Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರು-ಮೈಸೂರು ಹೆದ್ದಾರಿ ಅವ್ಯವಸ್ಥೆ ಬಗ್ಗೆ ಕೇಂದ್ರ ಸಚಿವರಿಗೆ ದೂರು ನೀಡಿದ ಸಂಸದೆ ಸುಮಲತಾ

ಬೆಂಗಳೂರು-ಮೈಸೂರು ಹೆದ್ದಾರಿ(275) 6 ಪಥದ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಉಂಟಾಗಿರುವ ಅವ್ಯವಸ್ಥೆಗಳ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು, ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದು, ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿಯನ್ನು ತಾವು ಪರಿವೀಕ್ಷಣೆ ನಡೆಸಿದ ಸಂದರ್ಭದಲ್ಲಿ ಹಲವು ತಾಂತ್ರಿಕ ಹಾಗೂ ವಿನ್ಯಾಸದ ಲೋಪದೋಷಗಳಾದ ಅವೈಜ್ಞಾನಿಕ ಚರಂಡಿ ಹಾಗೂ ಸರ್ವಿಸ್ ರಸ್ತೆ ವಿನ್ಯಾಸ, ವಿವಿಧ ಭಾಗಗಳಲ್ಲಿ ಹೆದ್ದಾರಿಗೆ ಅಡ್ಡಲಾಗಿ ಕೆಳಸೇತುವೆಗಳ ನಿರ್ಮಾಣ ಹಾಗೂ ರೈತರು ಕೃಷಿ ಕಾರ್ಯಗಳಿಗೆ ಉಪಯೋಗಿಸುವ ನೀರು ಹರಿಯುವಿಕೆಗೆ ಚರಂಡಿಗಳ ನಿರ್ಮಾಣದ ಬದಲಾಗಿ, ಕಾಂಕ್ರೀಟ್ ಪೈಪ್‌ಗಳನ್ನು ಅವೈಜ್ಞಾನಿಕವಾಗಿ ಅಳವಡಿಕೆ ಮಾಡಿರುವುದನ್ನು ತಮ್ಮ ಪತ್ರದಲ್ಲಿ ಸುಮಲತಾ ಉಲ್ಲೇಖಿಸಿದ್ದಾರೆ.

ಈಗಾಗಲೇ ನೂತನವಾಗಿ ನಿರ್ಮಾಣವಾಗಿರುವ ಸೇತುವೆಗಳು ಬಿರುಕು ಬಿಟ್ಟಿರುವುದು, ಕಳಪೆ ಗುಣಮಟ್ಟದ ಕಾಮಗಾರಿ, ಭಾರಿ ಮಳೆಯಿಂದ ರೈತರಿಗೆ ಹಾಗೂ ಹೆದ್ದಾರಿ ಬಳಕೆದಾರರಿಗೆ ಉಂಟಾದ ಅವ್ಯವಸ್ಥೆಯ ಬಗ್ಗೆ ಗಮನ ಸೆಳೆದಿರುವ ಸಂಸದೆ, ಎಲ್ಲಾ ಸಮಸ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಕೂಡಲೇ ಅಗತ್ಯ ಕ್ರಮ ಕೈಗೊಂಡು ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.

ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ಮನವಿ

ಇದೇ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 75 ಕಿ.ಮೀ. ನಾಗಮಂಗಲ, ಕೆ.ಆರ್ ಪೇಟೆ, ಕೆ.ಆರ್.ನಗರ ಮಾರ್ಗವಾಗಿ ಹಾದು ಹೋಗಿರುವ ಮಾಗಡಿ – ಸೋಮವಾರಪೇಟೆ ರಾಜ್ಯ ಹೆದ್ದಾರಿ SH-85 ಅನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಿ ಅಭಿವೃದ್ಧಿಗೊಳಿಸಲು ಸಂಸದರು ಸಚಿವರನ್ನು ಕೋರಿದ್ದಾರೆಂದು ಸಂಸದರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!