ಥೆಯೂ ಭಾರತಕ್ಕೆ ನಿಷೇಧ ಹೇರುವ ಎಚ್ಚರಿಕೆ ನೀಡಿದೆ. ಮೋದಿ ಸರಕಾರದಿಂದ ಮಹಿಳಾ ಕುಸ್ತಿಪಟುಗಳು ಅವಮಾನ ಅನುಭವಿಸುವಂತಾಗಿದೆ. ಏಷ್ಯನ್ ಚಾಂಪಿಯನ್ ಶಿಪ್ ಈಗಾಗಲೇ ಭಾರತದಿಂದ ದೂರ ಸರಿದಿದೆ, ಇದಕ್ಕೆ ಮೋದಿ ಸರ್ಕಾರದ ದುರಾಡಳಿತವೇ ಕಾರಣವಾಗಿದೆ ಎಂದು ಕಿಡಿಕಾರಿದರು.

ದೇಶದ ಹೆಮ್ಮೆಯ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ರಕ್ಷಣೆಗೆ ಸ್ವತಃ ನರೇಂದ್ರ ಮೋದಿ ಸರ್ಕಾರವೇ ನಿಂತಿದೆ ಎಂದು ಕಿಡಿಕಾರಿದ ಅವರು, ದೇಶದ ಹೆಮ್ಮೆಯ ಕ್ರೀಡಾಪಟುಗಳನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಪೊಲೀಸರನ್ನು ಬಿಟ್ಟು ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ, ಇದು ಖಂಡನೀಯ. ಸಂತ್ರಸ್ಥ ಕ್ರೀಡಾಪಟುಗಳು ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ ಮಾಡುವುದಕ್ಕೆ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಮತ್ತು ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ನನ್ನು ನೂತನ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಆಹ್ವಾನಿಸಿದ್ದು, ನಾಚಿಕೆಗೇಡಿನ ಸಂಗತಿ. ಹೆಣ್ಣುಮಕ್ಕಳನ್ನು ಬೀದಿಗಳಲ್ಲಿ ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಪ್ರಧಾನಿ ಮೋದಿಯವರ ಸಾಮಾಜಿಕ ಮಾಧ್ಯಮ ತಂಡವು ಪ್ರತಿಭಟನಾ ನಿರತ ಕುಸ್ತಿಪಟುಗಳ ಮಾನಹಾನಿ ಮಾಡಲು ಸುಳ್ಳು ಫೋಟೋಗಳನ್ನು ಹರಡುತ್ತಿದೆ ಎಂದು ದೂರಿದರು.

ಪ್ರಧಾನಿ ಮೋದಿ ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರಜಾಪ್ರಭುತ್ವ ಮತ್ತು ಮಹಿಳೆಯರ ಘನತೆಯ ಬಗ್ಗೆ, ಭಾಷಣಗಳನ್ನು ಮಾಡುತ್ತಿದ್ದರೆ, ಕೆಲವೇ ಕಿಲೋಮೀಟರ್ ದೂರದಲ್ಲಿ, ಅಮಿತ್‌ ಶಾ ನೇತೃತ್ವದಲ್ಲಿ ದೆಹಲಿ ಪೊಲೀಸರು  ಹೆಣ್ಣುಮಕ್ಕಳ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಿದರು, ಲೈಂಗಿಕ ಕಿರುಕುಗಳ ಆರೋಪಿ ಬ್ರಿಜ್ ಭೂಷಣ್ ಜೈಲಿಗೆ ಹೋಗಬೇಕಿತ್ತು. ಬದಲಿಗೆ ನಮ್ಮ ದೇಶದ ಹೆಣ್ಣು ಮಕ್ಕಳನ್ನು ಜೈಲಿಗೆ ಕಳುಹಿಸಲಾಗಿದೆ, ಇದು ಮೋದಿ ಸರ್ವಾಧಿಕಾರ ಕರಾಳ ಆಡಳಿತವಾಗಿದೆ ಎಂದು ಕಿಡಿಕಾರಿದರು.

ಮೋದಿಯವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಮೌನವಾಗಿದ್ದಾರೆ ? ಇದು ಆಕೆಯ ಸಚಿವಾಲಯದ ವ್ಯಾಪ್ತಿಗೆ ಬರುವ ವಿಚಾರವಲ್ಲವೇ? ಸ್ಮೃತಿ ಇರಾನಿ ಅವರು ಸಚಿವರಾಗುವ ಮೊದಲು ಹಣದುಬ್ಬರ, ಮಹಿಳೆಯರ ಸುರಕ್ಷತೆ ಮತ್ತು ನಿರುದ್ಯೋಗದಂತಹ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು, ಆದರೆ ಈಗ ಅವರು ಮೌನವಾಗಿರುವುದು ನಾಚಿಕೆಗೇಡಿನ ಸಂಗತಿ. ಮೋದಿ ಸರ್ಕಾರದ ಮತ್ತೊಬ್ಬ ಮಹಿಳಾ ಸಚಿವ ಮೀನಾಕ್ಷಿ ಲೇಖಿ ಅವರು ಕುಸ್ತಿಪಟುಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸದೇ ಓಡಿ ಹೋದರು. ಇದು ಮೋದಿಯ ಸಂವೇದನಾ ರಹಿತ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.

ಗೋ‍ಷ್ಠಿಯಲ್ಲಿ ಗ್ರಾ.ಪಂ.ಸದಸ್ಯರಾದ ಸುವರ್ಣವತಿ, ಮಹಿಳಾ ಮುಖಂಡರಾದ  ಸುವರ್ಣವತಿ, ವೀಣಾ ಶಂಕರ್, ಹೀನಾ ಹಾಗೂ ಜಯಲಕ್ಷ್ಮಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!