Saturday, May 18, 2024

ಪ್ರಾಯೋಗಿಕ ಆವೃತ್ತಿ

ಭಾರತ್ ಜೋಡೋ ಯಾತ್ರೆಗೆ ಜನಸಾಗರ

ಭವ್ಯ ಭಾರತದ ಭವಿಷ್ಯಕ್ಕಾಗಿ, ದೇಶದ ಆತ್ಮದ ಮರುಸ್ಥಾಪನೆಗಾಗಿ ನಡೆಯುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಇಂದು ಜನ ಸಾಗರವೇ ಹರಿದು ಬಂದಿತು.

ಪಾಂಡವಪುರ ತಾಲ್ಲೂಕಿನ ಬೆಳ್ಳಾಳೆಯಿಂದ ಆರಂಭವಾದ ಪಾದಯಾತ್ರೆ ಉದ್ದಕ್ಕೂ ಎಲ್ಲಿ ನೋಡಿದರೂ ಜನರೇ ಕಾಣುತ್ತಿದ್ದರು.ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಸಾಕಷ್ಟು ಜನರಿಲ್ಲ ಎಂಬ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಲಿ ಮತ್ತು ಮಾಜಿ ಶಾಸಕರಿಗೆ ಕ್ಲಾಸ್ ತೆಗೆದುಕೊಂಡ ಪರಿಣಾಮ ತಮ್ಮ ವಿಧಾನಸಭಾ ಕ್ಷೇತ್ರಗಳಿಂದ ಇಂದು ಜನಸಾಗರವನ್ನೇ ಕರೆತಂದಿದ್ದರು.

ಒಟ್ಟಾರೆ ಇಂದಿನ ಐಕ್ಯತಾ ಯಾತ್ರೆ ಜನಸಾಗರದ ಮಧ್ಯೆ ನಡೆಯಿತು. ರಾಹುಲ್ ಗಾಂಧಿಯ ಜೊತೆ ಅವರ ತಾಯಿ ಸೋನಿಯಾ ಗಾಂಧಿಯವರು ಮಗನೊಂದಿಗೆ ಹೆಜ್ಜೆ ಹಾಕಿದ್ದು,ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಹುಮ್ಮಸ್ಸು ನೀಡಿತ್ತು.

ಹೆಜ್ಜೆ ಹೆಜ್ಜೆಗೂ ಫ್ಲೆಕ್ಸ್, ಕಟೌಟ್

ಹೆಜ್ಜೆ ಹೆಜ್ಜೆಗೂ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು. ಸ್ಥಳೀಯ ಕಾಂಗ್ರೆಸ್ ಮುಖಂಡರು ರಾಷ್ಟ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ಭಾವಚಿತ್ರದೊಂದಿಗೆ ತಮ್ಮ ಭಾವಚಿತ್ರವನ್ನು ಸೇರಿಸಿ ಹೆಜ್ಜೆ ಹೆಜ್ಜೆಗೂ ಫ್ಲೆಕ್ಸ್ ಗಳನ್ನು ಹಾಕಿದ್ದರು. ರಸ್ತೆ ಎರಡು ಬದಿಯಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಾಗೂ ತಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ,ಸೋನಿಯಾ ಗಾಂಧಿಯವರ ಕಟೌಟ್ ಟಗಳನ್ನು ಹಾಕಲಾಗಿತ್ತು.

ನಾಗಮಂಗಲ ತಾಲೂಕಿನ ಚೌಡಗೋನಹಳ್ಳಿ ಗೇಟ್ ಬಳಿ ರೈತರೊಂದಿಗೆ ಸಂವಾದ ನಡೆಸುವ ಸ್ಥಳದಲ್ಲಿ
ಸೋನಿಯಾಗಾಂಧಿ,ರಾಹುಲ್ ಗಾಂಧಿ, ರಣಜಿತ್ ಸಿಂಗ್ ಸುರ್ಜೇವಾಲಾ, ಬಿ.ಕೆ. ಹರಿಪ್ರಸಾದ್, ಸಿದ್ದರಾಮಯ್ಯ ,ಡಿಕೆ ಶಿವಕುಮಾರ್ ಅವರ ಬೃಹತ್ ಕಟೌಟ್ಗಳನ್ನು ಹಾಕಲಾಗಿತ್ತು.

ಜಿಲ್ಲೆಯ ಹಲವು ತಾಲ್ಲೂಕುಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಬಸ್ ಗಳಲ್ಲಿ ಆಗಮಿಸಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಸೇರಿಕೊಂಡು ತಮ್ಮ ಮೆಚ್ಚಿನ ನಾಯಕರ ಪರ ಘೋಷಣೆಗಳನ್ನು ಹಾಕುತ್ತಿದ್ದ ದೃಶ್ಯ ಕಂಡು ಬಂತು. ಜಕ್ಕನಹಳ್ಳಿ ಸರ್ಕಲ್ ನಲ್ಲಿ ಜನರು ಸಾಗರದಂತೆ ಹರಿದು ಬಂದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ರಣಜಿತ್ ಸಿಂಗ್ ಸುರ್ಜೆವಾಲ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ಯೋಗೇಂದ್ರ ಯಾದವ್, ಬಿ.ವಿ ಶ್ರೀನಿವಾಸ್,ಕೆ.ಎಚ್. ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಜನ ಸೇರಿಸಿದ ನಾಯಕರು

ಮಾಜಿ ಸಚಿವ ಚಲುವರಾಯಸ್ವಾಮಿ ನಾಗಮಂಗಲ ಕ್ಷೇತ್ರದ ಸಾವಿರಾರು ಜನರನ್ನು ಪಾದಯಾತ್ರೆಗೆ ಕರೆ ತಂದಿದ್ದರು. ಮತ್ತೊಬ್ಬ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಳವಳ್ಳಿಯಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತಂದಿದ್ದರು. ಕೆ.ಆರ್. ಪೇಟೆ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಹಾಗೂ ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡರ ಅತಿ ಹೆಚ್ಚು ಸಂಖ್ಯೆಯಲ್ಲಿ ಜನರನ್ನು ಪಾದಯಾತ್ರೆಗೆ ಕರೆ ತಂದಿದ್ದರು. ಬೆಂಗಳೂರಿನ ವಿಜಯನಗರ, ಗೋವಿಂದರಾಜ ನಗರ, ಶಾಂತಿನಗರ, ಕುಣಿಗಲ್ ವಿಧಾನಸಭಾ ಕ್ಷೇತ್ರದ ಜನರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಉತ್ಸಾಹ ತುಂಬಿದ ಸೋನಿಯಾ ಗಾಂಧಿ

ಇಂದು ನಡೆದ ಯಾತ್ರೆಯ ಆಕರ್ಷಣೆಯಾಗಿದ್ದ ಸೋನಿಯಾ ಗಾಂಧಿಯವರು ಶಾಸಕಿಯರಾದ ಅಂಜಲಿ ನಿಂಬಾಳ್ಕರ್, ರೂಪ ಶಶಿಧರ್ ಅವರ ಕೈ ಹಿಡಿದು ಹುರಿದುಂಬಿಸಿ ಸ್ವಲ್ಪ ದೂರ ಸಾಗಿ ಉತ್ಸಾಹ ತುಂಬಿದರು.
ಅಂಗವಿಕಲರು, ವೃದ್ಧರು ರಾಹುಲ್ ಗಾಂಧಿಯವರ ಕೈಹಿಡಿದು ಸಂಭ್ರಮಿಸಿದರು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ರಾಹುಲ್ ಗಾಂಧಿಗೆ ಆರತಿ

ಪಾದಯಾತ್ರೆ ವಿವಿಧ ಗ್ರಾಮಗಳ ಬಳಿ ಬಂದ ಸಂದರ್ಭದಲ್ಲಿ ಮಹಿಳೆಯರು ಕಳಸ ಹೊತ್ತು ರಾಹುಲ್ ಗಾಂಧಿ ಅವರಿಗೆ ಆರತಿ ಎತ್ತಿ ಸ್ವಾಗತ ಕೋರುತ್ತಿದ್ದ ದೃಶ್ಯಗಳು ಕಂಡು ಬಂತು.

ಕಬ್ಬಿನ ಹಾಲು,ನೀರಿನ ವ್ಯವಸ್ಥೆ

ಪಾದಯಾತ್ರೆಯಲ್ಲಿ ನಡೆದು ದಣಿವಾದವರಿಗೆ ಕುಡಿಯುವ ನೀರು ಹಾಗೂ ಕಬ್ಬಿನ ಹಾಲಿನ ವ್ಯವಸ್ಥೆಯನ್ನು ಕಾಂಗ್ರೆಸ್ ಮುಖಂಡ ಸಿದ್ಧಾರೂಢ ಸತೀಶ್ ಗೌಡ ಮಾಡಿದ್ದರು.ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರ ಭಾವಚಿತ್ರ ಇರುವ ಟೀ ಶರ್ಟ್ ಗಳನ್ನು ಹಾಕಿಕೊಂಡು ಪಾದಯಾತ್ರೆಯಲ್ಲಿ ಉತ್ಸಾಹದಿಂದ ಕಾಂಗ್ರೆಸ್ ನಾಯಕರಿಗೆ ಜೈಕಾರ ಹಾಕುತ್ತಾ ಸಾಗಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!