Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ತೂರಿದ ಕಲ್ಲುಗಳಿಂದಲೇ ಕನಕದಾಸರ ಪ್ರತಿಮೆ ನಿರ್ಮಾಣ: ರವಿಕುಮಾರ್

ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಕೆರಗೋಡಿನಿಂದ ಮಂಡ್ಯಕ್ಕೆ ಪಾದಯಾತ್ರೆ ನಡೆಸುವ ಸಂದರ್ಭದಲ್ಲಿ ಮಂಡ್ಯದ ಕುರುಬರ ಹಾಸ್ಟೆಲ್ ಮೇಲೆ ಕಿಡಿಗೇಡಿಗಳು ತೂರಿದ ಕಲ್ಲುಗಳಿಂದಲೇ ಕನಕದಾಸರ ಪ್ರತಿಮೆ ನಿರ್ಮಿಸುತ್ತವೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ಮಂಡ್ಯನಗರದ ಕನಕಭವನಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಿಷ್ಣುವಿನ ಅವತಾರ ಕೃಷ್ಣ ಹಾಗೂ ರಾಮ. ಉಡುಪಿಯಲ್ಲಿ ಕೃಷ್ಣ, ಕನಕದಾಸರಿಗೆ ದರ್ಶನ ಕೊಟ್ಟಿದ್ದಾನೆ. ಅಂತಹ ಕನಕದಾಸರ ಫ್ಲೆಕ್ಸ್‌ಗೆ ಕಲ್ಲು ಹೊಡೆದಿದ್ದಾರೆ. ಆ ಕಲ್ಲುಗಳಿಂದಲೇ ಕನಕದಾಸರ ಪ್ರತಿಮೆ ಮಾಡುತ್ತೇವೆ. ಈ ಸಂಬಂಧ ಕುರುಬ ಸಂಘಕ್ಕೆ ಜಾಗ ನೀಡಿ ಎಂದು ಕೇಳಿದ್ದೇನೆ. ಅವರು ಕೊಡುವುದಾಗಿ ತಿಳಿಸಿದ್ದಾರೆ. ಕನಕದಾಸರ ಫ್ಲೆಕ್ಸ್‌ಗೆ ಕಲ್ಲು ಹೊಡೆದು ಪಾಪ ಕೃತ್ಯ ಮಾಡಿದ್ದಾರೆ. ಅಂದು ಹೊಡೆದ ಕಲ್ಲುಗಳನ್ನು ಸಂಗ್ರಹಿಸಿದ್ದಾರೆ. ಪ್ರತಿಮೆಯನ್ನು ಸಿಎಂ ಅವರಿಂದಲೇ ಉದ್ಘಾಟನೆ ಮಾಡಿಸುತ್ತೇವೆ. ಪ್ರತಿದಿನ ಪ್ರತಿಮೆಗೆ ಪೂಜೆ ಮಾಡುತ್ತೇವೆ. ಹಾಸ್ಟೆಲ್‌ನಲ್ಲಿ ಎಲ್ಲ ಧರ್ಮ, ಜಾತಿಯ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕಲ್ಲು ಎಸೆದಿರುವುದರಿಂದ ಕಿಟಕಿಗಳು ಹೊಡೆದು ಹೋಗಿವೆ. ಆಗ ವಿದ್ಯಾರ್ಥಿಗಳಿಗೆ ಪರೀಕ್ಷೆ ಇತ್ತು. ಕಲ್ಲು ಬೀರಿದ್ದರಿಂದ ವಿದ್ಯಾರ್ಥಿಗಳು ಭಯಬೀತರಾಗಿದ್ದಾರೆ ಎಂದು ಅತೃಪ್ತಿ ಹೊರ ಹಾಕಿದ್ದಾರೆ.

ಕೆರಗೋಡು ಗ್ರಾಮದಲ್ಲಿ ಶಾಂತಿ ಕದಡುವುದು ಬೇಡವೆಂದು ನಾನು ಹೋಗಿಲ್ಲ ಅಷ್ಟೇ. ನನಗೆ ಗ್ರಾಮಕ್ಕೆ ಹೋಗಲು ಭಯವಿಲ್ಲ. ಈಗ ಹೋದರೆ ಕೆಲವರು ಪ್ರಚೋದನೆ ಮಾಡುತ್ತಾರೆ. ಆಗ ಮತ್ತೆ ಶಾಂತಿ ಕದಡುವ ರೀತಿಯಾಗುತ್ತದೆ. ಕೆಲವು ದಿನದ ಬಳಿಕ ಹೋಗುತ್ತೇನೆ. ಜನರ ಸಮಸ್ಯೆ ಏನಿದೆ, ಅದನ್ನು ಬಗೆ ಹರಿಸುತ್ತೇನೆ. ನಮ್ಮ ಮಂಡ್ಯದ ಜನರಿಗೆ ಬಾವುಟ, ಧ್ವಜ ಹೋರಾಟ ಇದ್ಯಾವುದು ಗೊತ್ತಿಲ್ಲ. ಕಾವೇರಿ ಹೋರಾಟವಷ್ಟೆ ಗೊತ್ತಿರುವುದು. ಆದರೆ ಕೆಲವರು ಇದನ್ನು ಪ್ರಚೋದನೆ ಮಾಡಿದ್ದಾರೆಂದು ಆರೋಪಿಸಿದರು.

ಬಿಜೆಪಿಯವರಿಗೆ ಈ ಘಟನೆ ದೊಡ್ಡದು ಆಗುತ್ತಿಲ್ಲವೆಂಬ ಚಿಂತೆ ಕಾಡುತ್ತಿದೆ. ಅದಕ್ಕೆ ಅವರು ಧ್ವಜ ಅಭಿಯಾನ ಮಾಡುತ್ತಿದ್ದಾರೆ. ಅವರು ಧ್ವಜ ಕೊಡಲಿ ಎಲ್ಲರೂ ಮನೆ ಮೇಲೆ ಹಾರಿಸಲಿ. ನಾನು ಸಹ ನಮ್ಮ ಮನೆಯ ಮೇಲು ಧ್ವಜ ಹಾರಿಸುತ್ತೇನೆ. ನಾನು ಸಹ ದೇವರ ಭಕ್ತ, ದೇವರ ಪೂಜೆಯನ್ನು ಮಾಡುತ್ತೇನೆ. ನಾನು ಮಾಡುವಷ್ಟು ಪೂಜೆಯನ್ನು ಅವರು ಮಾಡಲ್ಲ. ಭಾನುವಾರದಿಂದ ಇಡೀ ವಾರ ದೇವರ ಪೂಜೆ ಮಾಡುತ್ತೇನೆ. ಮೂರ್‍ನಾಲ್ಕು ಜನರಷ್ಟೇ ಈ ವಿಚಾರದಲ್ಲಿ ತುಪ್ಪ ಸುರಿಯುತ್ತಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೂ ದಾರಿ ತಪ್ಪಿಸಿದ್ದಾರೆ. ಎಚ್‌ಡಿಕೆ ಅವರಿಗೆ ಇದೆಲ್ಲ ಇಷ್ಟವಿಲ್ಲ. ರೈತರು ಹಣ ಹಾಕಿ ಕಟ್ಟಿರುವ ಸ್ತಂಭವೆಂದು ಹೇಳಿರುವುದಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಎಂದ ಅವರು, ಫೆ.7ರ ಬಂದ್ ಕೈ ಬಿಟ್ಟಿರುವುದು ಸ್ವಾಗತ. ಫೆ.9ರಂದು ಬಂದ್ ಮಾಡುವವರನ್ನು ಸಹ ಕೇಳುತ್ತೇನೆ. ಅವರು ಸಹ ಬಂದ್ ಕೈ ಬಿಡಲಿ, ಎಲ್ಲರೂ ಶಾಂತಿಯಿಂದ ಅಭಿವೃದ್ಧಿ ಕಡೆ ಗಮನ ಹರಿಸೋಣ ಎಂದು ಮನವಿ ಮಾಡಿದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ನಗರಸಭೆ ಮಾಜಿ ಸದಸ್ಯ ಮಹೇಶ್, ಕುರುಬ ಸಮುದಾಯದ ದೊಡ್ಡಯ್ಯ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!